ಕೊಳೆಗೇರಿಯಾದ ಬಡಾವಣೆ: ಸ್ಥಳೀಯರ ಬವಣೆ

7
ಕುರುಬರಪೇಟೆಯಲ್ಲಿ ಯುಜಿಡಿ ಕಾಮಗಾರಿ ಅವಾಂತರ

ಕೊಳೆಗೇರಿಯಾದ ಬಡಾವಣೆ: ಸ್ಥಳೀಯರ ಬವಣೆ

Published:
Updated:
Deccan Herald

ಕೋಲಾರ: ಮನೆಯೊಳಗೆ ಕೊಳಚೆ ನೀರು... ಕೆಸರು ಗೆದ್ದೆಯಂತಾದ ರಸ್ತೆಗಳು... ಕಳೆ ಗಿಡಗಳು ತುಂಬಿದ ಚರಂಡಿ... ರಸ್ತೆಗೆ ಹರಿಯುತ್ತಿರುವ ಮಲಮೂತ್ರ...

ಇದು ಯಾವುದೋ ಕುಗ್ರಾಮದ ಚಿತ್ರಣವಲ್ಲ. ಬದಲಿಗೆ ಜಿಲ್ಲಾ ಕೇಂದ್ರದ ಕುರುಬರಪೇಟೆ ಬಡಾವಣೆ 2ನೇ ಮುಖ್ಯರಸ್ತೆಯ ದುಸ್ಥಿತಿ. ರಸ್ತೆ, ಚರಂಡಿ, ಯುಜಿಡಿ ಹೀಗೆ ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆಯೇ ಇಲ್ಲಿದೆ. ಇಲ್ಲ ಇಲ್ಲಗಳ ನಡುವೆ ಬದುಕು ಸಾಗಿಸುತ್ತಿರುವ ಸ್ಥಳೀಯರ ಗೋಳು ಹೇಳತೀರದು.

ನಗರಸಭೆಯ 5ನೇ ವಾರ್ಡ್‌ ವ್ಯಾಪ್ತಿಯ ಈ ಭಾಗದಲ್ಲಿ ಸುಮಾರು 150 ಮನೆಗಳಿವೆ. ನಗರಸಭೆಯು ಬಡಾವಣೆ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಸ್ಥಳೀಯರ ಮೂಲಸೌಕರ್ಯದ ಕೂಗು ಅರಣ್ಯರೋದನವಾಗಿದೆ.

ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಕೆಯುಡಬ್ಲ್ಯೂಎಸ್‌ಡಿಬಿ) ಅಟಲ್‌ ನಗರ ಪುನರುತ್ಥಾನ ಹಾಗೂ ನಗರ ಪರಿವರ್ತನಾ ಯೋಜನೆಯಡಿ (ಅಮೃತ್‌) ಈ ಭಾಗದಲ್ಲಿ ಕೈಗೆತ್ತಿಕೊಂಡಿರುವ ಯುಜಿಡಿ ಕಾಮಗಾರಿಯು ಬಡಾವಣೆಯ ಸೌಂದರ್ಯ ಹಾಳುಗೆಡವಿದೆ. ಕಾಮಗಾರಿಗಾಗಿ ರಸ್ತೆಗಳನ್ನು ಅಡ್ಡಾದಿಡ್ಡಿ ಅಗೆಯಲಾಗಿದ್ದು, ರಸ್ತೆಗಳ ಚಿತ್ರಣವೇ ಬದಲಾಗಿದೆ.

ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಗಳನ್ನು ದುರಸ್ತಿ ಮಾಡಿಲ್ಲ. ಇತ್ತೀಚೆಗೆ ಸುರಿದ ಮಳೆಯಿಂದ ರಸ್ತೆಗಳು ರಾಡಿಯಾಗಿದ್ದು, ಗುಂಡಿಮಯ ರಸ್ತೆಯಲ್ಲಿ ಸಾಗಲು ವಾಹನ ಸವಾರರು ಹರಸಾಹಸಪಡುವಂತಾಗಿದೆ.

ಪೈಪ್‌ಗಳು ಜಖಂ: ಯುಜಿಡಿ ಕಾಮಗಾರಿ ವೇಳೆ ಕೆಲಸಗಾರರು ಹಳೆ ಯುಜಿಡಿ ಮಾರ್ಗದ ಹಾಗೂ ಮ್ಯಾನ್‌ಹೋಲ್‌ನ ಪೈಪ್‌ಗಳನ್ನು ಜಖಂಗೊಳಿಸಿದ್ದು, ಕೊಳಚೆ ನೀರಿನ ಹರಿವಿಗೆ ಅಡ್ಡಿಯಾಗಿದೆ. ಯುಜಿಡಿ ಪೈಪ್‌ ಮತ್ತು ಮ್ಯಾನ್‌ಹೋಲ್‌ಗಳಲ್ಲಿ ಮಣ್ಣು ತುಂಬಿಕೊಂಡಿರುವುದರಿಂದ ಮಲಮೂತ್ರ ಹಾಗೂ ಕೊಳಚೆ ನೀರು ಹಿಮ್ಮುಖವಾಗಿ ಮನೆಗಳಿಗೆ ಹರಿಯುತ್ತಿದೆ.

ಹಳೆ ಯುಜಿಡಿ ಮಾರ್ಗದ ಪಕ್ಕದಲ್ಲೇ ಹಾದು ಹೋಗಿರುವ ನೀರು ಸರಬರಾಜಿನ ಪೈಪ್‌ಗಳು ಕಾಮಗಾರಿ ವೇಳೆ ಒಡೆದು ಹೋಗಿವೆ. ಇದರಿಂದ ಕೊಳಚೆ ನೀರು ಸೋರಿಕೆಯಾಗಿ ನೀರು ಸರಬರಾಜಿನ ಪೈಪ್‌ಗಳಿಗೆ ಸೇರುತ್ತಿದೆ. ಮನೆಗಳ ನಲ್ಲಿಯಲ್ಲಿ ಕೊಳಚೆ ನೀರು ಬರುತ್ತಿದೆ. ತೊಟ್ಟಿಯಲ್ಲಿ (ಸಂಪ್‌) ಸಂಗ್ರಹಿಸಿದ ನೀರಿನಲ್ಲಿ ಹುಳುಗಳು ಉತ್ಪತ್ತಿಯಾಗಿ ನೀರು ಬಳಕೆಗೆ ಯೋಗ್ಯವಾಗಿಲ್ಲ.

ರೋಗ ಭೀತಿ: ಚರಂಡಿ ಮತ್ತು ಮ್ಯಾನ್‌ಹೋಲ್‌ಗಳನ್ನು ಏಳೆಂಟು ತಿಂಗಳಿಂದ ಸ್ವಚ್ಛಗೊಳಿಸಿಲ್ಲ. ಚರಂಡಿಗಳಲ್ಲಿ ಕಸ ತುಂಬಿಕೊಂಡಿದೆ ಮತ್ತು ಕಳೆ ಗಿಡಗಳು ಬೆಳೆದಿವೆ. ಇದರಿಂದ ಕೊಳಚೆ ನೀರಿನ ಹರಿವಿಗೆ ಅಡ್ಡಿಯಾಗಿದೆ. ಹಲವೆಡೆ ಚರಂಡಿ ನೀರು ರಸ್ತೆ ಮೇಲೆ ಹರಿದು ಸಾಕಷ್ಟು ಅವಾಂತರ ಸೃಷ್ಟಿಸುತ್ತಿದೆ. ಮತ್ತೊಂದೆಡೆ ಮ್ಯಾನ್‌ಹೋಲ್‌ಗಳು ಕಟ್ಟಿಕೊಂಡು ಮಲಮೂತ್ರ ರಸ್ತೆಗೆ ಹರಿಯುತ್ತಿದೆ. ಮ್ಯಾನ್‌ಹೋಲ್‌ ಮುಚ್ಚಳಗಳು ಹಾಳಾಗಿ ವರ್ಷವೇ ಕಳೆದರೂ ಅವುಗಳನ್ನು ಬದಲಿಸಿಲ್ಲ.

ಯುಜಿಡಿ ಅವ್ಯವಸ್ಥೆಯಿಂದ ನೈರ್ಮಲ್ಯ ಸಮಸ್ಯೆ ಎದುರಾಗಿದೆ. ಕೊಳಚೆ ನೀರು ದುರ್ನಾತ ಬೀರುತ್ತಿದ್ದು, ಸ್ಥಳೀಯರು ಮನೆಗಳಲ್ಲಿ ವಾಸ ಮಾಡುವುದೇ ಕಷ್ಟವಾಗಿದೆ. ಕೊಳಚೆ ನೀರಿನ ದುರ್ನಾತ ಸಹಿಸಲಾಗದೆ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಬೀದಿ ನಾಯಿ, ನೊಣ ಹಾಗೂ ಸೊಳ್ಳೆ ಕಾಟ ಹೆಚ್ಚಿದ್ದು, ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !