ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಸಹನೀಯವೇ?

Last Updated 24 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ತಮಿಳುನಾಡಿನ ಶಾಸಕ ಶೇಖರ್ ಅವರು ಫೇಸ್‌ಬುಕ್‌ನಲ್ಲಿ ಪತ್ರಕರ್ತೆಯರ ಬಗ್ಗೆ ಅವಹೇಳನಕಾರಿ ಬರಹ ಹಂಚಿಕೊಂಡು ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತಮಿಳುನಾಡಿನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಪತ್ರಕರ್ತೆಯ ಕೆನ್ನೆ ಸವರಿದಕ್ಕೆ ಆಕೆ ಪ್ರತಿರೋಧಿಸಿದ್ದರು. ಈ ವಿಚಾರ ಖಂಡಿಸಿ ‘ಪ್ರಮುಖ ವ್ಯಕ್ತಿಗಳೊಂದಿಗೆ ಮಲಗದಿದ್ದರೆ, ವರದಿಗಾರ್ತಿ ಅಥವಾ ನಿರೂಪಕಿ ಆಗಲು ಸಾಧ್ಯವಿಲ್ಲ. ವಿಶ್ವವಿದ್ಯಾಲಯಗಳಿಗಿಂತ ಮಾಧ್ಯಮ ಸಂಸ್ಥೆಗಳಲ್ಲೇ ಲೈಂಗಿಕ ದೌರ್ಜನ್ಯಗಳು ಹೆಚ್ಚು ನಡೆಯುತ್ತವೆ’ ಎಂದು ಬರೆದಿದ್ದ ಪೋಸ್ಟ್ ಒಂದನ್ನು ಶಾಸಕ ಶೇಖರ್‌ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು.

ಪತ್ರಕರ್ತರಾಗುವುದೆಂದರೆ ಸಮಾಜದ ಅಂಕುಡೊಂಕು ತಿದ್ದುವ ಆದರ್ಶ ಉದ್ಯೋಗ. ಆಕೆಯ ಮೇಲೆ ಸಮಾಜ ಹಾಗೂ ಆಕೆಯ ಕುಟುಂಬ ವಿಶೇಷ ಗೌರವ, ನಂಬಿಕೆ ಇಟ್ಟುಕೊಂಡಿರುತ್ತದೆ. ಇಂಥ ಹೇಳಿಕೆಯಿಂದ ಪತ್ರಕರ್ತೆಯರ ಭಾವನೆಗೆ ಧಕ್ಕೆಯಾಗುತ್ತದೆ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಹಲವು ಪ್ರತಿರೋಧದ ನಂತರ ಶೇಖರ್‌ ಅವರು ‘ಈ ಹೇಳಿಕೆ ನನ್ನದಲ್ಲ, ನಾನು ಸರಿಯಾಗಿ ಓದದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡುಬಿಟ್ಟೆ’ ಎಂದು ಈಗ ಕ್ಷಮೆ ಕೇಳಿದ್ದಾರೆ. ನಮ್ಮಲ್ಲಿ ಒಂದು ಮಾತಿದೆ ‘ignorance of law is no excuse' ಅಂತ. ಮಹಳೆಯ ಚಾರಿತ್ರ್ಯದ ಬಗ್ಗೆ ಮಾತನಾಡುವ ಇಂಥವರ ಮನಃಸ್ಥಿತಿ ಬಗ್ಗೆ ಕೆಲವರು ತಮ್ಮ ಅಭಿಪ್ರಾಯಗಳನ್ನಿಲ್ಲಿ ಹಂಚಿಕೊಂಡಿದ್ದಾರೆ.

**

ಸ್ವಂತ ಬುದ್ಧಿ ಇಲ್ಲದವರು ಮಾಡುವ ಕೆಲಸವಿದು. ಸ್ವಂತ ಅಭಿಪ್ರಾಯ ಉತ್ಪಾದಿಸುವ ಬೌದ್ಧಿಕ ಸಾಮರ್ಥ್ಯ ಇಲ್ಲದ ರಾಜಕಾರಣಿಗಳು ಹೀಗೆ ಕಂಡಕಂಡವರ ಹೇಳಿಕೆಗಳನ್ನು ಹಂಚಿಕೊಂಡು, ತಾವು ಬಿದ್ದ ಕೊಳಚೆಯನ್ನು ಮತ್ತಷ್ಟು ಜನರಿಗೆ ಎರಚುವ ಕೆಲಸ ಮಾಡುತ್ತಾರೆ.

ಇವರು ಹೊತ್ತುಕೊಂಡು ಮೆರೆಯುತ್ತಿರುವ ಸಂಸ್ಕೃತಿ, ಧರ್ಮವನ್ನು ಪಾಲಿಸುತ್ತಾ ಉಳಿಸಿಕೊಂಡು ಹೋಗುತ್ತಿರುವವಳು ಮಹಿಳೆ. ಮನೆಯಲ್ಲಿ ಇದ್ದರೂ ಕೂಡ ಸಾಮಾಜಿಕ ಚಟುವಟಿಕೆಗಳಿಗೆ ಸಂಘಟಿತರಾಗಿ ಕೆಲಸ ಮಾಡುತ್ತಿರುತ್ತಾರೆ. ಪತ್ರಿಕಾ ವೃತ್ತಿ ಸವಾಲಿನದು. ಇಂಥ ಹೇಳಿಕೆ ನೀಡಿರುವುದನ್ನು ಖಂಡಿಸಬೇಕು.

ಇಂಥವರ ಹೇಳಿಕೆಯಿಂದ ನಮ್ಮ ಆತ್ಮಸ್ಥೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ. ಈ ಆಲೋಚನೆ ಗಂಡಸರಿಗಷ್ಟೇ ಇರಬೇಕಿಲ್ಲ. ಹಲವು ಮಹಿಳೆಯರೂ ಪತ್ರಕರ್ತೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತರೆ. ಇದೊಂದು ದೂಳು ಎಂದು ಕೊಡವಿಕೊಂಡು ಪತ್ರಕರ್ತೆಯರು ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು. ಸಂಸ್ಕಾರ ಇಲ್ಲದ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳಬಾರದು.

–ಉಷಾ ಕಟ್ಟೆಮನೆ, ಬರಹಗಾರ್ತಿ

ಎಲ್ಲರೂ ಖಂಡಿಸಬೇಕು

‘ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣಿನ ಬಗ್ಗೆ ಹೀಗೆ ಮಾತನಾಡುವವರು ಇದ್ದಾರೆ. ಶೇಖರ್‌ ಒಬ್ಬರೇ ಅಲ್ಲ, ಇಂಥ ಮನಸ್ಥಿತಿವುಳ್ಳ ಎಲ್ಲರನ್ನೂ ಧಿಕ್ಕರಿಸಬೇಕು.

ಹೆಣ್ಣುಮಕ್ಕಳ ಬಗ್ಗೆ ಮಾತನಾಡುವಾಗ ಘನತೆ ಕಾಯ್ದುಕೊಳ್ಳಬೇಕು. ಶೇಖರ್‌ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಬರಹ ವಿವಾದಕ್ಕೀಡಾದಾಗ ‘ನಾನು ಅದನ್ನು ಪೂರ್ತಿ ಸರಿಯಾಗಿ ಓದಲಿಲ್ಲ’ ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು. ಇದು ಅವರ ನಿರ್ಲಕ್ಷ್ಯ, ಬೇಜವಾಬ್ದಾರಿತನ ತೋರಿಸುತ್ತದೆ. ಇದು ಜಾರಿಕೊಳ್ಳವ ಪ್ರಯತ್ನ. ಇಂಥ ಹೇಳಿಕೆಯನ್ನು ಪತ್ರಕರ್ತೆಯರು, ಮಹಿಳೆಯರಷ್ಟೇ ಅಲ್ಲ ಮುಖ್ಯವಾಗಿ ಪುರುಷರು ಖಂಡಿಸಬೇಕು. ಪುರುಷರು ಮೌನವಾಗಿದ್ದರೆ ಅವರೆಲ್ಲರೂ ಶೇಖರ್‌ ಅಂಥವರ ವರ್ತನೆ, ನಡವಳಿಕೆಗೆ ಸಮ್ಮತಿಯ ಮುದ್ರೆ ಒತ್ತಿದಂತಾಗುತ್ತದೆ’.

–ಸಂಧ್ಯಾರಾಣಿ, ಹವ್ಯಾಸಿ ಪತ್ರಕರ್ತೆ

**

‘ಅವಮಾನ ಆಗುತ್ತೆ. ಪತ್ರಕರ್ತೆಯರ ಬಗ್ಗೆ ಮಾತನಾಡುವಷ್ಟು ಧೈರ್ಯ ಹೇಗೆ ಬಂತು. ಪ್ರತಿರೋಧಿಸುವಲ್ಲಿ ನಾವು ಹಿಂದೆ ಇದ್ದೀವಿ. ಪತ್ರಕರ್ತೆಯರ ಬಗ್ಗೆ ಮಾತ್ರವಲ್ಲ, ಯಾವುದೇ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಹೊಲಸು ಮನಸ್ಥಿತಿಗಳಿಗೆ ಧಿಕ್ಕಾರ’

–ಮಂಜುಳಾ ಹುಲಿಕುಂಟೆ, ಕಾಪಿ ಎಡಿಟರ್, ಎಲೆಕ್ಟ್ರಾನಿಕ್‌ ಮೀಡಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT