ಕೈಗಾರಿಕೆಗಳ ಮೂಲಸೌಕರ್ಯ ಬೇಡಿಕೆ ಈಡೇರಿಸಿ

7
ಅಧಿಕಾರಿಗಳಿಗೆ 2 ವಾರದ ಗಡುವು ನೀಡಿದ ಕೈಗಾರಿಕಾ ಸಚಿವ ಜಾರ್ಜ್‌

ಕೈಗಾರಿಕೆಗಳ ಮೂಲಸೌಕರ್ಯ ಬೇಡಿಕೆ ಈಡೇರಿಸಿ

Published:
Updated:
Deccan Herald

ಕೋಲಾರ: ‘ತಾಲ್ಲೂಕಿನ ನರಸಾಪುರ ಮತ್ತು ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕೆಗಳ ಮೂಲಸೌಕರ್ಯ ಬೇಡಿಕೆಯನ್ನು 2 ವಾರದಲ್ಲಿ ಈಡೇರಿಸಬೇಕು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನರಸಾಪುರ ಮತ್ತು ವೇಮಗಲ್ ಕೈಗಾರಿಕಾ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿದ ಸಚಿವರಿಗೆ ವಿವಿಧ ಕೈಗಾರಿಕೆಗಳ ಮುಖ್ಯಸ್ಥರು, ನೀರು, ವಿದ್ಯುತ್ ಹಾಗೂ ಸಮರ್ಪಕ ರಸ್ತೆ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರು.

ಮನವಿ ಸ್ಪಂದಿಸದ ಸಚಿವರು, ‘ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ ಹಾಗೂ ಅಭಿವೃದ್ಧಿಗೆ ಪೂರಕ ವಾತಾವರಣವಿದೆ. ಅಧಿಕಾರಿಗಳು ಕೈಗಾರಿಕೆಗಳ ಸಮಸ್ಯೆಗೆ ಸ್ಪಂದಿಸುತ್ತಾರೆ. ಕೈಗಾರಿಕಾಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಭರವಸೆ ನೀಡಿದರು.

ಮಿಟ್ಸುಬಿಷಿ, ಜಿಎಸ್‌ಕೆ, ಹೊಂಡಾ ಹಾಗೂ ಸ್ಕ್ಯಾನಿಯಾ ಕಂಪನಿ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ನಾನು ಕೈಗಾರಿಕಾ ಸಚಿವನಾದ ಬಳಿಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕೈಗಾರಿಕೆಗಳಿಗೆ ಭೇಟಿ ನೀಡುತ್ತಿದ್ದೇನೆ. ಬೆಳಗಾವಿ, ಹುಬ್ಬಳ್ಳಿ–ಧಾರವಾಡ ಹಾಗೂ ಮೈಸೂರು ಜಿಲ್ಲೆಯ ಕೈಗಾರಿಕೆಗಳನ್ನು ಪರಿಶೀಲಿಸಿದ್ದೇನೆ. ಆ ಭಾಗದ ಕೈಗಾರಿಕೋದ್ಯಮಿಗಳು ಸಮಸ್ಯೆ ಗಮನಕ್ಕೆ ತಂದಿದ್ದಾರೆ’ ಎಂದರು.

ವಿದ್ಯುತ್‌ ಸಮಸ್ಯೆ: ‘ನಾನೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಕೈಗಾರಿಕೋದ್ಯಮಿಗಳ ಬಳಿ ಹೋಗಿ ಸಮಸ್ಯೆ ತಿಳಿದು ಪರಿಹರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಹಿಂದೆ ಕೈಗಾರಿಕಾ ಸಚಿವರಾಗಿದ್ದ ದೇಶಪಾಂಡೆ ಈ ಕೆಲಸ ಮಾಡಿದ್ದಾರೆ. ಅದನ್ನು ನಾನು ಮುಂದುವರಿಸುತ್ತಿದ್ದೇನೆ. ಜಿಲ್ಲೆಯ ಕೈಗಾರಿಕೋದ್ಯಮಿಗಳು ಮುಖ್ಯವಾಗಿ ವಿದ್ಯುತ್‌ ಸಮಸ್ಯೆ ಪ್ರಸ್ತಾಪಿಸಿದ್ದಾರೆ. ತಾತ್ಕಾಲಿಕವಾಗಿ ವಾರದೊಳಗೆ 2 ಫೀಡರ್‌ನಲ್ಲಿ ವಿದ್ಯುತ್ ನೀಡಲಾಗುವುದು’ ಎಂದು ತಿಳಿಸಿದರು.

‘ಕೈಗಾರಿಕಾ ಪ್ರದೇಶಕ್ಕೆ ಶಾಶ್ವತವಾಗಿ ಹೊಸ ಟ್ರಾನ್ಸ್‌ಫರ್ಮರ್‌ ಹಾಗೂ ಉಪಕೇಂದ್ರಗಳನ್ನು ನೀಡಲಾಗುವುದು. ಈ ಸಂಬಂಧ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭಿಸುತ್ತೇವೆ. ರಸ್ತೆ ಅಭಿವೃದ್ಧಿ ಸಂಬಂಧ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ. ಜಿಲ್ಲೆಗೆ ಈಗಾಗಲೇ ಕೆ.ಸಿ ವ್ಯಾಲಿ ನೀರು ಬಂದಿದ್ದು. 3ನೇ ಹಂತದಲ್ಲಿ ನೀರು ಸಂಸ್ಕರಿಸಲು ಸ್ವಲ್ಪ ಕಾಲಾವಕಾಶ ಬೇಕು’ ಎಂದರು.

ರಾಜಕೀಯದ ಪ್ರಶ್ನೆಯಿಲ್ಲ: ಸಚಿವ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ನಡೆದ ಸಚಿವರ ಉಪಾಹಾರ ಕೂಟದ ಬಗ್ಗೆ ಪ್ರತಿಕ್ರಿಯಿಸಿದ ಜಾರ್ಜ್‌, ‘ಶಿವಕುಮಾರ್‌ ನಮ್ಮ ಸಂಪುಟ ಸಹೋದ್ಯೋಗಿ. ಅವರು ಉಪಾಹಾರಕ್ಕೆ ಆಹ್ವಾನಿಸಿದ್ದರಿಂದ ಹೋಗಿದ್ದೆವು. ಇದರಲ್ಲಿ ರಾಜಕೀಯದ ಪ್ರಶ್ನೆಯಿಲ್ಲ. ಅವರ ಮನೆಯಲ್ಲಿ ಯಾವ ತಟ್ಟೆಯಲ್ಲಿ ತಿಂಡಿ ಕೊಟ್ಟರು ಎಂಬುದು ಗೊತ್ತಿಲ್ಲ. ಚಿನ್ನಾನು ಇಲ್ಲ, ಬೆಳ್ಳಿನೂ ಇಲ್ಲ’ ಎಂದರು.

‘ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರು. ಅವರನ್ನು ಎಲ್ಲದಕ್ಕೂ ಕರೆಯುವುದಕ್ಕೆ ಆಗುವುದಿಲ್ಲ. ಅವರು ಕರೆದಾಗ ನಾವೇ ಹೋಗಿದ್ದೇವೆ. ಶಾಸಕಾಂಗ ಪಕ್ಷದ ನಾಯಕರಾದ ಅವರು ಎಲ್ಲದಕ್ಕೂ ಬರಲು ಆಗುವುದಿಲ್ಲ. ನಾನು ಈಗ ಇಲ್ಲಿಗೆ ಬಂದಿದ್ದೇನೆ. ಎಲ್ಲರೂ ಬರುವುದಕ್ಕೆ ಸಾಧ್ಯವೆ? ತಿಂಡಿ ತಿನ್ನಲು ಶಿವಕುಮಾರ್‌ ಮನೆಗೆ ಹೋಗಿದ್ದೆವೆಯೇ ಹೊರತು ರಾಜಕೀಯ ಚರ್ಚೆಗಲ್ಲ’ ಎಂದು ಸ್ಪಷ್ಟಪಡಿಸಿದರು.

ಗುಲ್ಲು ಎಬ್ಬಿಸಿದ್ದರು: ‘ಸರ್ಕಾರ ಇವತ್ತು, ನಾಳೆ ಬೀಳುತ್ತದೆ ಎಂದು ವಿಪಕ್ಷದವರೇ ಗುಲ್ಲು ಎಬ್ಬಿಸಿದ್ದರು. ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಹಾಕಲಿಲ್ಲ. ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದ ಬಿಜೆಪಿ ನಾಯಕರು ಈಗ ಸುಮ್ಮನಾಗಿದ್ದಾರೆ. ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಏನಾಯಿತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಮ್ಮಿಶ್ರ ಸರ್ಕಾರ 5 ವರ್ಷ ಪೂರೈಸಲಿದೆ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರೇ ಮುಂದುವರಿಯುತ್ತಾರೆ’ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಿಇಒ ಎನ್‌.ಶಿವಶಂಕರ್‌, ನಿರ್ದೇಶಕ ಸತೀಶ್, ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !