ಕೋಲಾರ: ಕುಡಿಯುವ ನೀರಿನ ವಿಚಾರವಾಗಿ ಸರಿಯಾಗಿ ಮಾಹಿತಿ ನೀಡದ ಹಾಗೂ ಸಮಸ್ಯೆ ನೀಗಿಸಲು ಕ್ರಮ ವಹಿಸದ ಅಧಿಕಾರಿಗಳನ್ನು ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಬೆವರಿಳಿಸಿದ ಪ್ರಸಂಗ ನಡೆಯಿತು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಬೇಸಿಗೆ ಶುರುವಾಗಿದ್ದು, ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾದರೆ, ಜನರಿಂದ ದೂರುಗಳು ಬಂದರೆ ಸುಮ್ಮನಿರಲ್ಲ. ನೆಪ ಹೇಳದೆ ಕೆಲಸ ಮಾಡಿ ನೀರು ಪೂರೈಸಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಕುಡಿಯುವ ನೀರಿನ ವಿಚಾರವಾಗಿ ಸುದೀರ್ಘವಾಗಿ ಚರ್ಚಿಸಲಾಯಿತು. ಪ್ರಮುಖವಾಗಿ ಜಿಲ್ಲಾ ಪಂಚಾಯಿತಿ ಸಿಇಒ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್, ತಹಶೀಲ್ದಾರ್ಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಶಾಸಕ ಕೆ.ವೈ.ನಂಜೇಗೌಡ ಕೂಡ ದನಿಗೂಡಿಸಿದರು.

ಜಲಜೀವನ್ ಮಿಷನ್ (ಜೆಜೆಎಂ) ಅಡಿಯಲ್ಲಿ ಕೊರೆದ 266ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಬಾಕಿ ಇರುವುದಕ್ಕೆ ಸಚಿವರು ಅತೃಪ್ತಿ ವ್ಯಕ್ತಪಡಿಸಿದರು. ಕಾರಣ ಹೇಳಲು ಮುಂದಾದ ಕಾರ್ಯಪಾಲಕ ಎಂಜಿನಿಯರ್ ರಘು ಅವರಿಗೆ ಎಚ್ಚರಿಕೆ ನೀಡಿದರು. ಕೂಡಲೇ ಠೇವಣಿ ಪಾವತಿಸಿ ಸಂಪರ್ಕ ಪಡೆಯಲು ಹಾಗೂ ಬಾಕಿ ಬಿಲ್ ಪಾವತಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಸ್ತುತ ಜಿಲ್ಲೆಯ 79 ಹಳ್ಳಿಗಳಲ್ಲಿ ನೀರಿನ ಅಭಾವ ಕಂಡುಬಂದಿದ್ದು, ಅಗತ್ಯವಿರುವ ಕಡೆ ಹೊಸ ಕೊಳವೆಬಾವಿ ಕೊರೆಯಿಸಲು ಹಾಗೂ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 1,239 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು (ಆರ್ಒ), 144 ಘಟಕ ಕೆಟ್ಟು ಹೋಗಿವೆ. ನಗರ ಪ್ರದೇಶದಲ್ಲಿ 106 ಘಟಕಗಳ ಪೈಕಿ 6 ಕೆಟ್ಟು ಹೋಗಿವೆ ಎಂದು ಸಭೆಗೆ ತಿಳಿಸಿದರು.

ಪ್ರತಿ ಶನಿವಾರ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಶಾಸಕರನ್ನು ಒಳಗೊಂಡ ಕುಡಿಯುವ ನೀರಿನ ಸಮಿತಿ ಸಭೆ ನಡೆಸಿ ವರದಿ ನೀಡಲು ತಾಕೀತು ಮಾಡಿದರು. ಬೇಸಿಗೆ ಮುಗಿಯುವವರೆಗೆ ತಿಂಗಳಿಗೊಮ್ಮೆ ಬಂದು ಕೆಡಿಪಿ ಸಭೆ ನಡೆಸುವುದಾಗಿ ಹೇಳಿದರು.

ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ‘ಕುಡಿಯುವ ನೀರಿನ ವಿಚಾರವಾಗಿ ತಹಶೀಲ್ದಾರ್ಗಳ ಜೊತೆ ಈಗಾಗಲೇ ಎರಡು ಸಭೆ ನಡೆಸಿದ್ದೇನೆ. ನಮ್ಮಲ್ಲಿ ಎಸ್ಡಿಆರ್ಎಫ್ ನಿಧಿ ಇದೆ. ಬರಗಾಲ ಘೋಷಣೆಯಾದರೆ, ತುರ್ತು ಸಂದರ್ಭಗಳಲ್ಲಿ ಮಾತ್ರ ಆ ಹಣ ಖರ್ಚು ಮಾಡಬಹುದು. ಕುಡಿಯುವ ನೀರಿಗೆ ಬೇರೆ ಹಣ ವ್ಯವಸ್ಥೆ ಮಾಡಬೇಕಾಗುತ್ತದೆ. ಗ್ರಾಮ ಪಂಚಾಯಿತಿ ಸ್ಥಳೀಯ ಅನುದಾನ ಬಳಸಿ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ’ ಎಂದರು.

ನಗರಗಳಲ್ಲಿ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿಕೊಂಡಿರುವ ಬಗ್ಗೆಯೂ ಚರ್ಚೆ ನಡೆಯಿತು. ಒಟ್ಟು 52 ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಬರಬಹುದು. ಯರಗೋಳ್ ಜಲಾಶಯದಲ್ಲಿ ಮುಂದಿನ ಹತ್ತು ತಿಂಗಳಿಗೆ ಸಾಕಾಗುವಷ್ಟ ನೀರು ಇದ್ದು ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ನಗರದ ವಾರ್ಡ್ಗಳಿಗೆ ಪೂರೈಸಲಾಗುವುದು ಎಂದು ಅಧಿಕಾರಿಗಳು ಹೇಳಿದರು.

ಕೋಲಾರದಲ್ಲಿ 11 ಓವರ್ ಹೆಡ್ ಟ್ಯಾಂಕ್ಗಳ ಪೈಕಿ 9 ಕ್ಕೆ ನೀರು ಬರುತ್ತಿದೆ. 2 ನಿರ್ಮಾಣ ಹಂತದಲ್ಲಿದ್ದು ವಿವಿಧ ಕಾರಣದಿಂದ ಕೆಲಸ ಸ್ಥಗಿತಗೊಂಡಿದೆ. ಇನ್ನೂ ಐದು ಟ್ಯಾಂಕ್ ಬೇಕಿದ್ದು ಪ್ರಸ್ತಾಪ ಕಳಿಸಲಾಗಿದೆ ಎಂದರು. ಯರಗೋಳ್ ಜಲಾಶಯದಿಂದ ಕೆಜಿಎಫ್ಗೆ ನೀರು ಪೂರೈಸಲು ಸದ್ಯಕ್ಕೆ ಸಾಧ್ಯವಿಲ್ಲವೆಂದಾಗ ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿ ಎಂದು ಸಚಿವರು ನಿರ್ದೇಶನ ನೀಡಿದರು.

ಕೋಲಾರ ಬಸ್ ನಿಲ್ದಾಣದ ಹಿಂಭಾಗವಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಸರ್ಕಾರಿ ಜಾಗ ಸೇರಿದಂತೆ ವಿವಿಧೆಡೆ ನಡೆದಿರುವ ಅಕ್ರಮ ಖಾತೆಗಳನ್ನು ರದ್ದುಪಡಿಸಲು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸಿದರು.

ಕೆಜಿಎಫ್ನ ಬಿಜಿಎಂಎಲ್ ಸಂಸ್ಥೆಯು 25 ವರ್ಷಗಳಿಂದ ಕೋಟ್ಯಂತರ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವುದರ ಬಗ್ಗೆ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು. ಬಾಕಿ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಅಗತ್ಯಬಿದ್ದಲ್ಲಿ ಸೌಲಭ್ಯಗಳನ್ನು ಕಡಿತಗೊಳಿಸುವಂತೆ ಸಚಿವರು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದ ಕುರಿತು ಬೈರತಿ ಸುರೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಡಿಡಿಪಿಐ ಆಲ್ಮಾಸ್ ತಾಜ್ ಫರ್ವೀನ್ ವಿರುದ್ಧ ಗರಂ ಆದ ಅವರು, ಫಲಿತಾಂಶವು ಗಣನೀಯವಾಗಿ ಕುಸಿದಿರುವ ಬಗ್ಗೆ ಅಂಕಿಅಂಶಗಳ ಸಮೇತ ತರಾಟೆಗೆ ತೆಗೆದುಕೊಂಡರು.

2023 ರಲ್ಲಿ ಶೇ 93.76ರಷ್ಟಿದ್ದ ಫಲಿತಾಂಶ 2024 ರಲ್ಲಿ ಶೇ 74.94ಕ್ಕೆ ಇಳಿಯಿತು. ನಂತರ ಶೇ 68.37ಕ್ಕೆ ಕುಸಿದಿದೆ. 6ನೇ ಸ್ಥಾನದಿಂದ 20ನೇ ಸ್ಥಾನ ಕುಸಿತ, ನಂತರ 14ನೇ ಸ್ಥಾನ ಬಂದಿದೆ, ಮುಂದೆ 25ನೇ ಸ್ಥಾನವೇ ಎಂದು ಹರಿಹಾಯ್ದರು.

ಆಗ ಡಿಡಿಪಿಐ, ಈ ಬಾರಿ ಶೇ 100ರಷ್ಟು ಫಲಿತಾಂಶದೊಂದಿಗೆ ರಾಜ್ಯದಲ್ಲಿ ಅಗ್ರ ಐದರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಭರವಸೆ ನೀಡಿದರು.

ಪೂರ್ವಸಿದ್ಧತಾ ಪರೀಕ್ಷೆಗೆ ಕೆಲ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಕೇವಲ ಶೇ 75 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಸುಮಾರು 4 ಸಾವಿರ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವಾಗ ಶೇ 100 ಫಲಿತಾಂಶ ಹೇಗೆ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯರಾದ ಡಿ.ಟಿ.ಶ್ರೀನಿವಾಸ್ ಹಾಗೂ ಎಂ.ಎಲ್.ಅನಿಲ್ ಕುಮಾರ್ ಪ್ರಶ್ನಿಸಿದರು.

ಖಾಸಗಿ ಮತ್ತು ಅನುದಾನಿತ ಶಾಲೆಗಳ ಫಲಿತಾಂಶದ ಜೊತೆಗೆ ಸರ್ಕಾರಿ ಶಾಲೆಗಳ ಫಲಿತಾಂಶವನ್ನು ಹೋಲಿಕೆ ಮಾಡಿ ನೋಡಿದಾಗ ವಾಸ್ತವ ಚಿತ್ರಣ ಬೇರೆಯೇ ಇದೆ ಎಂದು ಎಚ್ಚರಿಸಿದರು.

ಶಿಕ್ಷಕರ ಮೆಡಿಕಲ್ ಬಿಲ್, ಟಿಎ ಬಿಲ್ಗಳು ಮತ್ತು ಇತರ ಬಾಕಿ ಹಣವನ್ನು ಪಾವತಿಸುವಲ್ಲಿ ವಿಳಂಬ ಮಾಡುತ್ತಿರುವ ಬಗ್ಗೆಯೂ ಡಿಡಿಪಿಐ ಅವರನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಮಟ್ಟದ ಸಮಾವೇಶ: ಈ ತಿಂಗಳ 30ರೊಳಗೆ ಎಲ್ಲಾ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಗುರಿಗಳನ್ನು ತಲುಪಬೇಕು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಮ್ಮುಖದಲ್ಲಿ ಜಿಲ್ಲಾಮಟ್ಟದ ಬೃಹತ್ ಸಮಾವೇಶ ನಡೆಸಿ ಸುಮಾರು 50 ಸಾವಿರ ರೈತರಿಗೆ ಹಕ್ಕುಪತ್ರ ಹಾಗೂ ಆರ್ಟಿಸಿ ವಿತರಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕರಾದ ಕೊತ್ತೂರು ಜಿ.ಮಂಜುನಾಥ್, ಕೆ.ವೈ.ನಂಜೇಗೌಡ, ರೂಪಕಲಾ ಶಶಿಧರ್, ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್, ಡಿ.ಟಿ.ಶ್ರೀನಿವಾಸ್, ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಸೊಣ್ಣೆಗೌಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್, ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಸರಿನಾ ಸಿಕ್ಕಲಿಗಾರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್, ಎಲ್ಲಾ ತಹಶೀಲ್ದಾರ್ಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಕಾಳಸಂತೆಯಲ್ಲಿ ಗೊಬ್ಬರ; ತಡೆಗೆ ಸೂಚನೆ

ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸಚಿವ ಬೈರತಿ ಸುರೇಶ್ ಜಂಟಿ ಕೃಷಿ ನಿರ್ದೇಶಕಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮುಳಬಾಗಿಲು ಭಾಗದಲ್ಲಿ ಅಕ್ರಮವಾಗಿ ಆಂಧ್ರಪ್ರದೇಶಕ್ಕೆ ರಸಗೊಬ್ಬರ ಸಾಗಿಸಿದ ಪ್ರಕರಣದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಕೋಲಾರ ತಾಲ್ಲೂಕಿನ ಕೆಲ ಮಳಿಗೆಯಿಂದ ಅಕ್ರಮವಾಗಿ ಗೊಬ್ಬರ ಸಾಗಾಟವಾಗುತ್ತಿರುವುದನ್ನು ಪತ್ತೆಹಚ್ಚಿ ಎಫ್ಐಆರ್ ದಾಖಲಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಕೇವಲ ಲೈಸೆನ್ಸ್ ಅಮಾನತು ಮಾಡುವುದರಿಂದ ಪ್ರಯೋಜನವಿಲ್ಲ. ತಪ್ಪು ಮಾಡಿದವರ ಪರವನಾಗಿ ರದ್ದುಗೊಳಿಸಿ ತನಿಖೆ ನಡೆಸಲು ಪೊಲೀಸರಿಗೆ ಸಹಕಾರ ನೀಡಿ ಕಠಿಣ ಕ್ರಮ ಜರುಗಿಸಬೇಕು ಎಂದು ಸಚಿವರು ನಿರ್ದೇಶಿಸಿದರು.

ಗೊಬ್ಬರ ದಾಸ್ತಾನಿನ ಬಗ್ಗೆ ಸರಿಯಾಗಿ ಮಾಹಿತಿ ನೀಡದ ಕೃಷಿ ಅಧಿಕಾರಿಗಳನ್ನು ಶಾಸಕ ಕೊತ್ತೂರು ಮಂಜುನಾಥ್ ತರಾಟೆಗೆ ತೆಗೆದುಕೊಂಡರು.

ಮಾರ್ಕಂಡೇಯ ಜಲಾಶಯ: ತನಿಖೆಗೆ ಆದೇಶ

ಮಾಲೂರಿಗೆ ನೀರು ಪೂರೈಸುವ ಮಾರ್ಕಂಡೇಯ ಜಲಾಶಯದಿಂದ 156 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ₹ 45 ಕೋಟಿ ವೆಚ್ಚದಲ್ಲಿ ಕೈಗೊಂಡಿದ್ದು ಯೋಜನೆಯು ಅರ್ಧಕ್ಕೆ ನಿಂತಿರುವ ಬಗ್ಗೆ ಸಚಿವ ಬೈರತಿ ಸುರೇಶ್ ಗರಂ ಆದರು. ಗುತ್ತಿಗೆದಾರರಿಗೆ ಶೇ 98 ರಷ್ಟು ಬಿಲ್ ಪಾವತಿಯಾಗಿದ್ದರೂ ಕೆಲಸ ಪೂರ್ಣಗೊಂಡಿಲ್ಲ ನೀರು ಕೊಟ್ಟಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿ ಈ ಯೋಜನೆಯಲ್ಲಿನ ಹಣಕಾಸು ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡಲು ಆದೇಶಿಸಿದರು. ಶಾಸಕ ನಂಜೇಗೌಡ ಮಾತನಾಡಿ ₹ 45 ಕೋಟಿ ಖರ್ಚು ಮಾಡಿದ್ದರೂ ಮಾರ್ಕಂಡೇಯ ಜಲಾಶಯದಿಂದ ಮಾಲೂರಿಗೆ ನೀರು ಬರುತ್ತಿಲ್ಲ ಎಂದು ದೂರಿದರು.

ಬೆಸ್ಕಾಂ ಎಇ ಅಮಾನತಿಗೆ ಸೂಚನೆ

ಶಾಸಕ ಕೊತ್ತೂರು ಮಂಜುನಾಥ್ ಅವರ ಮೊಬೈಲ್ ಕರೆ ಸ್ವೀಕರಿಸದ ಬೆಸ್ಕಾಂ ವೇಮಗಲ್ ಉಪ ಘಟಕದ ಸಹಾಯಕ ಎಂಜಿನಿಯರ್ ಗುರುವಪ್ಪ ಅವರನ್ನು ಅಮಾನತು ಮಾಡಿ ಎಂದು ಸಚಿವ ಬೈರತಿ ಸುರೇಶ್ ಸೂಚನೆ ನೀಡಿದರು. ಈ ಸಂಬಂಧ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಅವರಿಗೆ ಕರೆ ಮಾಡಿ ಅಮಾನತು ಮಾಡುವಂತೆ ಹೇಳಿದರು. ಬೇರೆ ಎಇ ನಿಯೋಜಿಸುವಂತೆ ಹೇಳಿ ಬೆಸ್ಕಾಂ ಕೋಲಾರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶುಭಾ ಅವರನ್ನೂ ತರಾಟೆಗೆ ತೆಗೆದುಕೊಂಡರು.

ಕತ್ತೆ ಕಾಯಲು ಸಭೆಗೆ ಬರುತ್ತೇವೆಯೇ?

ಮಾಹಿತಿ ನೀಡದೆ ಸಭೆಗೆ ಗೈರಾಗಿದ್ದ ಡಿಡಿಪಿಯು ರಾಜಶೇಖರ್ ಪಟ್ಟಣಶೆಟ್ಟಿ ವಿರುದ್ಧವೂ ಸಚಿವ ಬೈರತಿ ಸುರೇಶ್ ಗರಂ ಆದರು. ಬೇಕಾಬಿಟ್ಟಿ ಗೈರಾದರೆ ಹೇಗೆ? ನಾವೇನು ಕತ್ತೆ ಕಾಯಲು ಸಭೆಗೆ ಬರುತ್ತೇವೆಯೇ ಎಂದು ಸಿಡಿಮಿಡಿಗೊಂಡರು. ನೋಟಿಸ್ ನೀಡಿ ಸರಿಯಾದ ಉತ್ತರ ಕೊಡದಿದ್ದರೆ ಅಮಾನತು ಮಾಡಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು. ಡಿಡಿಪಿಯು ಮಾಲೂರಿನಲ್ಲಿ ಕಾಲೇಜಿನ ಸಮಸ್ಯೆ ಬಗೆಹರಿಸಲು ಹೋಗಿರುವುದಾಗಿ ಅವರ ಪರವಾಗಿ ಬಂದಿದ್ದ ಅಧಿಕಾರಿ ತಿಳಿಸಿದರು.

ತಮ್ಮ ಭೇಟಿಗೆ ಸಮಯ ಕೊಡಿ!

ಆಹಾರ ಇಲಾಖೆಯ ಉಪನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವ ಮಲ್ಲಿಕಾರ್ಜುನ ತಮ್ಮನ್ನು ಭೇಟಿಯಾಗಿಲ್ಲವೆಂದು ಬೈರತಿ ಸುರೇಶ್ ಗರಂ ಆದರು. ನಾನೇ ತಮ್ಮನ್ನು ಬಂದು ಭೇಟಿ ಮಾಡುತ್ತೇನೆ ಸಮಯ (ಅಪಾಯಿಂಟ್ಮೆಂಟ್) ಯಾವಾಗ ಕೊಡುತ್ತೀರಾ ಎಂದು ವ್ಯಂಗ್ಯವಾಗಿ ಕೇಳಿದರು. ಶಾಸಕ ನಂಜೇಗೌಡ ಮಧ್ಯ ಪ್ರವೇಶಿಸಿ ‘ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾಮಂತ್ರಿಗೆ ಗೊತ್ತಾಗದೆ ಹೇಗೆ ಬರುತ್ತಾರೆ? ಅವರನ್ನು ನಿಯೋಜಿಸುವವರು ಯಾರು’ ಎಂದು ಪ್ರಶ್ನಿಸಿದರು. ಆಗ ಅದಕ್ಕೆ ಶಾಸಕಿ ರೂಪಕಲಾ ಶಶಿಧರ್ ಆಕ್ಷೇಪ ವ್ಯಕ್ತಪಡಿಸಿದರು. ಕೆಜಿಎಫ್ ಎಸ್ಪಿಯನ್ನು ಮುಖ್ಯಮಂತ್ರಿ ನಿಯೋಜಿಸಿದ್ದಾರೆ ಅದನ್ನು ಪ್ರಶ್ನಿಸಲು ಆಗುತ್ತದೆಯೇ ಎಂದರು.

ಸಭೆಗೆ ಜೆಡಿಎಸ್ ಶಾಸಕರು ಗೈರು

ಕೆಡಿಪಿ ಸಭೆಗೆ ಜೆಡಿಎಸ್ ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ ಸಮೃದ್ಧಿ ಮಂಜುನಾಥ್ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಸಂಸದ ಎಂ.ಮಲ್ಲೇಶ್ ಬಾಬು ಗೈರಾಗಿದ್ದರು. ಕಾಂಗ್ರೆಸ್ನ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೂಡ ಗೈರಾಗಿದ್ದರು. ಅವರು ಜಿಲ್ಲಾಡಳಿತ ಭವನ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಈ ಸಭೆಗೆ ಬರಲಿಲ್ಲ.

ಅಧಿಕಾರಿಗಳು ದರ್ಬಾರು ಮಾಡುತ್ತಿದ್ದೀರಾ? ದುಡ್ಡು ಕೊಡುವುದು ನೀವಾ ಸರ್ಕಾರನಾ? ನೀರಿನ ವಿಚಾರದಲ್ಲಿ ಜಿ.ಪಂ ಸಿಇಒ ಯಾವತ್ತಾದರೂ ಶಾಸಕರನ್ನು ಕರೆದು ಸಭೆ ನಡೆಸಿದ್ದಾರೆಯೇ?
ಕೆ.ವೈ.ನಂಜೇಗೌಡ, ಶಾಸಕ

ಡಿಡಿಪಿಐ ಮೇಲೆ ಬಹಳ ದೂರುಗಳಿದ್ದು ಅವರು ವರ್ತನೆ ಬದಲಾಯಿಸಿಕೊಳ್ಳಬೇಕು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶ ಸುಧಾರಣೆ ಕಾಣದಿದ್ದರೆ ಕ್ರಮ ಕೈಗೊಳ್ಳಲಾಗುವುದು.
ಬೈರತಿ ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.