ಮಂಗಳವಾರ, ಆಗಸ್ಟ್ 20, 2019
27 °C

ಪ್ರವಾಹ ಸಂತ್ರಸ್ತರಿಗೆ ಕೋಚಿಮುಲ್‌ ನೆರವು

Published:
Updated:
Prajavani

ಕೋಲಾರ: ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (ಕೋಚಿಮುಲ್‌) ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ₹ 56.33 ಲಕ್ಷ ನೀಡಲು ನಿರ್ಧರಿಸಿದೆ.

ಉತ್ತರ ಕರ್ನಾಟಕದ 17 ಜಿಲ್ಲೆಗಳ ಜನರು ಪ್ರವಾಹದಿಂದ ತತ್ತರಿಸಿದ್ದು, ಅವರಿಗೆ ನೆರವು ನೀಡುವ ಉದ್ದೇಶದಿಂದ ಕೋಚಿಮುಲ್‌ ಸಿಬ್ಬಂದಿ ತಮ್ಮ ಒಂದು ದಿನದ ವೇತನ ನೀಡಿದ್ದಾರೆ. ಇದರ ಜತೆಗೆ ಕೋಚಿಮುಲ್‌ನಿಂದ ₹ 50 ಲಕ್ಷ ಆರ್ಥಿಕ ನೆರವು ನೀಡಲು ಒಕ್ಕೂಟದ ಆಡಳಿತ ಮಂಡಳಿ ತೀರ್ಮಾನಿಸಿದೆ.

ಮೊದಲ ಹಂತದಲ್ಲಿ ಸಿಬ್ಬಂದಿ ವೇತನದ ₹ 6.33 ಲಕ್ಷ ಮೊತ್ತದ ಚೆಕ್‌ ಅನ್ನು ಕೋಚಿಮುಲ್ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಅವರು ಇಲ್ಲಿ ಸೋಮವಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರಿಗೆ ಹಸ್ತಾಂತರಿಸಿದರು. ಹಣದ ಜತೆಗೆ ₹ 4.15 ಲಕ್ಷ ಮೌಲ್ಯದ 8 ಸಾವಿರ ಲೀಟರ್‌ ಟೆಟ್ರಾ ಹಾಲಿನ ಪ್ಯಾಕೆಟ್‌ಗಳನ್ನು ಬೆಳಗಾವಿ ಜಿಲ್ಲೆಗೆ ಕಳುಹಿಸಲಾಯಿತು. ಹಾಲಿನ ಪ್ಯಾಕೆಟ್‌ ಸಾಗಣೆ ವಾಹನಕ್ಕೆ ಜಿಲ್ಲಾಧಿಕಾರಿ ಹಸಿರು ನಿಶಾನೆ ತೋರಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ವೈ.ನಂಜೇಗೌಡ, ‘ಪ್ರವಾಹದಿಂದ ಉತ್ತರ ಕರ್ನಾಟಕದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಒಕ್ಕೂಟದ ಸಿಬ್ಬಂದಿ ಒಂದು ದಿನದ ವೇತನ ನೀಡಿದ್ದಾರೆ. ಜತೆಗೆ ಒಕ್ಕೂಟದಿಂದ ಹಾಲು ಕಳುಹಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಒಕ್ಕೂಟದ ನಿರ್ದೇಶಕರೊಂದಿಗೆ ಸದ್ಯದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ₹ 50 ಲಕ್ಷವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡುತ್ತೇವೆ’ ಎಂದು ವಿವರಿಸಿದರು.

ಸ್ವಾಗತಾರ್ಹ: ‘ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೋಚಿಮುಲ್ ಸಿಬ್ಬಂದಿ ಒಂದು ದಿನದ ತಮ್ಮ ವೇತನ ಹಾಗೂ ಒಕ್ಕೂಟದಿಂದ 8 ಸಾವಿರ ಲೀಟರ್ ಹಾಲು ನೀಡಿರುವುದು ಸ್ವಾಗತಾರ್ಹ’ ಎಂದು ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.

‘ಪ್ರತಿಯೊಬ್ಬರು ಪ್ರವಾಹ ಸಂತ್ರಸ್ತರಿಗೆ ನೆರವು ನೀಡಬೇಕು. ಜಿಲ್ಲೆಯಲ್ಲಿ ಈಗಾಗಲೇ ಹಲವು ಸಂಘ- ಸಂಸ್ಥೆಗಳು ಸಹಾಯ ಮಾಡುತ್ತಿವೆ. ಅದೇ ರೀತಿ ಜಿಲ್ಲೆಯ ಜನರು ಕೈಲಾದ ಸಹಾಯ ಮಾಡಬೇಕು’ ಎಂದು ಕೋರಿದರು.

ಕೋಚಿಮುಲ್‌ ನಿರ್ದೇಶಕರಾದ ಹನುಮೇಶ್, ಕಾಡೇನಹಳ್ಳಿ ನಾಗರಾಜ್, ಡಿ.ವಿ.ಹರೀಶ್ ಹಾಜರಿದ್ದರು.

Post Comments (+)