ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಅತಿಥಿ ಶಿಕ್ಷಕರ ಬದುಕು ಅತಂತ್ರ

ಶಾಲೆ ಆರಂಭವಾಗುವವರೆಗೆ ಕನಿಷ್ಠ ಸೌಲಭ್ಯ ನೀಡಲು ಒತ್ತಾಯ
Last Updated 10 ಜೂನ್ 2020, 9:15 IST
ಅಕ್ಷರ ಗಾತ್ರ

ಬಂಗಾರಪೇಟೆ: ಕೋವಿಡ್-19 ಪರಿಣಾಮದಿಂದಾಗಿ ರಾಜ್ಯದ ಸರ್ಕಾರಿ, ವಸತಿಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 25 ಸಾವಿರ ಅತಿಥಿ ಶಿಕ್ಷಕರ ಬದುಕು ಅತಂತ್ರವಾಗಿದೆ.

ಮಾರ್ಚ್ ಅಂತ್ಯದಲ್ಲಿ ಅತಿಥಿ ಶಿಕ್ಷಕರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಜೂನ್ ಆರಂಭದ ಹೊತ್ತಿಗೆ ಕೆಲಸಕ್ಕೆ ತೆಗೆದುಕೊಳ್ಳುವ ಭರವಸೆಯೊಂದಿಗೆ ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿತ್ತು. ಆದರೆ, ಜೂನ್‌ಗೆ ಆರಂಭವಾಗಬೇಕಿದ್ದ ಶಾಲೆಗಳು ಇದುವರೆಗೂ ಆರಂಭವಾಗಿಲ್ಲ.

ಅಲ್ಲದೆ ಯಾವಾಗ ಆರಂಭವಾಗುತ್ತದೆ ಎನ್ನುವ ನಿಖರ ಮಾಹಿತಿ ಕೂಡ ಇಲ್ಲ. ಜೀವನಕ್ಕಾಗಿ ಶಿಕ್ಷಕ ವೃತ್ತಿಯನ್ನೇ ನೆಚ್ಚಿಕೊಂಡಿದ್ದ ಅತಿಥಿ ಶಿಕ್ಷಕರು ಶಾಲೆ ಆರಂಭಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುವ ಅನಿವಾರ್ಯತೆ ಉಂಟಾಗಿದೆ. ಒಂದೆಡೆ ವೇತನ ಇಲ್ಲ, ಮತ್ತೊಂದೆಡೆ ಲಾಕ್‌ಡೌನಿಂದಾಗಿ ಅನ್ಯ ಕೆಲಸ ಇಲ್ಲವಾಗಿದೆ.

ಜಿಲ್ಲೆಯ ಬಹುತೇಕ ವಸತಿ ಶಾಲೆಗಳನ್ನು ಕೋವಿಡ್-19 ಶಂಕಿತರ ಹಾಗೂ ಸೋಂಕಿತರ ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಲಾಗಿದೆ. ಕೊರೊನಾ ಸೋಂಕು ದಿನದಿಂದ ದಿನಕ್ಕೇ ಏರುತ್ತಲಿದ್ದು, ಕ್ವಾರಂಟೈನ್‌ಗೆ ಒಳಪಡುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಹಾಗಾಗಿ, ವಸತಿ ಶಾಲೆಗಳಿಗೆ ಯಾವಾಗ ಮುಕ್ತಿ ಸಿಗಲಿದೆ ಎನ್ನುವ ಖಾತರಿ ಇಲ್ಲವಾಗಿದೆ.

‘ರಾಜ್ಯದ ಅತಿಥಿ ಶಿಕ್ಷಕರಿಗೆ ಮಾಸಿಕ ₹7,500 ಸಂಭಾವನೆ ನೀಡಲಾಗುತ್ತಿದೆ. ಒಂದು ವೇಳೆ ತಾಲ್ಲೂಕಿನ ಗಡಿ ಭಾಗಕ್ಕೆ ಆ ಶಿಕ್ಷಕರನ್ನು ನಿಯೋಜನೆ ಮಾಡಿದರೆ ಸಂಭಾವನೆಯ ಅರ್ಧ ಮೊತ್ತ ಸಾರಿಗೆ ವ್ಯವಸ್ಥೆಗೆ ಖರ್ಚಾಗುತ್ತದೆ’ ಎನ್ನುತ್ತಾರೆ ಅತಿಥಿ ಶಿಕ್ಷಕ ಕೃಷ್ಣಾರೆಡ್ಡಿ.

ಲಾಕ್‌ಡೌನ್ ಪರಿಹಾರವಾಗಿ ಸರ್ಕಾರ ಆಟೊ ಚಾಲಕರು, ಕೂಲಿ ಕಾರ್ಮಿರಿಗೆಂದು ಪ್ರತ್ಯೇಕ ಪ್ಯಾಕೇಜ್ ಘೋಷಿಸಿದೆ. ಆದರೆ, ಮೂರು ತಿಂಗಳಿಂದ ಕೆಲಸ ಇಲ್ಲದೆ ಬೀದಿಗೆ ಬಂದಿರುವ 25 ಸಾವಿರ ಕುಟುಂಬಗಳು ಸರ್ಕಾರದ ಕಣ್ಣಿಗೆ ಕಾಣಿಸದಾಗಿದೆ ಎಂದು ಶಿಕ್ಷಕ ಸುರೇಶ್ ಬಾಬು ನೋವಿನಿಂದ ನುಡಿದರು.

ಶಾಲೆ ಆರಂಭವಾಗುವವರಿಗೆ ಮೂಲ ಸೌಲಭ್ಯ ಪೂರೈಸಿಕೊಳ್ಳುವ ಸಲುವಾಗಿ ಕನಿಷ್ಠ ಸಂಭಾವನೆ ನೀಡಬೇಕು. ಇಲ್ಲವಾದರೆ ಆಹಾರ ಸಾಮಗ್ರಿಯಾದರೂ ವಿತರಣೆ ಮಾಡಬೇಕು ಎಂದು ಅತಿಥಿ ಶಿಕ್ಷಕರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT