ವೇಣುಗೋಪಾಲ್‌ ವಿರುದ್ಧ ಕೊತ್ತೂರು ಗುಡುಗು

ಶುಕ್ರವಾರ, ಏಪ್ರಿಲ್ 26, 2019
33 °C

ವೇಣುಗೋಪಾಲ್‌ ವಿರುದ್ಧ ಕೊತ್ತೂರು ಗುಡುಗು

Published:
Updated:

ಕೋಲಾರ: ‘ನನಗೆ ಡೆಡ್‌ಲೈನ್ ಕೊಡಲು ಕೆ.ಸಿ.ವೇಣುಗೋಪಾಲ್‌ ನನ್ನ ಅಣ್ಣನ ಅಥವಾ ತಮ್ಮನ? ಅವರು ನನ್ನನ್ನು ಕಾಂಗ್ರೆಸ್‌ನಿಂದ ಉಚ್ಛಾಟನೆ ಮಾಡಲಿ, ಅದಕ್ಕೆಲ್ಲಾ ಹೆದರುವುದಿಲ್ಲ’ ಎಂದು ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್‌ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್ ವಿರುದ್ಧ ಹರಿಹಾಯ್ದರು.

ಜಿಲ್ಲೆಯ ಮಾಲೂರಿನಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿ, ‘ಕಾಂಗ್ರೆಸ್‌ನವರು ನನ್ನನ್ನು ಉಚ್ಛಾಟನೆ ಮಾಡಲಿ. ದೇಶದಲ್ಲಿ ಸಾವಿರಾರು ಪಕ್ಷಗಳಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಪಕ್ಷವನ್ನಾದರೂ ಒಪ್ಪಿಕೊಳ್ಳಬಹುದು. ವೇಣುಗೋಪಾಲ್‌ ಗಡುವು ಕೊಟ್ಟಾಕ್ಷಣ ಹೆದರುವ ಜಾಯಮಾನ ನನ್ನದಲ್ಲ’ ಎಂದರು.

‘ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ನನ್ನ ರಾಜಕೀಯ ವಿರೋಧಿ ಕೆ.ಎಚ್‌.ಮುನಿಯಪ್ಪ ವಿಚಾರದಲ್ಲಿ ಯಾರು ಏನೇ ಹೇಳಿದರೂ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಅವರನ್ನು ಸೋಲಿಸುವುದೇ ನನ್ನ ಗುರಿ. ವರಿಷ್ಠರು ನನ್ನನ್ನು ಕಾಂಗ್ರೆಸ್‌ನಿಂದ ಹೊರ ದಬ್ಬುವುದಾದರೆ ಮೊದಲು ಆ ಕೆಲಸ ಮಾಡಲಿ’ ಎಂದು ಸವಾಲು ಹಾಕಿದರು.

ಪರಿಣಾಮ ನೆಟ್ಟಗಿರುವುದಿಲ್ಲ: ‘ನನಗೆ ತೊಂದರೆ ಮಾಡಿದ ಮುನಿಯಪ್ಪಗೆ ಏಕೆ ಸಹಾಯ ಮಾಡಬೇಕು? ಅವರಿಗೆ ಬೇರೆ ರೀತಿ ತೊಂದರೆ ಮಾಡಲು ನನ್ನ ಕೈಯಲ್ಲಿ ಆಗಲ್ಲ. ನ್ಯಾಯಾಲಯ, ಪೊಲೀಸ್, ರೌಡಿಸಂ ಮೂಲಕ ಅವರನ್ನು ಬಗ್ಗು ಬಡಿಯುವುದು ಸಾಧ್ಯವಿಲ್ಲ. ಹೀಗಾಗಿ ಜನರ ಬಳಿ ಹೋಗಿ ಅವರ ವಿರುದ್ಧ ಪ್ರಚಾರ ಮಾಡುತ್ತಿದ್ದೇನೆ’ ಎಂದು ಹೇಳಿದರು.

‘ಮುನಿಯಪ್ಪ ವಿರುದ್ಧ ಮಾತನಾಡುತ್ತಿರುವ ನನಗೆ ಅವರು ಏನು ಬೇಕಾದರೂ ಮಾಡಬಹುದು. ಈವರೆಗೆ ಯಾವುದೇ ಬೆದರಿಕೆ ಕರೆ ಬಂದಿಲ್ಲ. ಕೊತ್ತೂರು ಮಂಜುನಾ ಬೆದರಿಸುವ ಧೈರ್ಯ ಅವರಿಗಿಲ್ಲ. ಬೆದರಿಸಿದ್ರೆ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಗುಡುಗಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !