ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರೂ ವ್ಯಾಪಾರಸ್ಥರಾದರೆ ಲಾಭ

ಬೆಳೆ ಸಂವಾದದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಿಂದ ಕೃಷಿ ಪಾಠ
Last Updated 7 ಡಿಸೆಂಬರ್ 2022, 4:25 IST
ಅಕ್ಷರ ಗಾತ್ರ

ಕೋಲಾರ: ‘ಹಿಂದೆ ರೈತರಾಗಿದ್ದೀರಿ, ಈಗಲೂ ರೈತರಾಗಿದ್ದೀರಿ, ಮುಂದೆಯೂ ರೈತರಾಗಿರಿ. ಆದರೆ, ಬೆವರು ಸುರಿಸಿ ಬೆಳೆದ ಬೆಳೆಯನ್ನು ಸಿಕ್ಕಿದ ಬೆಲೆಗೆ ಮಾರಿ ನಷ್ಟ ಮಾಡಿಕೊಳ್ಳಬೇಡಿ. ಉತ್ಪಾದಕರ ಮಾರುಕಟ್ಟೆ ಸಂಘ ಮಾಡಿಕೊಂಡು ಸ್ವತಃ ವ್ಯಾಪಾರಸ್ಥರಾಗಿ. ವಾಹನ ಮಾಡಿಕೊಂಡು ನೀವೇ ಮಾರಿದರೆ ಲಾಭ ಬರಲಾಂಭಿಸುತ್ತದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ಸಲಹೆ
ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ, ತೋಟಗಾರಿಕೆ, ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಕೃಷಿಕ ಸಮಾಜದ ಆಶ್ರಯದಲ್ಲಿ ಮಂಗಳವಾರ ರಂಗಮಂದಿರದಲ್ಲಿ ಆಯೋಜಿಸಿದ್ದ ಕೃಷಿ ಮತ್ತು ತೋಟಗಾರಿಕೆ ಬೆಳೆಯ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ತಮ್ಮ ಕೃಷಿ ಅನುಭವ
ಹಂಚಿಕೊಂಡರು.

ಡ್ರ್ಯಾಗನ್‌ ಫ್ರೂಟ್‌ ಬೆಳೆಯಿರಿ: ‘ವಿಯೆಟ್ನಾಂನಲ್ಲಿ ಡ್ರ್ಯಾಗನ್‌ ಫ್ರೂಟ್‌ ಹೆಚ್ಚಾಗಿ ಬೆಳೆಯುತ್ತಾರೆ. ಭಾರತದಲ್ಲಿ ಮಹಾರಾಷ್ಟ್ರದಲ್ಲಿ ಹೆಚ್ಚಿನ ಬೆಳೆ ಕಾಣಬಹುದು. ರಾಜ್ಯದಲ್ಲಿ ವಿಜಯಪುರದಲ್ಲಿ ಮೊದಲು ಬೆಳೆದರು. 4 ವರ್ಷಗಳಿಂದ ದಕ್ಷಿಣ ಕರ್ನಾಟಕದ ಭಾಗದಲ್ಲಿ ಬೆಳೆಯುತ್ತಿದ್ದಾರೆ. ಬರಡು ಭೂಮಿಯಲ್ಲೂ ಡ್ರ್ಯಾಗನ್ ಫ್ರೂಟ್ ಬೆಳೆಯಬಹುದು. ಒಂದು ಎಕರೆ ಬೆಳೆಯಿರಿ ಸಾಕು. ನೀರು ಹೆಚ್ಚೇನು ಬೇಕಿಲ್ಲ’ ಎಂದು
ವಿವರಿಸಿದರು.

‘ಒಂದು ಎಕರೆ ಡ್ರ್ಯಾಗನ್‌ ಫ್ರೂಟ್‌ ಬೆಳೆಯಲು ₹ 3 ಲಕ್ಷ ಖರ್ಚು ಬರುತ್ತದೆ. ಎಕರೆಗೆ 1,400 ಗಿಡ ಬೇಕು. 20 ವರ್ಷ ಈ ಬೆಳೆ ಇರುತ್ತದೆ. ಮೊದಲ ವರ್ಷ ಮಾತ್ರ ಬಂಡವಾಳ ಹೂಡಬೇಕು. ನೀರು ನಿಂತರೆ ಕೊಳೆಯುತ್ತದೆ. ಕಾಂಪೋಸ್ಟ್‌ನಲ್ಲಿ ಬೇರು ಇರಬೇಕು, ಮಣ್ಣಿಗೆ ತಾಗಬಾರದು. 2 ಎಕರೆಯಲ್ಲಿ 28 ಟನ್ ಹಣ್ಣು ಬರುತ್ತದೆ.‌ 1 ಕೆ.ಜಿ.ಕೆಂಪು ಹಣ್ಣಿಗೆ ₹ 130ರವರೆಗೆ ಬೆಲೆ ಇದೆ. 2 ಎಕರೆಗೆ ₹ 25 ಲಕ್ಷ ಬರುತ್ತದೆ. ತಳಿ ಹಳದಿ ಹಣ್ಣಿಗೆ ಕೆ.ಜಿಗೆ ₹ 400 ಇದೆ. ರಾಸಾಯನಿಕ ಗೊಬ್ಬರ ಹಾಕದೆ ಕಾಂಪೋಸ್ಟ್ ಗೊಬ್ಬರ ಬಳಸಿ. ಒಂದು ವರ್ಷದಲ್ಲಿ ಬೆಳೆ ಬರುತ್ತದೆ. ನರೇಗಾದಲ್ಲಿ ಸಬ್ಸಿಡಿ ಕೂಡ ಸಿಗುತ್ತದೆ’ ಎಂದರು.

ಸ್ಟ್ರಾಬೆರಿಯಿಂದಲೂ ಲಾಭ: ‘ಸ್ಟ್ರಾಬೆರಿ ಬೆಳೆಯುವುದು ಸುಲಭ. ಮಹಾಬಲೇಶ್ವರದಿಂದ ಗಿಡ ತರಿಸಿದ್ದು, ಅಲ್ಲಿ ಹೆಚ್ಚು ಬೆಳೆಯುತ್ತಾರೆ. ನಾಟಿ ಮಾಡಿದ 45 ದಿನಗಳಲ್ಲಿ ಹಣ್ಣನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬಹುದು. ಎಕರೆಗೆ ‌₹ 6ರಿಂದ 8 ಲಕ್ಷ ಸಿಗುತ್ತದೆ. ‌₹ 2.5 ಲಕ್ಷ ವೆಚ್ಚವಾಗುತ್ತದೆ. 200 ಗ್ರಾಂ ಬಾಕ್ಸ್‌ಗೆ ₹ 60 ನೀಡುತ್ತಾರೆ. ನವೆಂಬರ್ ತಿಂಗಳಲ್ಲಿನಾಟಿ ಮಾಡಬೇಕು.ಮಳೆಗಾಲ ಇರಬಾರದು’ ಎಂದು ವಿವರಿಸಿದರು.

ಬೆಣ್ಣೆ ಹಣ್ಣು ಕೃಷಿ ಸುಲಭ: ‘ಬಟರ್‌ ಫ್ರೂಟ್‌ ಅಥವಾ ಬೆಣ್ಣೆ ಹಣ್ಣು ಸುಲಭವಾಗಿ ಬೆಳೆಯಬಹುದಾದ ಬೆಳೆ. ಆ್ಯಷ್ ಪ್ರಭೇದದ ಬಟರ್ ಫ್ರೂಟ್‌ಗೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 1,200ರವರೆಗೆ ದರವಿದೆ. 1 ಎಕರೆಗೆ 300 ಗಿಡ ನೆಡಬೇಕಾಗುತ್ತದೆ. 3 ವರ್ಷ ಕಾದರೆ ಲಾಭ ಸಿಗಲಾರಂಭಿಸುತ್ತದೆ. ಒಂದು ಸಸಿ ದರ ₹ 750 ಇದೆ. ಫ್ಲಾರಿಡಾ ಗೋಲ್ಡ್ ಇನ್ನೊಂದು ತಳಿಯಾಗಿದೆ’ ಎಂದರು.

ಜುಕುನಿ ಬೆಳೆ ಬಗ್ಗೆ ಮಾತನಾಡಿ, ಅರ್ಧ ಎಕರೆಯಲ್ಲಿ ಬೆಳೆದು ನೋಡಿ. ನಿರಂತರವಾಗಿ ಲಾಭ ಬರುತ್ತಲೇ ಇರುತ್ತದೆ. ಇದಕ್ಕೂ ನರೇಗಾದಡಿ ಸಬ್ಸಿಡಿ ಸಿಗುತ್ತದೆ ಎಂದು ಸಲಹೆ ನೀಡಿದರು.

ರೈತರು ಏಕೆ ಮಾರಾಟಗಾರರಬೇಕು?

‘ರೈತರು ತಿಂಗಳುಗಟ್ಟಲೇ ಬೆವರು ಸುರಿಸಿ ಬೆಳೆದ ಟೊಮೆಟೊವನ್ನು ಮಂಡಿಗೆ ಹೋಗಿ ಕೆ.ಜಿಗೆ ₹ 10ರಂತೆ ಮಾರಾಟ ಮಾಡುತ್ತಾರೆ. ಅದನ್ನು ಖರೀದಿಸುವ ವ್ಯಕ್ತಿ ಬೆಳಿಗ್ಗೆ ಎದ್ದು ವಾಹನದಲ್ಲಿ ಹಾಕಿಕೊಂಡು ಬಡಾವಣೆಗಳಲ್ಲಿ ಕೆ.ಜಿ‌ಗೆ ₹ 40ರಂತೆ ಮಾರಾಟ‌ ಮಾಡುತ್ತಾನೆ. ಹೀಗಾಗಿ, ರೈತರೇ ಮಾರಾಟಗಾರರಾದರೆ ಬೆಳೆದ ಬೆಳೆಗೆ ಲಾಭ ಬರುವುದಿಲ್ಲವೇ’ ಎಂದು ಡಿ.ದೇವರಾಜ್‌ ಉದಾಹರಣೆ ಸಮೇತ ವಿವರಿಸಿದರು.

*********

‘ಎಲ್ಲರೂ ಟೊಮೆಟೊ ಬೆಳೆದರೆ ನಷ್ಟ’

‘ಎಲ್ಲರೂ ಟೊಮೆಟೊ ಬೆಳೆದು ಅದನ್ನು ಮಾರುಕಟ್ಟೆ ತೆಗೆದುಕೊಂಡ ‌ಹೋದರೆ ನಷ್ಟವಾಗುತ್ತದೆ. ಪೂರ್ತಿಯಾಗಿ ಅಲ್ಲದಿದ್ದರೂ ಟೊಮೆಟೊ‌ ಅವಲಂಬನೆ ಕಡಿಮೆ‌ ಮಾಡಬೇಕು ಅಷ್ಟೆ. ಲಾಭ ಬಂತೆಂದು ಎಲ್ಲರೂ ಟೊಮೆಟೊ ಹೆಚ್ಚು ಬೆಳೆದು ಮುಂದಿನ ವರ್ಷ ನಷ್ಟ ಅನುಭವಿಸಬೇಡಿ. ಹೀಗಾಗಿ, ಪರ್ಯಾಯ ಬೆಳೆ ಬೆಳೆದು ನೋಡಿ' ಎಂದು ದೇವರಾಜ್‌ ಸಲಹೆ ನೀಡಿದರು.

‘100 ಜನ ಬೆಳೆದರೆ ನೂರೂಜನರಿಗೆನಷ್ಟ. 100 ರಲ್ಲಿ 60 ಮಂದಿ ಟೊಮೆಟೊ ಬೆಳೆಯಿರಿ, 40 ಮಂದಿ ಬೇರೆ ಬೆಳೆ ಬೆಳೆಯಿರಿ’ ಎಂದರು.

**********

ಕೃಷಿ ಅನುಭವ ಹಂಚಿಕೊಂಡ ಎಸ್ಪಿ

ಡಿ.ದೇವರಾಜ್‌ ಅವರು ಕೋಲಾರ ತಾಲ್ಲೂಕಿನ ಕೋರಗಂಡನಹಳ್ಳಿಯ ತಮ್ಮ ಜಮೀನಿನಲ್ಲಿ ಬೆಳೆದಿರುವ ಡ್ರ್ಯಾಗನ್ ಫ್ರೂಟ್, ಬಟರ್‌ ಫ್ರೂಟ್‌ (ಬೆಣ್ಣೆ ಹಣ್ಣು), ಸ್ಟ್ರಾಬೆರಿ ಹಾಗೂ ಜುಕುನಿ ಬೆಳೆಯ ವಿಡಿಯೊ ತೋರಿಸಿದರು. ತಮ್ಮ ಕೃಷಿ ಅನುಭವವನ್ನು ರೈತರೊಂದಿಗೆ ಹಂಚಿಕೊಂಡು ಕನಿಷ್ಠ ಒಂದು ಎಕರೆಯಲ್ಲಾದರೂ ಈ ಬೆಳೆಗಳನ್ನು ಬೆಳೆದು ನೋಡಿ ಎಂದು ಸಲಹೆ ನೀಡಿದರು.

‘ನಾವು ಬೆಂಗಳೂರಿನ ಹೆಸರಘಟ್ಟ ಗ್ರೀನ್ಸ್ ದಿ ಫಾರ್ಮರ್ ಎಂಬ ಕಂಪನಿ ಆರಂಭಿಸಿದ್ದೇವೆ. ಬೆಳೆ ಬೆಳೆದು ನಾವೇ ಮಾರುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT