ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ವರ್ತುಲ ರಸ್ತೆ ಕನಸಿಗೆ ಜೀವ

ಸಂಚಾರ ಸಮಸ್ಯೆಗೆ ಮುಕ್ತಿ ನೀಡಲು ಭೂಮಿಕೆ ಸಿದ್ಧ
Last Updated 7 ಫೆಬ್ರುವರಿ 2021, 12:51 IST
ಅಕ್ಷರ ಗಾತ್ರ

ಕೋಲಾರ: ನಗರವಾಸಿಗಳ ದಶಕಗಳ ಬೇಡಿಕೆಯಾದ ವರ್ತುಲ ರಸ್ತೆ ನಿರ್ಮಾಣದ ಕನಸಿಗೆ ಜೀವ ಬಂದಿದೆ. ನಗರದೊಳಗಿನ ವಾಹನ ದಟ್ಟಣೆ ತಪ್ಪಿಸಿ ಸಂಚಾರ ಸಮಸ್ಯೆಗೆ ಮುಕ್ತಿ ನೀಡಲು ಮುಂದಾಗಿರುವ ನಗರಾಭಿವೃದ್ಧಿ ಪ್ರಾಧಿಕಾರವು (ಕುಡಾ) ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಭೂಮಿಕೆ ಸಿದ್ಧಪಡಿಸಿದೆ.

ಸುಮಾರು 30 ಚದರ ಕಿ.ಮೀ ವಿಸ್ತಾರವಾಗಿರುವ ನಗರದಲ್ಲಿ 35 ವಾರ್ಡ್‌ಗಳಿದ್ದು, ಜನಸಂಖ್ಯೆ 3 ಲಕ್ಷದ ಗಡಿ ದಾಟಿದೆ. ನಗರ ವಿಸ್ತಾರವಾದಂತೆ ಜನಸಂಖ್ಯೆ ವೃದ್ಧಿಸುತ್ತಿದೆ. ಇದಕ್ಕೆ ಅನುಗುಣವಾಗಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ.

ನಗರದಲ್ಲಿನ 159 ಕಿ.ಮೀ ರಸ್ತೆಯನ್ನು ನಗರಸಭೆ ಹಾಗೂ 10 ಕಿ.ಮೀ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ನಿರ್ವಹಣೆ ಮಾಡುತ್ತಿದೆ. ನಗರದಲ್ಲಿ ಸದ್ಯ ಸುಮಾರು 1.50 ಲಕ್ಷ ವಾಹನಗಳಿದ್ದು, ಪ್ರತಿನಿತ್ಯ ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಜತೆಗೆ ಹೊರ ಭಾಗದಿಂದ ಬರುವ ಸಾವಿರಾರು ವಾಹನಗಳು ನಗರದ ಮೂಲಕ ಹಾದು ಹೋಗುತ್ತಿವೆ.

ನಗರದ ಸುತ್ತಮುತ್ತ ವೇಮಗಲ್‌, ನರಸಾಪುರ, ಟಮಕ ಕೈಗಾರಿಕಾ ಪ್ರದೇಶಗಳು ತಲೆಎತ್ತಿದ್ದು, ಸರಕು ಸಾಗಣೆ ವಾಹನಗಳ ಓಡಾಟ ಹೆಚ್ಚಿದೆ. ನಗರಕ್ಕೆ ಹೊಂದಿಕೊಂಡಂತಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ (ಎಪಿಎಂಸಿಗೆ) ರಾಜ್ಯದ ಬೇರೆ ಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯಗಳಿಗೆ ಭಾರಿ ವಾಹನಗಳ ಮೂಲಕ ಪ್ರತಿನಿತ್ಯ ನೂರಾರು ಲೋಡ್‌ ತರಕಾರಿ ರಫ್ತಾಗುತ್ತದೆ.

ಹೀಗಾಗಿ ನಗರದೊಳಗಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಹಾಗೂ ವಾಯುಮಾಲಿನ್ಯ ಹೆಚ್ಚಿದೆ. ವಾಹನ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿವೆ. ಮತ್ತೊಂದೆಡೆ ನಗರವಾಸಿಗಳು ದಿನನಿತ್ಯ ಕಿರಿ ಕಿರಿ ಅನುಭವಿಸುವಂತಾಗಿದೆ. ವಾಹನಗಳ ದೂಳಿನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದ್ದು, ಉಸಿರಾಟ ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

2004ರಲ್ಲೇ ಅಸ್ತು: ನಗರದೊಳಗಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು 2004ರಲ್ಲೇ ವರ್ತುಲ ರಸ್ತೆ ನಿರ್ಮಾಣಕ್ಕೆ ಅಸ್ತು ಎಂದಿತ್ತು. ಆದರೆ, ಕಾರಣಾಂತರದಿಂದ ರಸ್ತೆ ಕಾಮಗಾರಿ ಆರಂಭವಾಗಲೇ ಇಲ್ಲ.

