ವಿದ್ಯಾರ್ಥಿಗಳು ಭವಿಷ್ಯದ ಪ್ರಜೆಗಳು: ಶಿರೋಳ್

7

ವಿದ್ಯಾರ್ಥಿಗಳು ಭವಿಷ್ಯದ ಪ್ರಜೆಗಳು: ಶಿರೋಳ್

Published:
Updated:
Deccan Herald

ಕೋಲಾರ: ‘ವಿದ್ಯಾರ್ಥಿಗಳು ಭವಿಷ್ಯದ ಪ್ರಜೆಗಳು. ದೇಶ ಬಲಿಷ್ಠಗೊಳಿಸುವಲ್ಲಿ ವಿಧ್ಯಾರ್ಥಿಗಳ ಪಾತ್ರ ನಿರ್ಣಾಯಕ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುರಾಜ್‌ ಜಿ.ಶಿರೋಳ್ ಅಭಿಪ್ರಾಯಪಟ್ಟರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ದೇಶ ಭಕ್ತಿಗೀತೆ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ‘ವಿದ್ಯಾರ್ಥಿಗಳು ಓದಿನ ಜತೆಗೆ ಆರೋಗ್ಯದ ಕಡೆ ಗಮನ ಕೊಡಬೇಕು. ಮಕ್ಕಳು ಆರೋಗ್ಯವಂತರಾಗಿದ್ದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದರು.

‘ಉತ್ತಮ ಹವ್ಯಾಸ ರೂಢಿಸಿಕೊಳ್ಳುವಲ್ಲಿ ಸ್ಕೌಟ್ಸ್- ಮತ್ತು ಗೈಡ್ಸ್ ಸಂಸ್ಥೆ ಚಟುವಟಿಕೆಗಳು ಸಹಕಾರಿ. ಶಾಲೆಗಳಲ್ಲಿ ಪಠ್ಯಕ್ಕೆ ಸೀಮಿತವಾದ ವಿಚಾರವನ್ನಷ್ಟೇ ಕಲಿಯಬಹುದು.- ಆದರೆ, ಸ್ಕೌಟ್ಸ್ ಮತ್ತು ಗೈಡ್ಸ್‌ ಶಿಬಿರಗಳು ಪಠ್ಯೇತರ ವಿಷಯ ಕಲಿಸುತ್ತವೆ. ಜತೆಗೆ ಸ್ಪರ್ಧಾ ಮನೋಭಾವ ಬೆಳೆಸುತ್ತವೆ ಮತ್ತು ಸವಾಲುಗಳನ್ನು ಧೈರ್ಯವಾಗಿ ಎದುರಿಸುವ ವಿಶ್ವಾಸ ಮೂಡಿಸುತ್ತವೆ’ ಎಂದು ಹೇಳಿದರು.

‘ಪೋಷಕರು ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚಿನ ಫಲಿತಾಂಶ ಗಳಿಸಿದರೆ ಸಾಕೆಂಬ ಭಾವನೆಯಲ್ಲಿದ್ದಾರೆ. ಹೆಚ್ಚಿನ ಫಲಿತಾಂಶಕ್ಕಾಗಿ ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ಮಕ್ಕಳು ಖಿನ್ನರಾಗುತ್ತಿದ್ದಾರೆ. ಅಂಕ ಗಳಿಸುವ ಪ್ರಯತ್ನದಲ್ಲಿ ಮಕ್ಕಳ ಬದುಕು ಯಾಂತ್ರಿಕವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ನಗರ ಪ್ರದೇಶದಲ್ಲಿ ದಿನೇ ದಿನೇ ಜನಸಂಖ್ಯೆ ಹೆಚ್ಚುತ್ತಿದ್ದು, ಸಾಕಷ್ಟು ಸಮಸ್ಯೆ ಸೃಷ್ಟಿಯಾಗುತ್ತಿವೆ. ಕಟ್ಟಡಗಳ ಸಂಖ್ಯೆ ವೃದ್ಧಿಸುತ್ತಿದ್ದು, ಮರ ಗಿಡಗಳು ಕಣ್ಮರೆಯಾಗುತ್ತಿವೆ. ಜನಸಂಖ್ಯೆಗೆ ಹೋಲಿಸಿದರೆ ಮರಗಳ ಸಂಖ್ಯೆ ಕಡಿಮೆಯಿದ್ದು, ಶುದ್ಧ ಗಾಳಿ ಸಿಗುತ್ತಿಲ್ಲ. ಇದರಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಶುದ್ಧ ಗಾಳಿಗಾಗಿ ಮಕ್ಕಳು ಗಿಡ ನೆಟ್ಟು ಬೆಳೆಸಬೇಕು’ ಎಂದು ಕಿವಿಮಾತು ಹೇಳಿದರು.

ಮೌಲ್ಯಗಳು ಕುಸಿಯುತ್ತಿವೆ: ‘ಕಂಪ್ಯೂಟರ್‌, ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣಗಳ ದಾಸರಾಗಿರುವ ಮಕ್ಕಳಲ್ಲಿ ದೇಶಭಕ್ತಿ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಮೊಬೈಲ್‌ ಹಾಗೂ ಇಂಟರ್‌ನೆಟ್‌ ಸೌಲಭ್ಯ ದುರ್ಬಳಕೆಯಾಗುತ್ತಿದೆ’ ಎಂದು ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ಜಿಲ್ಲಾ ಸಹಾಯಕ ಆಯುಕ್ತ ಅಶ್ವತ್ಥನಾರಾಯಣ ಹೇಳಿದರು.

‘ಯುವಕ ಯುವತಿಯರು ಅರ್ಥವಿಲ್ಲದ ಸಿನಿಮಾ ಹಾಡುಗಳಿಗೆ ಮಾರು ಹೋಗುತ್ತಿದ್ದಾರೆ. ಸಿನಿಮಾ ಹಾಡುಗಳ ಅಬ್ಬರದ ನಡುವೆ ದೇಶ ಭಕ್ತಿಗೀತೆಗಳು ಮರೆಯಾಗುತ್ತಿವೆ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮಾತ್ರ ದೇಶ ಭಕ್ತಿಗೀತೆ ಕಂಠಪಾಠ ಮಾಡಿಸಿ ಹಾಡಿಸುವ ಪರಿಸ್ಥಿತಿ ಇದೆ’ ಎಂದು ವಿಷಾದಿಸಿದರು.

‘ಸಂಸ್ಥೆಯ ಚಟುವಟಿಕೆಗಳಲ್ಲಿ ಭಾಗಿಯಾಗಲು ಎಲ್ಲಾ ವಯೋಮಾನದವರಿಗೂ ಮುಕ್ತ ಅವಕಾಶವಿದೆ. ಮಕ್ಕಳ ಸರ್ವತ್ತೋಮುಖ ಬೆಳವಣಿಗೆಗೆ ಸಂಸ್ಥೆಯ ಚಟುವಟಿಕೆಗಳು ಪೂರಕ. ಮಕ್ಕಳ ಉತ್ತಮ ಹವ್ಯಾಸ ರೂಢಿಸಿಕೊಂಡು ಸತ್ಪ್ರಜೆಗಳಾದರೆ ಸಂಸ್ಥೆಯ ಆಶಯ ಸಾರ್ಥಕವಾಗುತ್ತದೆ’ ಎಂದು ಸಲಹೆ ನೀಡಿದರು.

ಪ್ರಥಮ ಸ್ಥಾನ: ಬಂಗಾರಪೇಟೆಯ ಜೈನ್ ಇಂಟರ್ ನ್ಯಾಷನಲ್ ಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನ, ಮಾಲೂರು ಸರ್ಕಾರಿ ಬಾಲಕಿಯರ ಶಾಲೆ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ, ಆರ್.ಎಲ್.ಜಾಲಪ್ಪ ಶಾಲೆ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದರು.

ರೋಟರಿ ಸಂಸ್ಥೆ ಕಾರ್ಯದರ್ಶಿ ವೆಂಕಟರವಣಪ್ಪ, ಸ್ಕೌಟ್ಸ್‌ ಗೈಡ್ಸ್‌ ಸ್ಥಾನಿಕ ಆಯುಕ್ತ ಮಹಮ್ಮದ್‌ ಸರ್ದಾರ್, ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು, ಸಂಘಟಕ ವಿಶ್ವನಾಥ್, ಜಂಟಿ ಕಾರ್ಯದರ್ಶಿ ಉಮಾದೇವಿ, ಸುಭಾಷ್ ಶಾಲೆ ಮುಖ್ಯ ಶಿಕ್ಷಕ ವೇಣುಗೋಪಾಲ್, ಶಾಲಾ ಶಿಕ್ಷಕಿ ಸುಧಾ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !