ಮಂಗಳವಾರ, ಸೆಪ್ಟೆಂಬರ್ 21, 2021
29 °C
ರೈತರು ಸ್ವಾಭಿಮಾನಿಗಳು

ಕೋಲಾರ ಜಿಲ್ಲೆಯು ಕೃಷಿಯಲ್ಲಿ ಇಸ್ರೇಲ್‌ಗೆ ಮಾದರಿ: ಸಂಸದ ಮುನಿಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯು ಕೃಷಿಯಲ್ಲಿ ಇಸ್ರೇಲ್‌ ದೇಶಕ್ಕೆ ಮಾದರಿಯಾಗಿದೆ. ಯಾವುದಕ್ಕೂ ಧೃತಿಗೆಡದ ಜಿಲ್ಲೆಯ ರೈತರು ಸ್ವಾಭಿಮಾನಿಗಳು’ ಎಂದು ಸಂಸದ ಎಸ್‌.ಮುನಿಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕೃಷಿ ಪರಿಕರಗಳ ವಿತರಣಾ ಸೇವೆ ಡಿಪ್ಲೊಮಾ ಕೋರ್ಸ್‌ನಲ್ಲಿ ಪದವಿ ಪಡೆದ ಕೃಷಿ ಪರಿಕರಗಳ ಮಾರಾಟಗಾರರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿ, ‘ಗಟ್ಟಿತನದಿಂದ ಕೂಡಿರುವ ಜಿಲ್ಲೆಯ ರೈತರು ಸಮಸ್ಯೆಗೆ ಹೆದರಿ ಇತರೆ ಜಿಲ್ಲೆಯ ರೈತರಂತೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬರ ಪರಿಸ್ಥಿತಿ ನಡುವೆಯೂ ಎದೆಗುಂದದೆ ಕೃಷಿ ನಿರ್ವಹಣೆ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕೃಷಿ ಪರಿಕರಗಳ ಮಾರಾಟಗಾರರು ಡಿಪ್ಲೊಮಾ ಪದವಿ ಪಡೆದು ವ್ಯಾಪಾರಕ್ಕೆ ಸೀಮಿತವಾಗದೆ ತಮ್ಮ ಜ್ಞಾನವನ್ನು ಗ್ರಾಮೀಣ ಭಾಗದ ರೈತರಿಗೆ ಧಾರೆ ಎರೆಯಬೇಕು. ರೈತರ ಆದಾಯ ದ್ವಿಗುಣಗೊಳ್ಳುವಂತೆ ಮಾಡಿದರೆ ಮಾತ್ರ ಪದವಿ ಪಡೆದದ್ದು ಸಾರ್ಥಕವಾಗುತ್ತದೆ. ರೈತರಿಗೆ ಕೃಷಿ ಸಂಬಂಧ ಅಗತ್ಯ ತಿಳಿವಳಿಕೆ ನೀಡಿದರೆ ಹೆಚ್ಚಿನ ಬೆಳೆ ಬೆಳೆದು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತರೆ’ ಎಂದು ಹೇಳಿದರು.

‘ರೈತರು ದೇಶದ ಬೆನ್ನೆಲುವು ರೈತರು ಉಳಿದರೆ ಮಾತ್ರ ಮನುಕುಲ ಉಳಿಯುತ್ತದೆ. ಕೃಷಿಯಿಂದ ಮಾತ್ರ ಆಹಾರ ಸ್ವಾವಲಂಬನೆ ಸಾಧ್ಯ. ಎಂಬಿಬಿಎಸ್ ಪದವಿ ಮುಗಿಸಿರುವ ವೈದ್ಯರಿಗೆ ಈಗ ಬೇಡಿಕೆಯಿಲ್ಲ. ಆದರೆ, ರೈತರಿಗೆ ಕೃಷಿ ಸಂಬಂಧಿತ ಮಾಹಿತಿ ನೀಡುವ ಕೃಷಿ ಪರಿಕರ ಮಾರಾಟಗಾರರಿಗೆ ಬೇಡಿಕೆಯಿದೆ’ ಎಂದು ತಿಳಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರವು ರೈತಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ರೈತರಿಗೆ ಎಲ್ಲಾ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಕೃಷಿ ಕ್ಷೇತ್ರಕ್ಕೆ ಬಲ ತುಂಬಬೇಕು. ಎಪಿಎಂಸಿಗಳಲ್ಲಿ ಕಮಿಷನ್‌ ಹಾಗೂ ದಲ್ಲಾಳಿಗಳ ದಂದೆಗೆ ಕಡಿವಾಣ ಹಾಕಿ. ರೈತರ ಕೃಷಿ ಉತ್ಪನ್ನಗಳಿಗೆ ನೇರವಾಗಿ ಬೆಲೆ ಸಿಗಬೇಕು’ ಎಂದು ಸೂಚಿಸಿದರು.

ತಾಂತ್ರಿಕ ತರಬೇತಿ: ‘ಕೇಂದ್ರ ಸರ್ಕಾರ ದೇಸಿ ತರಬೇತಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ. ಇದರ ಭಾಗವಾಗಿ ರೈತರಿಗೆ ತಾಂತ್ರಿಕ ಮಾಹಿತಿ ಕೊಡಲು 2000ರಲ್ಲಿ ಸಮಿತಿ ಆರಂಭಿಸಲಾಗಿದೆ. ಗ್ರಾಮೀಣ ಭಾಗದ ಪ್ರಗತಿಪರ ರೈತರಿಗೆ ತಾಂತ್ರಿಕ ತರಬೇತಿ ನೀಡಲಾಗುತ್ತಿದೆ’ ಎಂದು ಕೃಷಿ ಪರಿಕರಗಳ ವಿತರಣಾ ಸೇವೆ ಡಿಪ್ಲೊಮಾ (ಡಿಎಇಎಸ್‍ಐ) ರಾಜ್ಯ ನೋಡಲ್‌ ಅಧಿಕಾರಿ ಜಿ.ಆರ್.ಪೆನ್ನೂಬಳಿಸ್ವಾಮಿ ವಿವರಿಸಿದರು.

‘ಜಿಲ್ಲೆಯಲ್ಲಿ ಶೇ 20ರಷ್ಟು, ಇತರೆ ಜಿಲ್ಲೆಗಳಲ್ಲಿ ಶೇ 80ರಷ್ಟು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಶೇ 16ರಷ್ಟು ರೈತರು ತಾಂತ್ರಿಕ ತರಬೇತಿ ಪಡೆಯುತ್ತಿದ್ದಾರೆ. ಸಂಸ್ಥೆಯಿಂದ ಈವರೆಗೆ ರಾಜ್ಯದಲ್ಲಿ 6,334 ಮಂದಿಗೆ 158 ತಂಡಗಳಾಗಿ ತರಬೇತಿ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಬಿ.ಜೆ ಪ್ರಕಾಶ್, ದೇಸಿ ಸಂಸ್ಥೆ ಸಹ ವಿಸ್ತರಣಾ ನಿರ್ದೇಶಕ ಟಿ.ಬಿ.ಬಸವರಾಜು, ಸಹಾಯಕ ಕೃಷಿ ಅಧಿಕಾರಿ ರವಿಕುಮಾರ್, ಹಿರಿಯ ವಿಜ್ಞಾನಿ ಕೆ.ತುಳಸಿರಾಮ್, ಸಹಾಯಕ ಪ್ರಾಧ್ಯಾಪಕ ನಾಗರಾಜ್, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು