ಕಳಪೆ ಬಿತ್ತನೆ ಬೀಜ ಮಾರಾಟ: ಧರಣಿ

7

ಕಳಪೆ ಬಿತ್ತನೆ ಬೀಜ ಮಾರಾಟ: ಧರಣಿ

Published:
Updated:
Deccan Herald

ಕೋಲಾರ: ಕಳಪೆ ಬಿತ್ತನೆ ಬೀಜ ಮಾರುತ್ತಿರುವ ಕಂಪನಿಗಳು ಹಾಗೂ ನರ್ಸರಿ ಮಾಲೀಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್‌ ಬಣ) ಸದಸ್ಯರು ಇಲ್ಲಿ ಮಂಗಳವಾರ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಎದುರು ಧರಣಿ ನಡೆಸಿದರು.

ಹೂವು ಬಾರದ ಹೂಕೋಸಿನ ಗಿಡಗಳನ್ನು ಕಚೇರಿ ಎದುರು ಸುರಿದ ಧರಣಿನಿರತರು, ‘ತಾಲ್ಲೂಕಿನ ಗರುಡಪಾಳ್ಯದ ಹಲವು ರೈತರು ಜಮೀನುಗಳಲ್ಲಿ ಹೂಕೋಸಿನ ಗಿಡಗಳು ಹೂವು ಬಿಟ್ಟಿಲ್ಲ. ಇದರಿಂದ ಬೆಳೆ ನಷ್ಟವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲೆಯ ರೈತರು ಅಂತರ್ಜಲ ನಂಬಿ ಕೃಷಿ ಮಾಡುತ್ತಿದ್ದಾರೆ. ಬರ ಪರಿಸ್ಥಿತಿಗೂ ಎದೆಗುಂದದೆ ಬೆಳೆ ಬೆಳೆಯುತ್ತಿದ್ದಾರೆ. ಆದರೆ, ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟನಾಶಕ ಮಾರಾಟ ಕಂಪನಿಗಳು, ಅಂಗಡಿಗಳ ಮಾಲೀಕರು ರೈತರನ್ನು ವಂಚಿಸುತ್ತಿದ್ದಾರೆ. ರೈತರಿಗೆ ಕಳಪೆ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಮಾರಲಾಗುತ್ತಿದೆ’ ಎಂದು ಸಂಘಟನೆ ರಾಜ್ಯ ಘಟಕದ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ದೂರಿದರು.

‘ಜಿಲ್ಲೆಯು ಬರಕ್ಕೆ ತುತ್ತಾಗಿದ್ದು, ಸಾಕಷ್ಟು ರೈತರು ಈಗಾಗಲೇ ಬೆಳೆ ಕಳೆದುಕೊಂಡಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ರೈತರು ಬಡ್ಡಿ ಸಾಲ ಮಾಡಿ ಕೃಷಿ ಮಾಡಿದ್ದಾರೆ. ಆದರೆ, ಹೂಕೋಸು ಗಿಡಗಳು ಹೂವು ಬಿಟ್ಟಿಲ್ಲ. ನರ್ಸರಿ ಹಾಗೂ ಅಂಗಡಿಗಳ ಮಾಲೀಕರು ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿದರೆ ರೈತರ ಗತಿ ಏನಾಗಬೇಕು?’ ಎಂದು ಪ್ರಶ್ನಿಸಿದರು.

ದಂಧೆ ವ್ಯಾಪಕ: ‘ಬಿತ್ತನೆ ಬೀಜ ಮಾರಾಟ ಮಳಿಗೆಗಳು ಹಾದಿ ಬೀದಿಯಲ್ಲಿ ತಲೆ ಎತ್ತಿವೆ. ಜಿಲ್ಲೆಯಾದ್ಯಂತ ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟ ದಂಧೆ ವ್ಯಾಪಕವಾಗಿದೆ. ಈ ಅಕ್ರಮದಲ್ಲಿ ಭಾಗಿಯಾಗಿರುವ ಕೃಷಿ ಇಲಾಖೆ ಅಧಿಕಾರಿಗಳು ಸರಿಯಾದ ಮಾಹಿತಿ ಕೊಡುತ್ತಿಲ್ಲ’ ಎಂದು ಧರಣಿನಿರತರು ಆರೋಪಿಸಿದರು.

‘ಕಳಪೆ ಬಿತ್ತನೆ ಬೀಜದಿಂದ ರೈತರಿಗೆ ಆಗಿರುವ ಆರ್ಥಿಕ ನಷ್ಟವನ್ನು ನರ್ಸರಿ ಮಾಲೀಕರೇ ಭರಿಸಬೇಕು. ರೈತರಿಗೆ ಶೀಘ್ರವೇ ಬೆಳೆ ಪರಿಹಾರ ಕೊಡಬೇಕು. ಬಿತ್ತನೆ ಬೀಜ ಗುಣಮಟ್ಟದ ವಿಚಾರದಲ್ಲಿ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಕಳಪೆ ಬಿತ್ತನೆ ಬೀಜ ಮಾರುತ್ತಿರುವ ಅಂಗಡಿಗಳ ಪರವಾನಗಿ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ಸಂಘಟನೆ ರಾಜ್ಯ ಘಟಕದ ಸಂಚಾಲಕ ರಮೇಶ್, ಜಿಲ್ಲಾ ಘಟಕದ ವೀರಭದ್ರಸ್ವಾಮಿ, ಕಾರ್ಯಾಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಬೈರಾರೆಡ್ಡಿ, ಕಾರ್ಯದರ್ಶಿ ನಾರಾಯಣಸ್ವಾಮಿ, ಗೌರವಾಧ್ಯಕ್ಷ ಶಾಮಣ್ಣ, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್.ರಾಮೇಗೌಡ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !