ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: 17ಸಿ ಫಾರಂ ಲಭ್ಯ, ಸಿಸಿಟಿವಿ ದೃಶ್ಯ ಮಾಯ!

ಮಾಲೂರು ಕ್ಷೇತ್ರ ಫಲಿತಾಂಶ–ನ್ಯಾಯಾಲಯದಲ್ಲಿ ತಕರಾರು ಅರ್ಜಿ: ಇವಿಎಂ ಉಗ್ರಾಣ, ಮಾಲೂರು ತಾಲ್ಲೂಕು ಖಜಾನೆ ತಪಾಸಣೆ
Published : 14 ಆಗಸ್ಟ್ 2024, 7:08 IST
Last Updated : 14 ಆಗಸ್ಟ್ 2024, 7:08 IST
ಫಾಲೋ ಮಾಡಿ
Comments

ಕೋಲಾರ: 2023ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಾಲೂರು ಕ್ಷೇತ್ರದ ಫಲಿತಾಂಶದ ತಕರಾರು ಅರ್ಜಿ ವಿಚಾರವಾಗಿ ಹೈಕೋರ್ಟ್‌ ಕೇಳಿದ ಕೆಲ ದಾಖಲೆಗಳು ಲಭ್ಯವಾಗಿವೆ. ಇನ್ನು ಕೆಲವು ದಾಖಲೆಗಳನ್ನು ಒದಗಿಸಲು ಕೋಲಾರ ಜಿಲ್ಲಾಡಳಿತ ಪ್ರಯತ್ನ ನಡೆಸಿದೆ.

ನ್ಯಾಯಾಲಯ ಕೇಳಿದ ನಿರ್ದಿಷ್ಟ ದಾಖಲೆಗಳು ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವಿದ್ಯುನ್ಮಾನ ಮತಯಂತ್ರದ (ಇವಿಎಂ) ಉಗ್ರಾಣದಲ್ಲಿ ಲಭ್ಯವಾಗಲಿಲ್ಲ. ಈ ವಿಚಾರ ಜಿಲ್ಲಾಡಳಿತಕ್ಕೆ ಒಮ್ಮೆಲೇ ಆತಂಕ ತಂದೊಡ್ಡಿತು. ನಂತರ ಮಾಲೂರಿನ ತಾಲ್ಲೂಕು ಖಜಾನೆಯಲ್ಲಿ ಇರಬಹುದೇ ಎಂಬುದನ್ನು ಪರಿಶೀಲಿಸಿದಾಗ ‘17 ಸಿ’ ಫಾರಂನ ಕಾರ್ಬನ್‌ ಪ್ರತಿಗಳು ಲಭ್ಯವಾಗಿವೆ.

ಆದರೆ, ಮತ ಎಣಿಕೆ ಸಂದರ್ಭದಲ್ಲಿನ ಸಿ.ಸಿ.ಟಿ.ವಿ ದೃಶ್ಯಾವಳಿ ಇನ್ನೂ ಸಿಕ್ಕಿಲ್ಲ. ಈ ಸಂಬಂಧ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಸಿ.ಸಿ.ಟಿ.ವಿ ಅಳವಡಿಸಿದ ಗುತ್ತಿಗೆದಾರರಿಂದ ದೃಶ್ಯಾವಳಿ ಪಡೆಯಲು ಜಿಲ್ಲಾಡಳಿತ ಮುಂದಾಗಿದೆ.

ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಕ್ರಂ ಪಾಷಾ, ನ್ಯಾಯಾಲಯದ ಸೂಚನೆಯಂತೆ ಮಂಗಳವಾರ ಪೊಲೀಸರ ಬಿಗಿ ಭದ್ರತೆಯಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಇವಿಎಂ ಉಗ್ರಾಣದ ಬಾಗಿಲು ತೆರೆದು ಮತ ಎಣಿಕೆ ಸಂದರ್ಭದಲ್ಲಿ ಸಂಗ್ರಹಿಸಿಟ್ಟಿದ್ದ ದಾಖಲೆಗಳನ್ನು ತಡಕಾಡಿದರು.

‌ಜಿಲ್ಲಾಧಿಕಾರಿ ಕಚೇರಿಯ ಸಂಕೀರ್ಣದಲ್ಲಿರುವ ಉಗ್ರಾಣದ ಬಾಗಿಲು ತೆರೆಯಲು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯ ಅನುಮತಿಯನ್ನೂ ಪಡೆಯಲಾಗಿತ್ತು.

ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಕ್ರಂ ಪಾಷಾ, ‘ನ್ಯಾಯಾಲಯ ಕೇಳಿದ ನಿರ್ದಿಷ್ಟ ದಾಖಲೆಗಳು ಉಗ್ರಾಣದ ಭದ್ರತಾ ಕೊಠಡಿಯಲ್ಲಿ ಲಭ್ಯವಾಗಲಿಲ್ಲ. ಚುನಾವಣಾ ಪ್ರಕ್ರಿಯೆ ಮುಗಿದ ನಂತರದ ದಾಖಲೆಗಳು ಹಾಗೂ ಇವಿಎಂಗೆ ಸಂಬಂಧಿಸಿದ ದಾಖಲೆಗಳ ಲಭ್ಯ ಇವೆ. ಮಾಲೂರು ತಾಲ್ಲೂಕಿನ ಖಜಾನೆಯಲ್ಲಿ ಹುಡುಕಿದಾಗ 17 ‘ಸಿ’ ಫಾರಂನ ಕಾರ್ಬನ್‌ ಪ್ರತಿಗಳು ಸಿಕ್ಕಿವೆ. ಈ ದಾಖಲೆಗಳನ್ನು ನ್ಯಾಯಾಲಯಕ್ಕೆ ಒಪ್ಪಿಸುತ್ತೇವೆ’ ಎಂದರು.

ನ್ಯಾಯಾಲಯ ಯಾವ ದಾಖಲೆ ಕೇಳಿದೆ ಎಂಬ ಪ್ರಶ್ನೆಗೆ, ‘ಮತ ಎಣಿಕೆ ಸಂದರ್ಭದ ಸಿ.ಸಿ.ಟಿ.ವಿ ದೃಶ್ಯಾವಳಿ ಹಾಗೂ 17 ‘ಸಿ’ ಫಾರಂನ ಕಾರ್ಬನ್‌ ಪ್ರತಿಗಳನ್ನು ಕೇಳಿದೆ' ಎಂದು ಹೇಳಿದರು.

ಆರಂಭದಲ್ಲಿಯೇ ಮಾಹಿತಿ ಕೇಳಿದ್ದು, ಆಗ ಏಕೆ ಎಚ್ಚೆತ್ತುಕೊಳ್ಳಲಿಲ್ಲ ಎಂಬ ಪ್ರಶ್ನೆಗೆ, ‘ಆಗಲೇ ಮಾಹಿತಿ ನೀಡಬೇಕಿತ್ತು’ ಎಂದರು.

ಇವಿಎಂ ಉಗ್ರಾಣದ ಬಾಗಿಲು ತೆರೆಯುವ ಮುನ್ನ ಜಿಲ್ಲಾಧಿಕಾರಿಯು ರಾಜಕೀಯ ಪಕ್ಷ ಹಾಗೂ ಅಧಿಕಾರಿಗಳ ಸಭೆ ನಡೆಸಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಎಂ.ಮಲ್ಲೇಶ್‌ ಬಾಬು, ಬಿಜೆಪಿ ಅಭ್ಯರ್ಥಿ ಕೆ.ಎಸ್‌.ಮಂಜುನಾಥ್ ಗೌಡ, ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯಕುಮಾರ್, ಕೆಆರ್‌ಎಸ್ ಪಕ್ಷದ ಅಭ್ಯರ್ಥಿ ಮಹೇಶ್ ಸೇರಿದಂತೆ ಮಾಲೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ.ವೇಣುಗೋಪಾಲ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ಸಿಪಿಎಂ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ಜೆಡಿಎಸ್ ಮುಖಂಡ ಬಣಕನಹಳ್ಳಿ ನಟರಾಜ್‌ ಪಾಲ್ಗೊಂಡಿದ್ದರು. ಅಲ್ಲದೇ, ಉಗ್ರಾಣದೊಳಗೂ ತೆರಳಿದ್ದರು.

ಈ ಸಂದರ್ಭದಲ್ಲಿ ಶಾಸಕ ನಂಜೇಗೌಡ ಪುತ್ರರಾದ ಹರೀಶ್, ಸುನಿಲ್ ಹೊರಗಡೆ ಕಾರ್ಯಕರ್ತರ ಜೊತೆಗೆ ಇದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳಾ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕುಮಾರಸ್ವಾಮಿ ದಾಖಲೆ ಪರಿಶೀಲನೆ ವೇಳೆ ಇದ್ದರು.

ಮಾಲೂರು ತಾಲ್ಲೂಕು ಕಚೇರಿ ಖಜಾನೆಯಲ್ಲಿ ತಹಶೀಲ್ದಾರ್‌ ಕೆ.ರಮೇಶ್‌ ನೇತ್ವತದಲ್ಲಿ ದಾಖಲೆಗಳಿಗಾಗಿ ತಪಾಸಣೆ ನಡೆಸಲಾಯಿತು. 

ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 2023ರ ಮೇ 13ರಂದು ನಡೆದ ಮಾಲೂರು ವಿಧಾನಸಭೆ ಕ್ಷೇತ್ರದ ಮತ ಎಣಿಕೆಯಲ್ಲಿ ನಂಜೇಗೌಡ 50,955 ಮತ ಪಡೆದಿದ್ದರೆ, ಪ್ರತಿಸ್ಪರ್ಧಿ ಮಂಜುನಾಥ ಗೌಡ 50,707 ಮತ ಗಳಿಸಿದ್ದರು.

ಅಂದೇ ಮಂಜುನಾಥ್‌ ಗೌಡ ಹಾಗೂ ಬೆಂಬಲಿಗರು ಮರು ಮತ ಎಣಿಕೆಗೆ ಪಟ್ಟು ಹಿಡಿದಿದ್ದರು. ಅದಕ್ಕೆ ಅವಕಾಶ ನೀಡದ ಅಂದಿನ ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಅವರು ಅಭ್ಯರ್ಥಿಗಳ ಸಮ್ಮುಖದಲ್ಲಿ ಚುನಾವಣಾ ನಿಯಮದ ಪ್ರಕಾರ ಕ್ಷೇತ್ರದ ಐದು ಮತಗಟ್ಟೆಗಳ ವಿವಿ ಪ್ಯಾಟ್‌ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿಕೊಂಡು ಮತ ತಾಳೆ ಮಾಡಿದ್ದರು. ಯಾವುದೇ ವ್ಯತ್ಯಾಸ ಕಂಡುಬಾರದ ಕಾರಣ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿದ್ದರು. ಮರು ಎಣಿಕೆಗೆ ಅವಕಾಶ ನೀಡುವಂತೆ ಕೋರಿ ಮಂಜುನಾಥ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು.

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮುಖಂಡರು ಭಾಗಿ ಡಿ.ಸಿ, ಎಸ್‌.ಪಿ ಸಮ್ಮುಖದಲ್ಲಿ ಪರಿಶೀಲನೆ ದಾಖಲೆ ಕೋರಿರುವ ನ್ಯಾಯಾಲಯ

ಮಾಲೂರು ಕ್ಷೇತ್ರದ ಮತ ಎಣಿಕೆ ಸಂಬಂಧ ನಮ್ಮಲ್ಲಿ ಯಾವ ಮಾಹಿತಿ ಲಭ್ಯವಿದೆಯೋ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ‌. ಯಾವ ದಾಖಲೆ ಲಭ್ಯವಾಗಿಲ್ಲವೋ ಆ ಬಗ್ಗೆಯೂ ಮಾಹಿತಿ ನೀಡುತ್ತೇವೆ
-ಅಕ್ರಂ ಪಾಷಾ ಜಿಲ್ಲಾಧಿಕಾರಿ ಕೋಲಾರ
ತಾಲ್ಲೂಕು ಖಜಾನೆಯಲ್ಲಿ 17 ಸಿ ಫಾರಂ ಕಾರ್ಬನ್‌ ಪ್ರತಿಗಳು ಸಿಕ್ಕಿವೆ. ಬೂತ್‌ವಾರು ವಿಂಗಡಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಮೂಲ ಪ್ರತಿಗಳನ್ನು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ
-ಕೆ.ರಮೇಶ್‌ ತಹಶೀಲ್ದಾರ್‌ ಮಾಲೂರು

ಮರು ಮತ ಎಣಿಕೆಗೆ ದಾವೆ ಹೂಡಿದ್ದ ಬಿಜೆಪಿ ಅಭ್ಯರ್ಥಿ

2023ರ ಚುನಾವಣೆಯಲ್ಲಿ ಮಾಲೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ ಕೇವಲ 248 ಮತಗಳಿಂದ ಗೆದ್ದಿದ್ದರು. ಮತ ಎಣಿಕೆಯಲ್ಲಿ ವ್ಯತ್ಯಾಸವಾಗಿದ್ದು ಮರು ಮತ ಎಣಿಕೆಗೆ ಅವಕಾಶ ನೀಡುವಂತೆ ಕೋರಿ ಪರಾಜಿತ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕೆ.ಎಸ್‌.ಮಂಜುನಾಥ್‌ ಗೌಡ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ಈಗ ನಡೆಯುತ್ತಿದೆ.

17 ‘ಸಿ’ ಫಾರಂ ಎಂದರೇನು?

ಒಂದು ಮತಗಟ್ಟೆಯಲ್ಲಿ ಒಟ್ಟು ಮತಗಳಿವೆ ಹಾಗೂ ಎಷ್ಟು ಮತಗಳು ಚಲಾವಣೆಗೊಂಡಿವೆ ಎಂಬುದನ್ನು ಫಾರಂನಲ್ಲಿ ನಮೂದಿಸಿ ಅದಕ್ಕೆ ಮೊದಲು ಚುನಾವಣಾಧಿಕಾರಿ ಸಹಿ ಮಾಡುತ್ತಾರೆ. ನಂತರ ಅಭ್ಯರ್ಥಿಯ ಏಜೆಂಟ್‌ ಸಹಿ ಹಾಕುತ್ತಾರೆ. ಇದಕ್ಕೆ 17 ಸಿ ಫಾರಂ (ಭಾಗ–1) ಎನ್ನುತ್ತಾರೆ. 17 ‘ಸಿ’ (ಭಾಗ–2) ಫಾರಂ ಎಂದರೆ ಮತ ಎಣಿಕೆ ವೇಳೆ ಯಾವ ಅಭ್ಯರ್ಥಿಗೆ ಒಟ್ಟು ಎಷ್ಟು ಮತಗಳು ಬಂದಿವೆ ಎಂಬುದನ್ನು ನಮೂದಿಸಿ ಸೂಪರ್‌ವೈಸರ್‌ ಹಾಗೂ ಏಜೆಂಟ್‌ ಸಹಿ ಮಾಡಲಾಗುತ್ತದೆ. ಇದರ ಮೂಲ ಪ್ರತಿಗಳನ್ನು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅದರ ಕಾರ್ಬನ್‌ ಪ್ರತಿಗಳನ್ನು ನ್ಯಾಯಾಲಯ ಕೇಳಿದೆ. 17 ‘ಎ’ ಪಾರಂ ಎಂದರೆ ಮತದಾನ ಮಾಡಲು ಬರುವ ಮತದಾರರು ಸಹಿ ಹಾಗೂ ಮಾಹಿತಿ ಇರುವ ಫಾರಂ.

ಬಿಗಿ ಭದ್ರತೆ ಭಾರಿ ಕುತೂಹಲ

ಇವಿಎಂ ಉಗ್ರಾಣದ ಬಾಗಿಲು ತೆರೆಯುವ ಸಂದರ್ಭದಲ್ಲಿ ಕೋಲಾರ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌ ಕಾಂತರಾಜ್‌ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿತ್ತು. ಪೊಲೀಸ್‌ ಸಿಬ್ಬಂದಿ ಸುತ್ತುವರಿದು ನಿಗಾ ವಹಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಕಾಂಗ್ರೆಸ್‌ ಜೆಡಿಎಸ್‌ ಮುಖಂಡರು ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಉಗ್ರಾಣದಿಂದಮಾರು ದೂರದಲ್ಲಿ ನಿಂತು ಪ್ರಕ್ರಿಯೆಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು.

ಪರಸ್ಪರ ಜೈಕಾರ ಘೋಷಣೆ

ಇವಿಎಂ ಉಗ್ರಾಣದಲ್ಲಿ ದಾಖಲೆಗಳನ್ನು ತಡಕಾಡಿ ವಾಪಸ್ ಬರುವಾಗ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರು ಪರಸ್ಪರ ತಮ್ಮ ನಾಯಕರಿಗೆ ಜೈಕಾರ ಕೂಗಿದರು. ಮೊದಲಿಗೆ ಬಿಜೆಪಿ ಮುಖಂಡ ಮಾಲೂರು ಕ್ಷೇತ್ರದ ಅಭ್ಯರ್ಥಿ ಕೆ.ಎಸ್‌.ಮಂಜುನಾಥ್‌ ಗೌಡ ಅವರಿಗೆ ಕಾರ್ಯಕರ್ತರು ಜೈಕಾರ ಹಾಕಿದರು. ಇದನ್ನು ನೋಡಿದ ಕಾಂಗ್ರೆಸ್‌ ಕಾರ್ಯಕರ್ತರು ಶಾಸಕ ಕೆ.ವೈ.ನಂಜೇಗೌಡ ಅವರಿಗೆ ಜೈಹಾಕಿ ಕೂಗಿದರು. ನಂಜೇಗೌಡ ಈ ಸಂದರ್ಭದಲ್ಲಿ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT