ದಲಿತ ಮುಖಂಡರ ಹೇಳಿಕೆ: ಆತಂಕ ಬೇಡ

7

ದಲಿತ ಮುಖಂಡರ ಹೇಳಿಕೆ: ಆತಂಕ ಬೇಡ

Published:
Updated:

ಕೋಲಾರ: ‘ಸತತ 7 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಕೆ.ಎಚ್‌.ಮುನಿಯಪ್ಪ ಅವರ ವಿರುದ್ಧ ಸಭೆ ನಡೆಸಿ ಸುಳ್ಳು ಆರೋಪ ಮಾಡಿರುವ ದಲಿತ ಮುಖಂಡರು ಕಾಂಗ್ರೆಸ್‌ ಪಕ್ಷದವರಲ್ಲ’ ಎಂದು ಕೆಪಿಸಿಸಿ ಎಸ್ಸಿ ಘಟಕದ ಕಾರ್ಯದರ್ಶಿ ರಾಜಣ್ಣ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯ ಕೆಲ ಪರಿಶಿಷ್ಟ ಜಾತಿಯ ಮುಖಂಡರು ಬೆಂಗಳೂರಿನಲ್ಲಿ ಇತ್ತೀಚೆಗೆ ಸಭೆ ನಡೆಸಿ ಮುನಿಯಪ್ಪ ಅವರನ್ನು ಸೋಲಿಸುತ್ತೇವೆ ಮತ್ತು ಅವರಿಗೆ ಟಿಕೆಟ್ ಸಿಗಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಆ ಮುಖಂಡರಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ’ ಎಂದರು.

‘ದಲಿತ ಮುಖಂಡರ ಹೇಳಿಕೆಗೆ ಪಕ್ಷದ ಕಾರ್ಯಕರ್ತರು ಆತಂಕ ಪಡಬೇಕಿಲ್ಲ. 7 ಬಾರಿ ಗೆಲುವು ಸಾಧಿಸಿರುವ ಮುನಿಯಪ್ಪ ಅವರು ಈ ಬಾರಿಯೂ ಮೈತ್ರಿ ಸರ್ಕಾರದ ಬೆಂಬಲದೊಂದಿಗೆ ಮತ್ತೊಮ್ಮೆ ಸಂಸದರಾಗುತ್ತಾರೆ. ಅಲ್ಲದೇ, ಹಿಂದಿನ ಚುನಾವಣೆಗಿಂತಲೂ ಹೆಚ್ಚಿನ ಮತ ಗಳಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಟ ನಡೆಯುವುದಿಲ್ಲ: ‘ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೆಲ ದಲಿತ ಮುಖಂಡರು ಮುನಿಯಪ್ಪ ಅವರಿಗೆ ವಿರೋಧಿಗಳಾಗುತ್ತಾರೆ. ಆದರೆ, ಅವರ ಆಟ ನಡೆಯುವುದಿಲ್ಲ. ಅವರ ಸಭೆಯಿಂದ ಕ್ಷೇತ್ರದಲ್ಲಿ ರಾಜಕೀಯವಾಗಿ ಯಾವುದೇ ಬದಲಾವಣೆ ಆಗುವುದಿಲ್ಲ’ ಎಂದು ಜಿಲ್ಲಾ ಕಾಂಗ್ರೆಸ್ ಎಸ್‍ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ವ್ಯಂಗ್ಯವಾಡಿದರು.

‘ದಲಿತ ಮುಖಂಡರಾಗಿ ಹಿರಿಯ ದಲಿತ ನಾಯಕನ ಬಗ್ಗೆ ಮಾತನಾಡುವುದು ಸರಿಯಲ್ಲ. ಆ ದಲಿತ ಮುಖಂಡರಿಗೆ ಏನೇ ಸಮಸ್ಯೆ ಇದ್ದರೂ ಬಹಿರಂಗ ಚರ್ಚೆಗೆ ಬರಲಿ. ಅದು ಬಿಟ್ಟು ಬೆಂಗಳೂರಿಗೆ ಹೋಗಿ ರಹಸ್ಯ ಸಭೆ ನಡೆಸುವ ಅಗತ್ಯ ಏನಿದೆ?’ ಎಂದು ಪ್ರಶ್ನಿಸಿದರು.

‘ಮುನಿಯಪ್ಪ ರಾಷ್ಟ್ರ ಮಟ್ಟದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಅವರು ಎಲ್ಲಾ ವರ್ಗದವರಿಗೂ ಸಮಾನ ಅನುಕೂಲ ಕಲ್ಪಿಸಿದ್ದಾರೆ. ಮುಂದಿನ ಚುನಾವಣೆಯಲ್ಲೂ ಗೆಲ್ಲುತ್ತಾರೆ. ದಲಿತ ಮುಖಂಡರ ಸಭೆಗೆ ನಾವು ಭಯ ಪಡುವುದಿಲ್ಲ’ ಎಂದು ಜಿಲ್ಲಾ ಕಾಂಗ್ರೆಸ್‌ ಎಸ್‍ಸಿ ಘಟಕದ ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !