ಕೋಲಾರ: ಜಿಲ್ಲೆಯ ನಗರ ಹಾಗೂ ಗ್ರಾಮಾಂತರದ ವಿವಿಧೆಡೆ ಗಣೇಶ ಮೂರ್ತಿಯನ್ನು ತಂದು ಪೆಂಡಾಲ್‌ಗಳಲ್ಲಿ, ಮನೆಗಳಲ್ಲಿ ಪ್ರತಿಷ್ಠಾಪಿಸುವ ಅಂತಿಮ ಹಂತದ ಸಿದ್ಧತೆ ಜೋರಾಗಿ ನಡೆದಿದೆ.
ಶುಕ್ರವಾರ ಗೌರಿ ಹಬ್ಬ ಮುಗಿದಿದ್ದು, ಶನಿವಾರ ಗಣೇಶ ಚತುರ್ಥಿ ಹಬ್ಬ ನಡೆಯಲಿದೆ. ಅದಕ್ಕಾಗಿ ವಿಭಿನ್ನ ರೂಪಗಳ, ವಿವಿಧ ಅವತಾರಗಳ ಆಕರ್ಷಕ ಗಣೇಶಮೂರ್ತಿಯನ್ನು ತಯಾರಿಸಿ ಭಕ್ತರನ್ನು ಸೆಳೆಯಲಾಗುತ್ತಿದೆ. ಪೆಂಡಾಲ್‌ಗಳಲ್ಲಿ ವೈವಿಧ್ಯಮಯ ರೂಪಕಗಳನ್ನು ಮಾಡಿ ಹಬ್ಬಕ್ಕೆ ಮೆರುಗು ಹೆಚ್ಚಿಸಲಾಗುತ್ತಿದೆ.
ಈ ಬಾರಿ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಗಣೇಶ ಮೂರ್ತಿ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಹಿಂದಿನ ವರ್ಷ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪಕ್ಕ ವಿಗ್ರಹ ಮಾರಾಟ ಮಾಡುತ್ತಿದ್ದರು.
ಅರ್ಧ ಅಡಿಯಿಂದ ಹಿಡಿದು 15 ಅಡಿವರೆಗಿನ ಮೂರ್ತಿಗಳು ಮಾರಾಟವಾಗುತ್ತಿವೆ. ಕೆಲವರು ಮೊದಲೇ ಬುಕ್ಕಿಂಗ್ ಮಾಡಿದ್ದರು. 12 ಅಡಿ ಗಣಪತಿಗೆ ₹ 30 ಸಾವಿರವರೆಗೆ ಬೆಲೆ ಇದೆ. ಮನೆಯಲ್ಲಿ ಕೂರಿಸುವ ಸಣ್ಣ ಮೂರ್ತಿಗಳ ಜೊತೆಗೆ ಸಾರ್ವಜನಿಕ ಉತ್ಸವಗಳಿಗೆಂದೇ ದೊಡ್ಡ ಗಾತ್ರದ ಮೂರ್ತಿ ತಂದಿಟ್ಟಿದ್ದಾರೆ. ಗಣೇಶ ಮೂರ್ತಿ ಖರೀದಿ ವಹಿವಾಟು ಶುಕ್ರವಾರ ಜೋರಾಗಿತ್ತು.
‘ಈ ವರ್ಷ ಸ್ಥಳ ಬದಲಾಗಿದ್ದರಿಂದ ಜನರಿಗೆ ಗೊತ್ತಾಗುತ್ತಿಲ್ಲ. ಹೀಗಾಗಿ, ಆರಂಭದಲ್ಲಿ ಗ್ರಾಹಕರು ಬರಲಿಲ್ಲ. ಒಂದು ನಿರ್ದಿಷ್ಟ ಸ್ಥಳ ನಿಗದಿಪಡಿಸಬೇಕು. ಗಣಪನ ಮೂರ್ತಿಗೆ ಹೋದ ವರ್ಷದಷ್ಟೇ ದರ ಇದೆ. ಯಾವುದೇ ಬದಲಾವಣೆ ಆಗಿಲ್ಲ’ ಎಂದು ವ್ಯಾಪಾರಿ ಹರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ನಗರದ ಬಸ್ ನಿಲ್ದಾಣದ ಪಕ್ಕದ ಕೀಲುಕೋಟೆ ಆಂಜನೇಯಸ್ವಾಮಿ ದೇವಾಲಯ ಮುಂಭಾಗ, ಟೇಕಲ್ ರಸ್ತೆಯಲ್ಲೂ ಗಣಪನ ಮೂರ್ತಿಗಳ ಮಾರಾಟ ಜೋರಾಗಿ ನಡೆದಿದೆ.
ಗಣಪನ ಪ್ರತಿಷ್ಠಾಪನೆ ನಿಟ್ಟಿನಲ್ಲಿ ಯುವಕರಲ್ಲಿ ಹಬ್ಬದ ಖುಷಿ ಮನೆಮಾಡುವಂತಾಗಿದೆ. ಯುವಕ ಮಂಡಲಿ, ಸಂಘ–ಸಂಸ್ಥೆಗಳು ಅಂತಿಮ ಸಿದ್ಧತೆ ಮಾಡಿಕೊಂಡಿವೆ. ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅಂತಿಮ ಪೆಂಡಾಲ್ ನಿರ್ಮಿಸಲಾಗುತ್ತಿದೆ. ಇನ್ನು ಮನೆಗಳಲ್ಲಿಯೂ ಸಣ್ಣ ಗಾತ್ರದ ಗಣೇಶಮೂರ್ತಿ ಇಟ್ಟು ಪೂಜೆ ಮಾಡಲು ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ.
ಹಬ್ಬದ ಮುನ್ನಾ ದಿನವಾದ ಶುಕ್ರವಾರ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅಗತ್ಯವಾದ ಹೂವು, ಹಣ್ಣು ಹಾಗೂ ಅಲಂಕಾರಿಕ ವಸ್ತುಗಳನ್ನು ಖರೀದಿಸಿದರು. ಹೂ, ಹಣ್ಣಿನ ಬೆಲೆ ಗಗನಕ್ಕೇರಿದರೂ ಜನರಲ್ಲಿ ಗಣೇಶ ಚತುರ್ಥಿಯ ಸಂಭ್ರಮವಂತೂ ಕಡಿಮೆಯಾಗಿಲ್ಲ.
ಹಳೆಯ ಬಸ್ ನಿಲ್ದಾಣದಲ್ಲಿ ಹಣ್ಣು, ಹೂ, ಬಾಳೆಕಂಬ ಮತ್ತಿತರ ವಸ್ತುಗಳಿಗೆ ಜನರು ಮುಗಿಬಿದ್ದಿದ್ದರು. ಏಲಕ್ಕಿ ಬಾಳೆ ಹಣ್ಣಿಗೆ ಭಾರಿ ಬೇಡಿಕೆ ಇದ್ದು, ಪ್ರತಿ ಕೆ.ಜಿಗೆ ₹ 120ಕ್ಕೆ ಮಾರಾಟವಾಗುತ್ತಿದೆ. ಉಳಿದಂತೆ ಸೇಬು ₹ 120 ರಿಂದ 200, ಮೂಸಂಬಿ ₹ 150 ರಿಂದ 180, ದಾಳಿಂಬೆ ₹ 130 ರಿಂದ 170ಕ್ಕೆ ಮಾರಾಟವಾಗುತ್ತಿವೆ.
ಹೂವುಗಳ ಬೆಲೆಯಂತೂ ಗಗನಕ್ಕೇರಿದೆ, ಕನಕಾಂಬರವು ಕೆ.ಜಿಗೆ ₹ 3 ಸಾವಿರಕ್ಕೆ ಮಾರಾಟವಾಗುತ್ತಿತ್ತು. ಕಾಕಡ ₹ 1 ಸಾವಿರ, ರೋಸಾ ಹೂವು ₹ 320, ಸೇವಂತಿ ₹ 300, ಸುಗಂಧ ₹ 400ಕ್ಕೆ ಮಾರಾಟವಾಗುತ್ತಿದ್ದವು.
ಕೆಇಬಿ ಕಾಲೋನಿಯ ವಿದ್ಯಾ ಗಣಪತಿ ದೇವಾಲಯದಲ್ಲಿ ಶನಿವಾರ ಮುಂಜಾನೆ 3 ಗಂಟೆಯಿಂದಲೇ ವರಸಿದ್ದಿ ವಿನಾಯಕ ವ್ರತ ಪೂಜೆ ಆರಂಭಗೊಳ್ಳಲಿದೆ. ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಹೂವಿನ ಅಲಂಕಾರ ಹಾಗೂ ಬೆಳಗ್ಗೆ 7 ಗಂಟೆಗೆ ಮಹಾ ಮಂಗಳಾರತಿ ನಡೆಯಲಿದೆ.
ಸ್ವರ್ಣಗೌರಿಗೆ ಪೂಜೆ–ಬಾಗಿನ ಅರ್ಪಣೆ
ನಗರದ ವಿವಿಧೆಡೆ ಶುಕ್ರವಾರ ಗೌರಿಪೂಜೆ ಸಂಭ್ರಮ–ಸಡಗರದಿಂದ ನಡೆಯಿತು. ಮಹಿಳೆಯರು ಮನೆಯಲ್ಲಿ ಗೌರಿ ಮೂರ್ತಿಗೆ ಅಲಂಕಾರ ಮಾಡಿ ಕಡುಬಿನ ಹಾರ ಕರ್ಚಿಕಾಯಿ–ಚಕ್ಕಲಿ ಹಾರ ಮಾಡಿ ಅಲಂಕರಿಸಿದ್ದರು. ನಸುಕಿನಿಂದಲೇ ಬೀದಿಗಳಲ್ಲಿ ಹಬ್ಬದ ಸಡಗರ ತುಂಬಿತ್ತು. ಮನೆಯ ಮುಂಭಾಗ ರಂಗೋಲಿ ಬಿಡಿಸಿದರು. ಮನೆ ಬಾಗಿಲಿಗೆ ತಳಿರು ತೋರಣ ಕಟ್ಟಿ ದೇವರ ಕೋಣೆಯನ್ನು ಹೂಗಳಿಂದ ಸಿಂಗರಿಸಿದರು. ತಳಿರುತೋರಣಗಳಿಂದ ಅಲಂಕರಿಸಿದ ಮಂಟಪದ ಮಧ್ಯದಲ್ಲಿ ಗೌರಿ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ನೆರೆಹೊರೆಯ ಮಹಿಳೆಯರನ್ನು ಆಹ್ವಾನಿಸಿ ಬಾಗಿನ ನೀಡಿದರು. ಕೆಲ ದೇಗುಲಗಳಲ್ಲಿಯೂ ಗೌರಿ ಮೂರ್ತಿ ಇಟ್ಟು ಶೃಂಗರಿಸಲಾಗಿತ್ತು. ನಗರದ ಕೆಇಬಿ ಕಾಲೊನಿಯ ವಿದ್ಯಾ ಗಣಪತಿ ದೇವಾಲಯದಲ್ಲಿ ಸಾಮೂಹಿಕ ಗೌರಿ ವ್ರತವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.