ದಶಕದಿಂದ ನನೆಗುದಿಗೆ ಬಿದ್ದಿದ್ದ ವರ್ತುಲ ರಸ್ತೆ ಯೋಜನೆಗೆ 2018ರಲ್ಲಿ ಮರು ಜೀವ ನೀಡಿದ ಕುಡಾ ರಸ್ತೆಗೆ ಅಗತ್ಯವಿರುವ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿತ್ತು. ಸುಮಾರು 21 ಕಿ.ಮೀ ವರ್ತುಲ ರಸ್ತೆಗೆ ₹ 314 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಉದ್ದೇಶಿತ ರಸ್ತೆಗೆ ಗುರುತಿಸಲಾಗಿದ್ದ ಕೃಷಿ ಜಮೀನುಗಳ ಸ್ವಾಧೀನಕ್ಕೆ ಜಮೀನು ಮಾಲೀಕರಿಂದ ವಿರೋಧ ವ್ಯಕ್ತವಾಗಿದ್ದರಿಂದ ಯೋಜನೆಗೆ ವಿಘ್ನ ಎದುರಾಗಿತ್ತು.

ಸಿ.ಎಂ ಬಳಿಗೆ ನಿಯೋಗ: ಇದೀಗ ಕುಡಾ ವರ್ತುಲ ರಸ್ತೆ ಯೋಜನೆಗೆ ಮರುಚಾಲನೆ ನೀಡಿದ್ದು, ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಿಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲು ನಿರ್ಧರಿಸಿದೆ. ಜಿಲ್ಲೆಯ ಸಂಸದರು, ಎಲ್ಲಾ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಕೋಲಾರ ನಗರಸಭೆ ಅಧ್ಯಕ್ಷರು ಮತ್ತು ಸದಸ್ಯರನ್ನು ಒಳಗೊಂಡ ನಿಯೋಗದೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅನುದಾನ ಪಡೆಯಲು ಪ್ರಯತ್ನ ಆರಂಭಿಸಿದೆ.

ವರ್ತುಲ ರಸ್ತೆ ಅಂದಾಜು ವೆಚ್ಚ ಪರಿಷ್ಕರಿಸಲಾಗಿದ್ದು, ಯೋಜನಾ ವೆಚ್ಚ ₹ 261 ಕೋಟಿಯಿಂದ ₹ 314 ಕೋಟಿಗೆ ಏರಿಕೆಯಾಗಿದೆ. ಮೊದಲ ಹಂತದಲ್ಲಿ ₹ 97 ಕೋಟಿ ಅಂದಾಜು ವೆಚ್ಚದಲ್ಲಿ 6.75 ಕಿ.ಮೀ, ಎರಡನೇ ಹಂತದಲ್ಲಿ ₹ 113 ಕೋಟಿ ವೆಚ್ಚದಲ್ಲಿ 7.5 ಕಿ.ಮೀ ಹಾಗೂ ಮೂರನೇ ಹಂತದಲ್ಲಿ ₹ 104 ಕೋಟಿ ವೆಚ್ಚದಲ್ಲಿ 7 ಕಿ.ಮೀ ವರ್ತುಲ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ.

ಜಮೀನು ಗುರುತು: ಮೊದಲ ಹಂತದಲ್ಲಿ ಮಾಲೂರು ರಸ್ತೆಯಿಂದ ಬೆಂಗಳೂರು ರಸ್ತೆ, ಅಂತರಂಗೆ ರಸ್ತೆ, ಖಾದ್ರಿಪುರ, ಚಿಕ್ಕಬಳ್ಳಾಪುರ ರಸ್ತೆ, ಚಿಂತಾಮಣಿ ರಸ್ತೆ, ಶ್ರೀನಿವಾಸಪುರ ರಸ್ತೆಯನ್ನು ಸಂಪರ್ಕಿಸುವಂತೆ (ನಗರದ ಹೊರವಲಯದ ಅಮ್ಮೇರಹಳ್ಳಿಯಿಂದ ಸಂಗೊಂಡಹಳ್ಳಿವರೆಗೆ) ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ.

ಮೊದಲ ಹಂತದ ರಸ್ತೆಗೆ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಅಮ್ಮೇರಹಳ್ಳಿ, ಕೊಂಡರಾಜನಹಳ್ಳಿ, ಸುಲ್ತಾನ್‌ ತಿಪ್ಪಸಂದ್ರ, ಕೀಲುಕೋಟೆ, ವಿಭೂತಿಪುರ, ಖಾದ್ರಿಪುರ, ಸಂಗೊಂಡಹಳ್ಳಿ, ಅರಹಳ್ಳಿ ಹಾಗೂ ಕೋಡಿಕಣ್ಣೂರು ಗ್ರಾಮಗಳಲ್ಲಿ ರಸ್ತೆಗೆ 48 ಎಕರೆ 19 ಗುಂಟೆ ಜಮೀನು ಗುರುತಿಸಲಾಗಿದೆ. ಇದರಲ್ಲಿ ಸರ್ಕಾರಿ ಹಾಗೂ ಖಾಸಗಿಯವರ ಜಮೀನುಗಳು ಸೇರಿವೆ. ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಎಲ್ಲರ ಚಿತ್ತ ಬಜೆಟ್‌ನತ್ತ ನೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT