ಕೋಲಾರ: ಈ ವರ್ಷದ ಮುಂಗಾರಿನ ಆರಂಭದಲ್ಲಿ ಮಳೆ ಕೊರತೆ ಕಾರಣ ಬಿತ್ತನೆಗೆ ತೊಂದರೆ ಉಂಟಾದರೂ ಆಗಸ್ಟ್ ತಿಂಗಳಲ್ಲಿ ವರುಣ ಕರುಣೆ ತೋರಿದ ಕಾರಣ ಜಿಲ್ಲೆಯಲ್ಲಿ ಈ ಬಾರಿ ಶೇ 72.65ರಷ್ಟು ಬಿತ್ತನೆಯಾಗಿದೆ.
ಜುಲೈ 31ರವರೆಗೆ ಕೇವಲ 12,491 ಹೆಕ್ಟೇರ್‌ನಲ್ಲಿ ಬಿತ್ತನೆ ಮೂಲಕ ಶೇ 13.09 ಸಾಧನೆ ಆಗಿತ್ತು. ಆದರೆ, ಆಗಸ್ಟ್ ತಿಂಗಳೊಂದರಲ್ಲೇ ಸುಮಾರು 57 ಸಾವಿರ ಹೆಕ್ಟೇರ್ ಬಿತ್ತನೆ ನಡೆದಿರುವುದು ವಿಶೇಷ. ಇದರಿಂದ ಆರಂಭದಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ರೈತರ ಮೊಗದಲ್ಲೂ ಮಂದಹಾಸ ಮೂಡಿದೆ.
ಆರು ತಾಲ್ಲೂಕುಗಳಿಂದ ಸೇರಿ ಜಿಲ್ಲೆಯಲ್ಲಿ ಈ ವರ್ಷ 95,448 ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಈ ವರೆಗೆ 69,340 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಬಿತ್ತನೆ ಚಟುವಟಿಕೆ ಬಹುತೇಕ ಅಂತ್ಯಗೊಂಡಿದೆ. 15 ದಿನಗಳ ಬಳಿಕ ಹುರಳಿ ಹಾಗೂ ಮೇವಿನ ಜೋಳದ ಬಿತ್ತನೆ ನಡೆಯಲಿದೆ. 2023ರಲ್ಲಿ ಬರಗಾಲ ಕಾರಣ ಭಾರಿ ಹಿನ್ನಡೆ ಆಗಿತ್ತು.
ಜಿಲ್ಲೆಯಲ್ಲಿ ಜನವರಿ 1ರಿಂದ ಆಗಸ್ಟ್ 31ರವರೆಗೆ 44.6 ಸೆಂ.ಮೀ (446 ಮಿ.ಮೀ.) ಮಳೆಯಾಗಿದೆ. ಈ ಅವಧಿಯ ವಾಡಿಕೆ ಮಳೆ 35.6 ಸೆಂ.ಮೀ. (356 ಮಿ.ಮೀ.). ಶೇ 26ರಷ್ಟು ಹೆಚ್ಚುವರಿ ಮಳೆಯಾಗಿದೆ.
‘ಜುಲೈನಲ್ಲಿ ಮಳೆ ಕೊರತೆ ಕಾರಣ ನಮಗೂ ಆತಂಕ ಉಂಟಾಗಿತ್ತು. ಆದರೆ, ನಂತರ ಮಳೆ ಸುರಿದ ಕಾರಣ ರಾಗಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಯಲ್ಲಿ ಪ್ರಗತಿ ಆಯಿತು. ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಬಿತ್ತನೆಯಾಗಿದ್ದು, ಯಾವುದೇ ಸಮಸ್ಯೆ ಇಲ್ಲ’ ಎಂದು ಕೃಷಿ ಜಂಟಿ ನಿರ್ದೇಶಕಿ ಎಂ.ಆರ್.ಸುಮಾ ‘ಪ್ರಜಾವಾಣಿ’ಗೆ ತಿಳಿಸಿದರು.
ಜಿಲ್ಲೆಯಲ್ಲಿ ರಾಗಿ ಬಿತ್ತನೆ ಗುರಿಯೇ 60,973 ಹೆಕ್ಟೇರ್ ಪ್ರದೇಶವಿದೆ. ಈವರೆಗೆ 49,942ಹೆಕ್ಟೇರ್ ಬಿತ್ತನೆಯಾಗಿದೆ. ಜಿಲ್ಲೆಯ ಏಕದಳ ಧಾನ್ಯಗಳಲ್ಲಿ ರಾಗಿ ಪ್ರಧಾನ ಆಹಾರ ಧಾನ್ಯ. ಕಳೆದ ವರ್ಷ ರಾಗಿ ಬಿತ್ತನೆ ಸಾಧ್ಯವಾಗದೆ ಭಾರಿ ತೊಂದರೆ ಉಂಟಾಗಿತ್ತು.
ಆದರೆ, ತೊಗರಿ, ನೆಲಗಡಲೆ ಬಿತ್ತನೆಯೂ ತೀರ ಕಡಿಮೆ ಆಗಿದೆ. ಇದಕ್ಕೆ ಕಾರಣ ಈ ಬೆಳೆಗಳ ಬಿತ್ತನೆ ಅವಧಿಯಲ್ಲಿ ಮಳೆ ಕೊಟ್ಟಿತು. ಈ ಸಂಬಂಧಿಸಿದ ಆಹಾರ ಧಾನ್ಯಗಳಿಗೆ ಮುಂದಿನ ದಿನಗಳಲ್ಲಿ ಸಮಸ್ಯೆ ಆಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
‘ತೊಗರಿ, ನೆಲಗಡಲೆ ಬಿತ್ತನೆ ಸಮಯದಲ್ಲಿಯೇ ಮಳೆ ಕೈಕೊಟ್ಟಿತು. ಹೀಗಾಗಿ, ಬಿತ್ತನೆಗೆ ಹಿನ್ನಡೆ ಉಂಟಾಯಿತು. ಮಳೆ ಬರುವಷ್ಟರಲ್ಲಿ ಈ ಬೆಳೆಗಳ ಬೀಜ ಬಿತ್ತನೆಗೆ ಸಮಯವೂ ಮುಗಿದಿತ್ತು’ ಎಂದು ಸುಮಾ ಹೇಳಿದರು.
‘ನಾವು ಆರಂಭದಲ್ಲಿ ರಾಗಿ ಬಿತ್ತನೆ ಮಾಡಿದ್ದೆವು. ಆಗ ಮುಂಗಾರು ಮಳೆ ಕೊರತೆ ಕಾರಣ ಮೊಳಕೆ ಸರಿಯಾಗಿ ಬರಲಿಲ್ಲ. ನಂತರ ಆಗಸ್ಟ್‌ನಲ್ಲಿ ಮಳೆ ಬಂದಾಗ ಮತ್ತೊಮ್ಮೆ ಬಿತ್ತನೆ ಮಾಡಿದೆವು. ಮಳೆ ನಂಬಿ ಈಗ ರಾಗಿ ಬೆಳೆಯುವುದು ಭಾರಿ ಕಷ್ಟಕರವಾಗಿದೆ. ಒಂದು ಎಕರೆ ರಾಗಿ ಬಿತ್ತನೆ ಮಾಡಿ ಮನೆ ತುಂಬಿಸಿಕೊಳ್ಳಲು ₹ 35 ಸಾವಿರ ಖರ್ಚು ಬರುತ್ತದೆ. ಆದರೆ, ಜಾನುವಾರುಗಳಿಗೆ ಮೇವು ಸಿಗಲಿ ಎಂಬ ಉದ್ದೇಶದಿಂದ ರಾಗಿ ಬಿತ್ತನೆ ಮಾಡುತ್ತೇವೆ’ ಎಂದು ತೊಟ್ಲಿ ಗ್ರಾಮದ ಟಿ.ವಿ.ರಮೇಶ್ ತಿಳಿಸಿದರು.
ಕಳೆದ ವರ್ಷ ಬರಗಾಲದಿಂದಾಗಿ ಬಿತ್ತನೆಗೆ ಹಿನ್ನಡೆ ಉಂಟಾಗಿತ್ತು. ಈ ವರ್ಷದ ಮುಂಗಾರಿನ ಆರಂಭದಲ್ಲಿ ಮಳೆ ಕೊರತೆ ಇತ್ತಾದರೂ ಬಳಿಕ ಬಿತ್ತನೆಗೆ ಸಾಕಾಗುವಷ್ಟು ಮಳೆ ಬಂತುಎಂ.ಆರ್.ಸುಮಾ ಜಂಟಿ ಕೃಷಿ ನಿರ್ದೇಶಕಿ ಕೋಲಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.