ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಕೋಮು ಸಂಘರ್ಷ ಹೇಳಿಕೆಗಳೇ ಸ್ಫೋಟಕ್ಕೆ ಉತ್ತೇಜನ: ಎಚ್‌.ಡಿ ಕುಮಾರಸ್ವಾಮಿ

Last Updated 22 ನವೆಂಬರ್ 2022, 6:07 IST
ಅಕ್ಷರ ಗಾತ್ರ

ಕೋಲಾರ: ‘ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಲ ವ್ಯಕ್ತಿಗಳ ಕೋಮು ಸಂಘರ್ಷಕ್ಕೆ ಕಾರಣವಾಗುವ ಹೇಳಿಕೆಗಳು ಹಾಗೂ ಪರಸ್ಪರ ದ್ವೇಷ ಮನೋಭಾವ ಬೆಳೆಸುವ ಚಟುವಟಿಕೆಗಳು ಸ್ಫೋಟದಂಥ ಪ್ರಕರಣಗಳಿಗೆ ಉತ್ತೇಜನ ನೀಡುತ್ತಿವೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ಸೋಮವಾರ ಜೆಡಿಎಸ್‌ ಪಂಚರತ್ನ ರಥಯಾತ್ರೆ ವೇಳೆ ತಾಲ್ಲೂಕಿನ ಕೋರಗಂಡಹಳ್ಳಿಯಲ್ಲಿ ಮಾತನಾಡಿ, ‘ಎರಡೂ ರಾಷ್ಟ್ರೀಯ ಪಕ್ಷಗಳು ಕರಾವಳಿ ಪ್ರದೇಶದಲ್ಲಿ ಕೋಮುಗಲಭೆ ವಾತಾವರಣ ನಿರ್ಮಿಸಿವೆ. ಈಗ ಅಲ್ಲಿ ಸ್ಫೋಟ ಸಂಭವಿಸಿದ್ದು, ಆರ್ಥಿಕ ವಹಿವಾಟಿಗೆ ತೊಂದರೆ ಆಗುತ್ತದೆ. ಜನರೂ ಆತಂಕಕ್ಕೆ ಒಳಗಾಗುತ್ತಾರೆ’ ಎಂದರು.

‘ಸ್ಫೋಟ ಪ್ರಕರಣವನ್ನು ನಾನು ಖಂಡಿಸುತ್ತೇನೆ. ಪ್ರಕರಣದ ಹಿಂದೆ ಸಮಾಜಘಾತುಕ ಶಕ್ತಿಗಳಿದ್ದು, ಕಠಿಣ ಕ್ರಮ ವಹಿಸಬೇಕು. ಪೊಲೀಸರಿಗೆ ಮುಕ್ತ ಅವಕಾಶ ನೀಡಿ ಯಾವುದೇ ಸಂಘಟನೆ ಇದ್ದರೂ ಪತ್ತೆ ಹಚ್ಚಬೇಕು. ಈಗಿನ ಪ್ರಕರಣದಲ್ಲಿ ದೇವರೇ ಆ ಭಾಗದ ಜನರನ್ನು ಕಾಪಾಡಿದ್ದಾನೆ’ ಎಂದು ಹೇಳಿದರು.

‘ಯಾವುದೇ ಪಕ್ಷ, ಸಮುದಾಯಗಳಿರಲಿ ನಮ್ಮ ಜವಾಬ್ದಾರಿ ನಾಡಿನ ಜನತೆಗೆ ಸಂಪೂರ್ಣ ರಕ್ಷಣೆ ನೀಡುವುದು, ಸಮಾಜದಲ್ಲಿ ಶಾಂತಿಯುತ ವಾತಾವರಣ ನಿರ್ಮಿಸುವುದು ಆಗಬೇಕು. ಪಕ್ಷಗಳ ಅಂಗ ಪಕ್ಷಗಳು, ಸಂಘಟನೆಗಳು, ಬೇರೆ ಸಮುದಾಯದ ಸಂಘಟನೆಗಳು ಮತ್ತು ಅಲ್ಲಿನ ಧಾರ್ಮಿಕ ಗುರುಗಳು ಇಂಥ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬಾರದು’ ಎಂದು ಮನವಿ ಮಾಡಿದರು.

‘ಗೃಹ ಇಲಾಖೆ ವೈಫಲ್ಯ ಎಂದು ಹೇಳುವುದಿಲ್ಲ. ಗುಪ್ತಚರ ಇಲಾಖೆ ಕೆಲಸ ಮಾಡುತ್ತಿದ್ದರೂ ಪುಲ್ವಾಮದಲ್ಲಿ 40 ಯೋಧರ ಹತ್ಯೆ ನಡೆಯಲಿಲ್ಲವೇ? ಸರ್ಕಾರ, ರಾಜಕಾರಣಿಗಳು, ಸಂಘಟನೆಗಳು ದ್ವೇಷದ ವಾತಾವರಣ ನಿರ್ಮಾಣ ಮಾಡಬಾರದು. ಅನಾಹುತ ನಡೆದರೆ ಅಮಾಯಕರು ಸಮಸ್ಯೆಗೆ ಒಳಗಾಗುತ್ತಾರೆ’ ಎಂದರು.

ಅಭಿವೃದ್ಧಿ ಕಡೆಗಣನೆ: ‘ಬಿಜೆಪಿ ಸರ್ಕಾರದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಆಗಿಲ್ಲ. ಎಲ್ಲಿ ನೋಡಿದರೂ ರಸ್ತೆ ಗುಂಡಿ ಕಾಣುತ್ತಿವೆ. ಜನ ಆ ಗುಂಡಿಗಳಲ್ಲಿ ಬಿದ್ದು ಸಾಯುತ್ತಿದ್ದಾರೆ. ಬೆಳೆ ನಷ್ಟ ಪರಿಹಾರವನ್ನು ಇನ್ನೂ ನೀಡಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಸಿದ್ದರಾಮಯ್ಯ ಎಲ್ಲಿ ನಿಲ್ಲುತ್ತಾರೆ ಎಂಬುದು ನನಗೆ ಮುಖ್ಯವಲ್ಲ. ಕೋಲಾರ ಕ್ಷೇತ್ರ ಗೆಲ್ಲುವುದಷ್ಟೇ ನಮ್ಮ ಗುರಿ. ಯಾವ ಕ್ಷೇತ್ರಕ್ಕೆ ಅವರು ಅರ್ಜಿ ಹಾಕುತ್ತಾರೆ ನೋಡೋಣ’ ಎಂದರು.

‘ಬಿಜೆಪಿಯವರು ಬಳ್ಳಾರಿಯಲ್ಲಿ ಎಸ್‌ಟಿ ಸಮಾವೇಶ ನಡೆಸಿ ವೀರಾವೇಶದ ಮಾತನಾಡಿದ್ದಾರೆ. ಎಸ್‌ಟಿಗಳಿಗೆ ಮೀಸಲಾತಿ ಹೆಚ್ಚಿಸಿರುವುದು ರಾಜಕೀಯ ಶಕ್ತಿ ಬೆಳೆಸಿಕೊಳ್ಳುವುದಕ್ಕೆ ಮಾತ್ರ. ಅಂಬೇಡ್ಕರ್‌ ನೀಡಿದ ಮೀಸಲಾತಿ ಎಷ್ಟರ ಮಟ್ಟಿಗೆ ತಲುಪಿದೆ? ಆಯ್ದ ಕುಟುಂಬಗಳಿಗಷ್ಟೇ ಲಾಭವಾಗಿದೆ. ಕೋಟ್ಯಂತರ ಜನರು ಯಾವುದೇ ಸೌಲಭ್ಯ ಸಿಗದೆ ಇನ್ನೂ ಸಂಕಷ್ಟದಲ್ಲಿದ್ದಾರೆ. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಎಷ್ಟು ಜನರಿಗೆ ಸಾಲ ನೀಡಿದ್ದೀರಿ? ಯಾರು ಎಷ್ಟು ಹಣ ದೋಚಿದ್ದೀರಿ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT