ಕೋಲಾರ: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಿಲ್ಲ-ಕೃಷ್ಣ ಬೈರೇಗೌಡ

7
ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ

ಕೋಲಾರ: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಿಲ್ಲ-ಕೃಷ್ಣ ಬೈರೇಗೌಡ

Published:
Updated:
Deccan Herald

ಕೋಲಾರ: ‘ಹಿಂದಿನ ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ ಬಹುತೇಕ ಕೆರೆಗಳು ಭರ್ತಿಯಾಗಿದ್ದವು. ಹೀಗಾಗಿ ಕುಡಿಯುವ ನೀರಿಗೆ ಸಮಸ್ಯೆಯಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಇಲ್ಲಿ ಶುಕ್ರವಾರ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಮತ್ತು ಅಭಿವೃದ್ಧಿ ಲಿಮಿಟೆಡ್‌ನ (ಕೆಆರ್‌ಐಡಿಎಲ್‌) ನೂತನ ಕಚೇರಿ ಉದ್ಘಾಟಿಸಿ ಮಾತನಾಡಿ, ‘ಜಿಲ್ಲೆಯಲ್ಲಿ ಈ ಹಿಂದೆ ಟ್ಯಾಂಕರ್‌ ಮೂಲಕ ನೀರು ಮಾಡಿರುವ ಗುತ್ತಿಗೆದಾರರ ಬಾಕಿ ಬಿಲ್‌ ಪಾವತಿಸಲಾಗುವುದು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳುತ್ತೇವೆ. ಕೆಆರ್‌ಐಡಿಎಲ್‌ಗೆ ಸ್ವಂತ ಕಟ್ಟಡದ ಅಗತ್ಯವಿತ್ತು. ಸರ್ಕಾರದ ಅನೇಕ ಕೆಲಸಗಳನ್ನು ಕೆಆರ್‌ಐಡಿಎಲ್‌ನವರು ಅನುಷ್ಠಾನಗೊಳಿಸುತ್ತಾರೆ. ಸರ್ಕಾರಿ ಕಟ್ಟಡಗಳು, ಗ್ರಾಮೀಣ ರಸ್ತೆಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಕೆಲಸಗಳನ್ನು ನಿರ್ವಹಿಸುತ್ತಾರೆ’ ಎಂದರು.

‘ಕೆ.ಸಿ ವ್ಯಾಲಿ ಯೋಜನೆ ಬಗ್ಗೆ ನ್ಯಾಯಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಯೋಜನೆ ಅನುಷ್ಠಾನದಲ್ಲಿ ಯಾವುದೇ ಲೋಪವಾಗಿಲ್ಲ, ನೀರು ಶುದ್ಧವಾಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕಿದೆ. ಈ ಸಂಬಂಧ ಪರಿಸರ, ಸಣ್ಣ ನೀರಾವರಿ ಇಲಾಖೆ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ’ ಎಂದು ವಿವರಿಸಿದರು.

ಮಳೆ ಸುಳಿವಿಲ್ಲ: ‘ಜಿಲ್ಲೆಯಲ್ಲಿ ಆರಿದ್ರ ಮಳೆಯಾದ ನಂತರ ಮಳೆ ಸುಳಿವಿಲ್ಲ. ಬಿಸಿ ಗಾಳಿ ಬೀಸುತ್ತಿದೆ. ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯವರು ಕ್ರಮ ವಹಿಸಬೇಕು’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.

ವಿ.ವಿ ಕಟ್ಟಡಕ್ಕೆ ಭೇಟಿ: ನಂತರ ವಿಧಾನಸಭಾಧ್ಯಕ್ಷರು ಹಾಗೂ ಸಚಿವರು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕಟ್ಟಡಕ್ಕೆ ಭೇಟಿ ನೀಡಿ ವಿ.ವಿ ಮೂಲಸೌಲಭ್ಯಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

‘ವಿ.ವಿಯಲ್ಲಿ ವಿದ್ಯಾರ್ಥಿಗಳಿಗೆ ಸಿಗುವ ಸೌಲಭ್ಯಗಳ ವಿವರವನ್ನು ವೆಬ್‌ಸೈಟ್‌ನಲ್ಲಿ ಹಾಕಲಾಗುತ್ತದೆ. ಕಡಿಮೆ ಅಂಕ ಗಳಿಸಿದವರಿಗೆ ದಾಖಲಾತಿ ನೀಡಿದ್ದರೆ ಆ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನೆ ಮಾಡಬಹುದು. ವಿ.ವಿಯಲ್ಲಿ ಯಾವುದೇ ದೂರುಗಳಿಲ್ಲ. ಈ ವಿ.ವಿ ಆರಂಭದಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ’ ಎಂದು ವಿ.ವಿ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಹೇಳಿದರು.

ಶಾಸಕರಾದ ಕೆ.ಶ್ರೀನಿವಾಸಗೌಡ, ಕೆ.ವೈ ನಂಜೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ಯಶೋದಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌, ಕೆಆರ್ಐಡಿಎಲ್‌ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ಪಾಲ್ಗೊಂಡಿದ್ದರು.

ಅಂಕಿ ಅಂಶ.....
* ₹ 1 ಕೋಟಿ ಕೆಆರ್‌ಐಡಿಎಲ್‌ ಕಚೇರಿ ನಿರ್ಮಾಣ ವೆಚ್ಚ
* ₹ 75 ಲಕ್ಷ ನಿವೇಶನದ ಮೌಲ್ಯ
* 30 ಗುಂಟೆ ಕಟ್ಟಡದ ವಿಸ್ತೀರ್ಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !