ಗುರುವಾರ , ಆಗಸ್ಟ್ 22, 2019
26 °C
ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿಕೆ

ಕೋಲಾರ | ನುಡಿಗಿಂತ ನೀರಿನ ದಾಹ ಹೆಚ್ಚಿದೆ: ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ

Published:
Updated:
Prajavani

ಕೋಲಾರ: ‘ನುಡಿಕಾರರಿಗೆ ಮೂರು ಕಾಸಿನ ಬೆಲೆಯಿಲ್ಲದ ಕಾಲಘಟ್ಟದಲ್ಲಿ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಅದು ದಲಿತ ಪ್ರಜ್ಞೆಯ ಅಸ್ಮಿತೆಯಾಗಿ ನಡೆಯಲಿ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಆಶಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ದಲಿತ ಸಾಹಿತ್ಯ ಸಮ್ಮೇಳನದ ಆಹ್ವಾನಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ‘ಇಂದು ನುಡಿಗಿಂತ ನೀರಿನ ದಾಹ ಹೆಚ್ಚಿದೆ. ನೀರಿನೊಂದಿಗೆ ನುಡಿ ಕಾಪಾಡುವ ಜವಾಬ್ದಾರಿ ಹಾಗೂ ಎಚ್ಚರಿಕೆ ಇರಬೇಕು’ ಎಂದು ಕಿವಿಮಾತು ಹೇಳಿದರು.

‘ಈ ಹಿಂದೆ ದಲಿತ ಸಾಹಿತ್ಯ ಸಮ್ಮೇಳನ ನಿರಾಕರಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಈಗ ಪ್ರತ್ಯೇಕವಾಗಿಯೇ ತೇರು ಎಳೆಯಲು ಒಪ್ಪುವ ಹಂತಕ್ಕೆ ಬಂದು ನಿಂತಿದೆ. ನುಡಿ ಜಾತ್ರೆಯಲ್ಲಿ ಈ ನೆಲದ ಗಂಭೀರ ನುಡಿ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುವ ಕೆಲಸವಾಗಲಿ’ ಎಂದು ಹೇಳಿದರು.

‘ಕೋಲಾರ ಜಿಲ್ಲೆಯು ದಲಿತ ಚಳವಳಿಯ ತವರು, ಬಾಯಾರಿದ ನಾಡು. ಈ ನೆಲದಲ್ಲಿ ಹಳ್ಳಿಗಾಡು ಹಸುಗೂಸೆ ಎಂಬ ಹಾಡು ದಲಿತ ಪ್ರಜ್ಞೆಯ ಬೀಜಾಂಕುರ ಬಿತ್ತಿತ್ತು. ಇಂದು ದಲಿತ ಸಮುದಾಯದ ಅನೇಕರು ವೀರಾಧಿವೀರರಾಗಿ, ಅಧಿಕಾರಸ್ಥರಾಗಿ ಮೆರೆದಾಡುತ್ತಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದರು.

ಸಹಕರಿಸಬೇಕು: ‘ಜಿಲ್ಲೆಯಲ್ಲಿ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಿದ್ದು, ಸಮ್ಮೇಳನದ ಯಶಸ್ಸಿಗೆ ಪ್ರತಿಯೊಬ್ಬರೂ ಸಹಕರಿಸಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ಮನವಿ ಮಾಡಿದರು.

‘ಎಲ್.ಹನುಮಂತಯ್ಯ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಮಹಾದ್ವಾರಕ್ಕೆ ನಗರ ನಿಮಾತೃ ಟಿ.ಚನ್ನಯ್ಯ, ವೇದಿಕೆಗೆ ಬಿ.ಆರ್.ಅಂಬೇಡ್ಕರ್‌ರ ಹೆಸರು ಇಡಲಾಗಿದೆ. ಸಂಸದ ಎಸ್‌.ಮುನಿಸ್ವಾಮಿ ಆ.17ರಂದು ಸಮ್ಮೇಳನ ಉದ್ಘಾಟಿಸುತ್ತಾರೆ. ವಿವಿಧ ವಿಚಾರಗೋಷ್ಠಿ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಸನ್ಮಾನ ನಡೆಯುತ್ತದೆ. ವಿದ್ವಾಂಸ ಮಲ್ಲೇಪುರಂ ಜಿ.ವೆಂಕಟೇಶ್ ಆ.18ರಂದು ಸಂಜೆ ಸಮಾರೋಪ ಭಾಷಣ ಮಾಡುತ್ತಾರೆ’ ಎಂದು ವಿವರಿಸಿದರು.

ಮೆರವಣಿಗೆ ಮೊಟಕು: ‘ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಯಿರುವ ಹಿನ್ನೆಲೆಯಲ್ಲಿ ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ ಮೊಟಕುಗೊಳಿಸಲಾಗಿದೆ. ಅಂಬೇಡ್ಕರ್, ಗಾಂಧೀಜಿ ಹಾಗೂ ಸರ್ವಜ್ಞರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಾಲ್ಮೀಕಿ ವೃತ್ತದಿಂದ ರಂಗಮಂದಿರದವರೆಗೆ ಕಾಲ್ನಡಿಗೆಯಲ್ಲಿ ಸಾಗಲಾಗುವುದು’ ಎಂದು ಮಾಹಿತಿ ನೀಡಿದರು.

ಕನ್ನಡಪರ ಸಂಘಟನೆಗಳ ಮುಖಂಡರಾದ ಪ್ರಭಾಕರ್, ವೆಂಕಟಪ್ಪ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ನಾರಾಯಣಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಗೌರವಾಧ್ಯಕ್ಷ ಪರಮೇಶ್ವರ್, ಜಿಲ್ಲಾ ಗೌರವ ಕಾರ್ಯದರ್ಶಿ ಆರ್.ಎಂ.ವೆಂಕಟಸ್ವಾಮಿ ಪಾಲ್ಗೊಂಡಿದ್ದರು.

Post Comments (+)