ಕೋಚಿಮುಲ್‌ ಚುನಾವಣೆ: 54 ನಾಮಪತ್ರ ಸಿಂಧು

ಸೋಮವಾರ, ಮೇ 27, 2019
33 °C
ಕೆ.ವಿ.ನಾಗರಾಜ್‌– ಹನುಮೇಶ್ ಉಮೇದುವಾರಿಕೆಗೆ ಎದುರಾಳಿಗಳ ಆಕ್ಷೇಪ

ಕೋಚಿಮುಲ್‌ ಚುನಾವಣೆ: 54 ನಾಮಪತ್ರ ಸಿಂಧು

Published:
Updated:
Prajavani

ಕೋಲಾರ: ಕೋಲಾರ–ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಕೋಚಿಮುಲ್) ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನದ ಚುನಾವಣೆಗೆ ಸಲ್ಲಿಕೆಯಾಗಿದ್ದ 54 ನಾಮಪತ್ರಗಳು ಸಿಂಧುವಾಗಿವೆ.

ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ಸೋಮಶೇಖರ್ ಅವರು ಇಲ್ಲಿ ಮಂಗಳವಾರ ಉಮೇದುವಾರರ ಸಮ್ಮುಖದಲ್ಲಿ ನಾಮಪತ್ರ ಪರಿಶೀಲಿಸಿದರು.

ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್‌ ವಿರುದ್ಧದ ಹಳೆಯ ಪ್ರಕರಣ ಸಂಬಂಧ ಹಾಗೂ ಕೋಚಿಮುಲ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಹನುಮೇಶ್ ಅವರು ನಿವೃತ್ತರಾಗುವ ಮುನ್ನವೇ ಡೇರಿಯೊಂದರಲ್ಲಿ ಷೇರುದಾರರಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಎದುರಾಳಿಗಳು ಅವರಿಬ್ಬರ ನಾಮಪತ್ರ ಅಂಗೀಕರಿಸದಂತೆ ಒತ್ತಾಯಿಸಿದರು. ಚುನಾವಣಾಧಿಕಾರಿ ಈ ಸಂಬಂಧ ಸುದೀರ್ಘ ವಿಚಾರಣೆ ನಡೆಸಿ ನಾಮಪತ್ರ ಅಂಗೀಕರಿಸಿದರು.

ಕೆ.ವಿ.ನಾಗರಾಜ್ ಪ್ರಕರಣದಲ್ಲಿ ಹಾಲಿ ನಿರ್ದೇಶಕರಾದ ಜಯಸಿಂಹ ಕೃಷ್ಣಪ್ಪ, ಬೈರಾರೆಡ್ಡಿ, ಮಾಜಿ ನಿರ್ದೇಶಕ ಪ್ರಸನ್ನ ಅವರ ನಾಮಪತ್ರಗಳು ಅಸಿಂಧುವಾಗಬಹುದೆಂದು ಬೆಂಬಲಿಗರು ಆತಂಕಗೊಂಡಿದ್ದರು. ಆದರೆ, ಅಂತಿಮವಾಗಿ ನಾಮಪತ್ರ ಸಿಂಧುವಾಗಿದ್ದರಿಂದ ಉಮೇದುವಾರರು ಹಾಗೂ ಬೆಂಬಲಿಗರು ನಿಟ್ಟುಸಿರು ಬಿಟ್ಟರು.

ಉಳಿದಂತೆ ಒಕ್ಕೂಟದ ಹಾಲಿ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ, ನಿರ್ದೇಶಕರಾದ ರಾಮಕೃಷ್ಣೇಗೌಡ, ಆರ್.ಆರ್.ರಾಜೇಂದ್ರಗೌಡ, ಎಂ.ಬೈರಾರೆಡ್ಡಿ, ಮುನಿಯಪ್ಪ, ಕೆ.ಅಶ್ವತ್ಥರೆಡ್ಡಿ, ವೈ.ಬಿ.ಅಶ್ವತ್ಥನಾರಾಯಣ, ಮಾಜಿ ಅಧ್ಯಕ್ಷರಾದ ಕಾಂತರಾಜ್, ಕಾಡೇನಹಳ್ಳಿ ನಾಗರಾಜ್, ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿರುವ ಹಾಲಿ ನಿರ್ದೇಶಕಿ ಪಾರ್ವತಮ್ಮ, ಸುನಂದಮ್ಮ ಅವರ ನಾಮಪತ್ರ ಅಂಗೀಕರಿಸಲಾಯಿತು.

ಸಂಚು ವಿಫಲ: ನಾಮಪತ್ರ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ವಿ.ನಾಗರಾಜ್‌, ‘ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸಿದ ಮಾಜಿ ಶಾಸಕರಿಗೆ ದೇವರು ಒಳ್ಳೆಯದು ಮಾಡಲಿ. ನನ್ನ ನಾಮಪತ್ರ ಅಸಿಂಧುಗೊಳಿಸಲು ಜೆಡಿಎಸ್ ಮುಖಂಡರು ನಡೆಸಿದ ಸಂಚು ವಿಫಲವಾಗಿದೆ. ಈ ಬೆಳವಣಿಗೆ ಅವರಿಗೆ ತಕ್ಕ ಪಾಠ ಕಲಿಸಿದೆ’ ಎಂದು ಕಿಡಿಕಾರಿದರು.

‘ಜೆಡಿಎಸ್ ಮುಖಂಡರ ಸಂಚು ತಿಳಿದಿದ್ದ ಶಾಸಕ ಕೆ.ಸುಧಾಕರ್ ಅವರು ಕಾನೂನು ತಜ್ಞರೊಂದಿಗೆ ಚರ್ಚಿಸಿ ವಕೀಲರ ಮೂಲಕ ನನ್ನ ಪರವಾಗಿ ವಕಾಲತ್ತು ವಹಿಸಿ ಸಹಕಾರ ನೀಡಿದ್ದಾರೆ. ನಾಮಪತ್ರ ಅಂಗೀಕಾರವಾಗಿರುವುದು ನನಗೆ ಸಿಕ್ಕ ಜಯ. ಕೋಚಿಮುಲ್ ನಿರ್ದೇಶಕ, ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಮೆಗಾ ಡೇರಿ ನಿರ್ಮಾಣದಲ್ಲಿ ನನ್ನ ಕೊಡುಗೆಯಿದೆ’ ಎಂದು ಹೇಳಿದರು.

‘ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಲ್ಲಿ ನನಗಾದ ಅನ್ಯಾಯದಿಂದ ಬೇಸರಗೊಂಡು ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದೆ. ಈ ಕಾರಣಕ್ಕೆ ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ. ಕೋಚಿಮುಲ್ ಚುನಾವಣೆಗೆ ಸ್ಪರ್ಧಿಸಬಾರದೆಂಬ ದುರುದ್ದೇಶದಿಂದ ಹಳೇ ಪ್ರಕರಣ ಮುಂದಿಟ್ಟುಕೊಂಡು ನಾಮಪತ್ರ ಅಸಿಂಧುಗೊಳಿಸುವಂತೆ ಜೆಡಿಎಸ್‌ ನಾಯಕರು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು’ ಎಂದು ಆರೋಪಿಸಿದರು.

ದಂಡ ವಿಧಿಸಿತ್ತು: ‘ನಾನು 2006–07ನೇ ಸಾಲಿನಲ್ಲಿ ಕೋಚಿಮುಲ್ ಅಧ್ಯಕ್ಷನಾಗಿದ್ದಾಗ ಆಸ್ಟ್ರೇಲಿಯಾದಿಂದ ಖರೀದಿಸಿದ್ದ ಬೆಣ್ಣೆ ಉತ್ಪಾದನಾ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಈ ಕಾರಣಕ್ಕೆ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಂಡು ಯಂತ್ರ ವಾಪಸ್ ಕಳುಹಿಸಲಾಗಿತ್ತು. ನಂತರ ಮುಂಬೈ ಬಂದರು ಮೂಲಕ ಬದಲಿ ಯಂತ್ರ ತರಿಸಿಕೊಳ್ಳಲು ವಿಳಂಬವಾಗಿದ್ದರಿಂದ ಕೇಂದ್ರ ಸರ್ಕಾರ ₹ 1.30 ಲಕ್ಷ ದಂಡ ವಿಧಿಸಿತ್ತು. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು’ ಎಂದು ವಿವರಿಸಿದರು.

‘ಕೋಲಾರದ ಸ್ಥಳೀಯ ವ್ಯಕ್ತಿಯೊಬ್ಬರು ಯಂತ್ರ ಆಮದು ಪ್ರಕ್ರಿಯೆಯಲ್ಲಿನ ವಿಳಂಬಕ್ಕೆ ಒಕ್ಕೂಟದ ಆಡಳಿತ ಮಂಡಳಿಯೇ ಜವಾಬ್ದಾರಿ ಎಂದು ಸಹಕಾರ ಇಲಾಖೆ ಜಂಟಿ ನಿಬಂಧಕರಿಗೆ ದೂರು ಕೊಟ್ಟು ತೊಂದರೆ ನೀಡಿದರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಾಕಿ ಉಳಿಸಲಾಗಿತ್ತು: ‘ಪ್ರಕರಣಕ್ಕೆ ಸಂಬಂಧ ಸಹಕಾರ ಇಲಾಖೆ ಜಂಟಿ ನಿಬಂಧಕರು ನೀಡಿದ ನೋಟಿಸ್ ಅನ್ವಯ ಖುದ್ದು ವಿಚಾರಣೆಗೆ ಹಾಜರಾಗಿ ಬಂದರಿನಿಂದ ಯಂತ್ರ ತರುವಲ್ಲಿ ಆಡಳಿತ ಮಂಡಳಿಯಿಂದ ಲೋಪವಾಗಿಲ್ಲ. ಅದಕ್ಕೆ ಆಗಿನ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರೇ ಹೊಣೆ ಎಂದು ವಾದಿಸಿದ ನಂತರ ಪ್ರಕರಣ ಅಂತ್ಯಗೊಳಿಸಲಾಗಿತ್ತು’ ಎಂದು ವಿವರಿಸಿದರು.

ಹಳೆಯ ಪ್ರಕರಣ ಸಂಬಂಧ ಕೆಲವರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದರು. ಆಡಳಿತ ಮಂಡಳಿಯ ನಿರ್ದೇಶಕರಲ್ಲಿ ಕೆಲವರು ಲೋಕಾಯುಕ್ತ ನ್ಯಾಯಾಲಯದಲ್ಲಿ ಹಾಜರಾಗಿ ತಮಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲವೆಂದು ಹೇಳಿಕೆ ನೀಡಿ ಕಾನೂನಿನ ತೂಗುಗತ್ತಿಯಿಂದ ಪಾರಾಗಿದ್ದರು. ಆದರೆ, ನನ್ನ ವಿರುದ್ಧದ ಪ್ರಕರಣವನ್ನು ದುರುದ್ದೇಶಪೂರ್ವಕವಾಗಿ ಬಾಕಿ ಉಳಿಸಲಾಗಿತ್ತು’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !