ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ | 46 ವಿಎ ವಾಪಸ್‌ ಕರೆಸಿಕೊಂಡ ಡಿ.ಸಿ

ಶಿಸ್ತು ಕ್ರಮದ ಎಚ್ಚರಿಕೆ–ಕಚೇರಿಯಿಂದ ತೆಗೆದು ಕ್ಷೇತ್ರ ಕಾರ್ಯಕ್ಕೆ ನಿಯೋಜನೆ
Published : 23 ಆಗಸ್ಟ್ 2024, 5:51 IST
Last Updated : 23 ಆಗಸ್ಟ್ 2024, 5:51 IST
ಫಾಲೋ ಮಾಡಿ
Comments

ಕೋಲಾರ: ನಿಯೋಜನೆ ಮೇಲೆ ಉತ್ತರ ಕರ್ನಾಟಕ ಸೇರಿದಂತೆ ತಮಗೆ ಬೇಕಾದ ಜಿಲ್ಲೆಗಳಿಗೆ ತೆರಳಿದ್ದ ಕಂದಾಯ ಇಲಾಖೆಯ 46 ಗ್ರಾಮ ಆಡಳಿತಾಧಿಕಾರಿಗಳನ್ನು (ವಿಎ) ಜಿಲ್ಲಾಧಿಕಾರಿ ಅಕ್ರಂ ಪಾಷಾ ವಾಪಸ್‌ ಕರೆಸಿಕೊಂಡಿದ್ದಾರೆ.

ಕೋಲಾರ ಜಿಲ್ಲಾಡಳಿತದಿಂದ ವೇತನ ಸೇರಿದಂತೆ ಎಲ್ಲಾ ಸೌಲಭ್ಯ ಪಡೆಯುತ್ತಿದ್ದು, ಬೇರೆಡೆ ನಿಯೋಜನೆ ಮೇಲೆ ತೆರಳಿರುವ ತಮ್ಮ ಮೇಲೆ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ಎಚ್ಚರಿಕೆ ನೀಡಿ ಈ ಕ್ರಮ ವಹಿಸಿದ್ದಾರೆ.

ಅಲ್ಲದೇ, ಜಿಲ್ಲೆಗೆ ನಿಯೋಜನೆ ಮೇಲೆ ಬಂದಿದ್ದ ನಾಲ್ವರನ್ನು ವಾಪಸ್‌ ಕಳುಹಿಸಿದ್ದಾರೆ. ಜಿಲ್ಲೆಯಲ್ಲೇ ವಿವಿಧ ಕಚೇರಿಗಳಲ್ಲಿ ಒಳಗೆ ಕುಳಿತು ಕೆಲಸ ಮಾಡುತ್ತಿದ್ದ ಗ್ರಾಮ ಆಡಳಿತಾಧಿಕಾರಿಗಳನ್ನು ಕ್ಷೇತ್ರ ಕೆಲಸಕ್ಕೆ ಕಳುಹಿಸಿದ್ದಾರೆ.

ಜಿಲ್ಲೆಗೆ ಒಟ್ಟು 305 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ ಸದ್ಯ 80 ಹುದ್ದೆಗಳು ಖಾಲಿ ಇವೆ. ಈಗ 45 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ‌

ಕಂದಾಯ ಇಲಾಖೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದ ಸೇರಿ ಒಟ್ಟು 1,000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅರ್ಜಿ ಆಹ್ವಾನಿಸಿತ್ತು.

ಕೋಲಾರ ಜಿಲ್ಲೆಯೊಂದರಲ್ಲೇ 45 ಹುದ್ದೆಗಳಿಗೆ 13,361 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅಕ್ರಂ ಪಾಷಾ ‘ಪ್ರಜಾವಾಣಿ’ಗೆ ತಿಳಿಸಿದರು.

ಎರಡು ಹಂತಗಳಲ್ಲಿ ಪರೀಕ್ಷೆ ಮೂಲಕ ಆಯ್ಕೆ ನಡೆಸಲಾಗುತ್ತಿದೆ. ಮೊದಲ ಹಂತದ ಪರೀಕ್ಷೆ ಸೆ.29 ಹಾಗೂ ಎರಡನೇ ಹಂತದ ಪರೀಕ್ಷೆ ಅ.27ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ.

‘ಕಂದಾಯ ಇಲಾಖೆಯಲ್ಲಿ ಕೈಗೊಂಡು ಮಾರ್ಪಡುಗಳಿಂದಾಗಿ ಕೋಲಾರ ಜಿಲ್ಲೆಯು ಆಟಲ್ ಜನಸ್ನೇಹಿ ಕೇಂದ್ರ, ಸರ್ಕಾರಿ ಜಮೀನುಗಳ ರಕ್ಷಣೆಯ ಲ್ಯಾಂಡ್‌ ಬೀಟ್‌, ರೈತರ ಪಹಣಿಗಳಿಗೆ ಆಧಾರ್‌ ಜೋಡಣೆ, ಅರ್ಜಿ ವಿಲೇವಾರಿ, ಸಕಾಲ ಮುಂದಾದ ಸೇವೆಗಳಲ್ಲಿ ರಾಜ್ಯದಲ್ಲಿ ಅಗ್ರಸ್ಥಾನಕ್ಕೇರಿದೆ. ಆರು ತಿಂಗಳ ಹಿಂದೆ 28ನೇ ಸ್ಥಾನದಲ್ಲಿದ್ದೆವು’ ಎಂದು ಅಕ್ರಂ ಪಾಷಾ ಹೇಳಿದರು.

ಜಿಲ್ಲಾಡಳಿತದ ಕಠಿಣ ಕ್ರಮದಿಂದಾಗಿ ಕಂದಾಯ ಇಲಾಖೆಯಲ್ಲಿ ತ್ವರಿತಗತಿಯಲ್ಲಿ ಕೆಲಸಗಳು ನಡೆಯುತ್ತಿವೆ. ಅರ್ಜಿಗಳ ವಿಲೇವಾರಿಯಲ್ಲಿ ಈಗ ನಾವು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದ್ದೇವೆ

- ಅಕ್ರಂ ಪಾಷಾ ಜಿಲ್ಲಾಧಿಕಾರಿ ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT