ಶುಕ್ರವಾರ, ಫೆಬ್ರವರಿ 21, 2020
27 °C

ಕೋಲಾರ: ದೇಗುಲದಲ್ಲಿ ಮಾನಸಿಕ ಅಸ್ವಸ್ಥನ ಪುಂಡಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ನಗರದ ಕುರುಬರಪೇಟೆಯಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ‌ ದೇವಸ್ಥಾನದ ಗರ್ಭಗುಡಿಗೆ ನುಗ್ಗಿ ರಂಪಾಟ‌‌ ಮಾಡಿದ‌ ಮಾನಸಿಕ ಅಸ್ವಸ್ಥ ಯುವಕನನ್ನು ಸಾರ್ವಜನಿಕರು ಶನಿವಾರ ರಾತ್ರಿ ಹಿಗ್ಗಾಮುಗ್ಗಾ ಥಳಿಸಿ‌ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ನಗರದ ಸಾರಿಗೆ‌ ನಗರ ನಿವಾಸಿಯಾಗಿರುವ ಯುವಕ ರಾತ್ರಿ 10 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಂದು ಏಕಾಏಕಿ ಗರ್ಭಗುಡಿಗೆ ನುಗ್ಗಿದ್ದಾನೆ. ಈ ವೇಳೆ ಅರ್ಚಕರು ಹಾಗೂ ಭಕ್ತರು ಆತನನ್ನು ದೇವಸ್ಥಾನದಿಂದ ಹೊರ ಕಳುಹಿಸಲು ಯತ್ನಿಸಿದ್ದಾರೆ. ಆದರೆ, ಭಕ್ತರು ಹಾಗೂ ಅರ್ಚಕರೊಂದಿಗೆ ವಾಗ್ವಾದ ನಡೆಸಿ, ದೇವರ ಎದುರು ಅಂಗಾತ ಮಲಗಿ ಬಟ್ಟೆ ಹರಿದುಕೊಂಡು, ‘ನನ್ನನ್ನು ಬಲಿ‌ ತೆಗೆದುಕೋ ದೇವರೇ’ ಎಂದು ಚೀರಾಡಿದ್ದಾನೆ.

ಇದರಿಂದ ಕೆರಳಿದ ಆತನನ್ನು ದೇವಸ್ಥಾನದಿಂದ ಹೊರಗೆ ಎಳೆದುಕೊಂಡು ಬಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಘಟನೆಯ ವಿಷಯ‌ ತಿಳಿದು‌ ಸ್ಥಳಕ್ಕೆ ಬಂದ ಶ್ರೀರಾಮಸೇನೆ, ಬಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆ ಸದಸ್ಯರು ಯುವಕನ ಬೈಕ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಯುವಕ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ದೇವಸ್ಥಾನಕ್ಕೆ ಅತಿಕ್ರಮ ಪ್ರವೇಶ, ಅಪರಾಧ ಸಂಚು ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ‌ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತನ ಪೂರ್ವಾಪರ ಹಾಗೂ ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)