ಶುಕ್ರವಾರ, ಫೆಬ್ರವರಿ 3, 2023
23 °C
ನಿರ್ಲಕ್ಷ್ಯಕ್ಕೊಳಗಾದ ಭೋವಿ ಸಮುದಾಯದ ಗ್ರಾಮ

ಸೌಕರ್ಯ ಇಲ್ಲದೆ ಸೊರಗಿದ ಶಿವಪುರ

ಆರ್.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ಭೋವಿ ಸಮುದಾಯ ವಾಸವಿರುವ ಶಿವಪುರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಕನಿಷ್ಠ ಮೂಲ ಸೌಕರ್ಯವು ಇಲ್ಲದೆ ಸೊರಗಿದೆ.

ರಸ್ತೆ, ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಶಿವಪುರದಿಂದ ದೂರ ಉಳಿದಿದೆ. ಇನ್ನೂ ಸ್ವಚ್ಛತೆ ಮರಿಚಿಕೆಯಾಗಿದೆ.

ತಾಲ್ಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾಗಿರುವ ಶಿವಪುರದಲ್ಲಿ ಪರಿಶಿಷ್ಟ ಜಾತಿ 400 ಕುಟುಂಬಗಳಿವೆ.  ‌2,500 ಜನರು ಇಲ್ಲಿ ವಾಸಿಸುತ್ತಿದ್ದಾರೆ. ಇವರೆಲ್ಲರು ಕೃಷಿ ಕೂಲಿ ಕಾರ್ಮಿಕರು ಹಾಗೂ ಕೂಲಿಗಳು. ಇವರಿಗೆ ಕನಿಷ್ಠ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ಗಗನಕುಸುಮವಾಗಿದೆ.

ಗ್ರಾಮದಲ್ಲಿ ತಾಜ್ಯ ವಿಲೇವಾರಿಯನ್ನು ಸೂಕ್ತ ರೀತಿಯಲ್ಲಿ ಮಾಡದ ಕಾರಣ ಅಶುಚಿತ್ವ ತಾಂಡವವಾಡುತ್ತಿದೆ. ಚರಂಡಿ, ರಸ್ತೆ ಬದಿ ಹಾಗೂ ಬಯಲು ಪ್ರದೇಶದಲ್ಲಿನ ಕಸ ಕೊಳೆತು ನಾರುತ್ತಿದೆ. ಇದು ನಾಯಿ ಮತ್ತು ಹೆಗ್ಗಣಗಳ ಆವಾಸ ಸ್ಥಾನವಾಗಿದೆ. ಸೊಳ್ಳೆ ಕಾಟವು ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ ಇಲ್ಲಿನ ಜನ.

ಕಾಡಿನಂತಿರುವ ಸ್ಮಶಾನ: ಗ್ರಾಮದ ಸ್ಮಶಾನದಲ್ಲಿ ಗಿಡಗೆಂಟಿ ಬೆಳೆದು ಕಾಡಿನಂತಿದ್ದು,  ಜನ ಅಲ್ಲಿಗೆ ಹೋಗಲು ಭಯಪಡುತ್ತಿದ್ದಾರೆ. ಸ್ಮಶಾನಕ್ಕೆ ಹೋಗಲು ರಸ್ತೆಯೂ ಇಲ್ಲ. ಸ್ಮಶಾನ ಪ್ರದೇಶದಲ್ಲಿ ಕಾಲು ಇಡಲು ಆಗದಷ್ಟು ಮುಳ್ಳು ಕಂಟಿಗಳು ಆವರಿಸಿಕೊಂಡಿದೆ. ಅಂತ್ಯ ಸಂಸ್ಕಾರ ಸಮಯದಲ್ಲಿ ಸ್ಥಳ ಸ್ವಚ್ಛತೆ ಮಾಡುವುದೇ ಸವಾಲಾಗಿದೆ. ಸ್ಮಶಾನದ ವಿಸ್ತೀರ್ಣ 3.15 ಎಕರೆ ಇದೆ. ಆದರೆ ಕೆಲವರು ಸ್ಮಶಾನ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಪಂಚಾಯಿತಿಯವರು ಸ್ಮಶಾನ ಸರ್ವೇ ಮಾಡಿಸಿ, ಒತ್ತುವರಿ ತೆರವುಗೊಳಿಸಿ, ತಂತಿಬೇಲಿ ಅಳವಡಿಸಬೇಕು. ಗಿಡಗೆಂಟಿ ತೆರವುಗೊಳಿಸಿ, ಸ್ವಚ್ಛಗೊಳಿಸಬೇಕೆಂದು ಸ್ಥಳೀಯ ಆಗ್ರಹ.

ಗ್ರಾಮಕ್ಕೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸಲು ಚಲ್ದಿಗಾನಹಳ್ಳಿ ಗ್ರಾಮ ಪಂಚಾಯಿತಿ ಮುಂದಾಗಬೇಕು. ಕಸದಿಂದ ತುಂಬಿರುವ ಚರಂಡಿಗಳನ್ನು ಸ್ವಚ್ಛಗೊಳಿಸಿ, ರಸ್ತೆ ಬದಿಯ ಕಸ ರಾಶಿ ತೆರವುಗೊಳಿಸಿ, ಮತ್ತೆ ಇಲ್ಲಿ ವಿಲೇವಾರಿ ಮಾಡದಂತೆ ಕ್ರಮ ವಹಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆ.

ನೀರಿಗಾಗಿ ಪರದಾಟ

ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲಿನ ಜನ ಪರಡಾಡುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕವನ್ನು ನಗರದ ಹೊರ ವಲಯದ ಕೊಳಚೆ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ಇದರಿಂದ ಮಹಿಳೆಯರು ನೀರಿಗಾಗಿ ಒಂದೂವರೆ ಕೀ.ಮಿ ನಡೆಯಬೇಕಿದೆ. ನಿತ್ಯ ನೀರಿಗಾಗಿ ನಡೆಯುವುದು ದೊಡ್ಡ ಗೋಳಾಗಿದೆ. ಕಷ್ಟವಾದರೂ ನೀರು ತುಂಬಿಸಿಕೊಳ್ಳಬೇಕಾದ ಅನಿವಾರ್ಯ ಇದೆ ಎನ್ನುತ್ತಾರೆ ಮಹಿಳೆಯರು. ಕೊಳಚೆ ಪ್ರದೇಶದಲ್ಲಿ ನೀರಿನ ಘಟಕ ಇರುವುದರಿಂದ ಇಲ್ಲಿನ ಕಾಯಿಲೆ ಭೀತಿಯಲ್ಲಿದ್ದಾರೆ.

ಹೊರವಲಯದಿಂದ ನೀರು ತರುವುದನ್ನು ತಪ್ಪಿಸಲು ಗ್ರಾಮಕ್ಕೆ ನಲ್ಲಿಗಳ ಮೂಲಕ ನೀರು ಪೂರೈಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಚಲ್ದಿಗಾನಹಳ್ಳಿ ಗ್ರಾ.ಪಂ. ಪಿಡಿಒ ಸಿ.ಎಲ್.ಚಿನ್ನಪ್ಪ, ‘ನಲ್ಲಿ ಮೂಲಕ ಕುಡಿಯುವ ನೀರು ಪೂರೈಕೆಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎಂದು ತಿಳಿಸಿದ್ದಾರೆ.

ಮೂಗು ಮುಚ್ಚಿಕೊಂಡು ಪಾಠ ಕೇಳಬೇಕು

ಕೆರೆ ಮೂಲವಾಗಿರುವ ರಾಜಕಾಲುವೆ ಕೂಡ ಒತ್ತುವರಿಯಾಗಿದೆ. ಇದರಿಂದ ಮಳೆ ಬೀಳುವ ಸಂದರ್ಭದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಶಾಲೆಯ ಸಮೀಪವಿರುವ ಕುಂಟೆ ಜೊಂಡು ಮತ್ತು ಪಾಚಿಯಿಂದ ಆವೃತ್ತವಾಗಿದೆ. ಈ ನೀರು ಕುಡಿಯುವ ಧನಕರುಗಳಿಗೆ ಅಪಾಯ ಎದುರಾಗುವ ಆತಂಕ ಇಲ್ಲಿನ ಜನರಲ್ಲಿದೆ.  ಇದರ ಸಮೀಪ ಅವೈಜ್ಞಾನಿಕವಾಗಿ ವಿಲೇವಾರಿ ಮಾಡಿರುವ ತಾಜ್ಯ ಕೊಳೆತು ನಾರುತ್ತಿದೆ. ಶಾಲಾ ಮಕ್ಕಳು ಮೂಗು ಮುಚ್ಚಿಕೊಂಡು ಪಾಠ ಕೇಳಬೇಕಿದೆ. ಶಿಕ್ಷಕರಿಗೂ ಸಹ ಕಿರಿಕಿರಿಯಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು