ಶನಿವಾರ, ನವೆಂಬರ್ 23, 2019
18 °C

ಕೆಪಿಸಿಸಿ ಅಧ್ಯಕ್ಷಗಾದಿ ನಿಭಾಯಿಸುವುದಾಗಿ ವರಿಷ್ಠರಿಗೆ ತಿಳಿಸಿದ್ದೇನೆ: ಮುನಿಯಪ್ಪ

Published:
Updated:

ಕೋಲಾರ: ‘ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಮಾತು ಕೇಳಿಬರುತ್ತಿದ್ದು, ನನಗೆ ಅಧ್ಯಕ್ಷಗಾದಿ ನೀಡಿದರೆ ನಿಭಾಯಿಸುವುದಾಗಿ ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ’ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಇಂಗಿತ ವ್ಯಕ್ತಪಡಿಸಿದರು.

ಇಲ್ಲಿ ಸೋಮವಾರ ಸುದ್ದಿಗಾರೊಂದಿಗೆ ಮಾತನಾಡಿ, ‘ದಿನೇಶ್ ಗುಂಡೂರಾವ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಎಂದು ಹೇಳುತ್ತಿಲ್ಲ. ವರಿಷ್ಠರು ಅಧ್ಯಕ್ಷರನ್ನು ಬದಲಿಸಲು ಮುಂದಾದರೆ ನನಗೆ ಅವಕಾಶ ನೀಡಿ ಎಂದು ಕೋರಿದ್ದೇನೆ’ ಎಂದು ತಿಳಿಸಿದರು.

‘4 ದಶಕದಿಂದ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ತಾಲ್ಲೂಕು ಮಟ್ಟದಿಂದ ದೆಹಲಿಯ ಪ್ರಮುಖ ಹುದ್ದೆವರೆಗೆ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. 7 ಬಾರಿ ಲೋಕಸಭಾ ಸದಸ್ಯನಾಗಿ ಮತ್ತು ಕೇಂದ್ರ ಸಚಿವನಾಗಿ ಪಕ್ಷಕ್ಕೆ ದುಡಿದಿದ್ದೇನೆ. ಅನುಭವ ಹಾಗೂ ಆದ್ಯತೆ ಪರಿಗಣಿಸಿ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಲು ನನಗೆ ಅವಕಾಶ ನೀಡುವಂತೆ ವರಿಷ್ಠರಿಗೆ ಕೇಳಿದ್ದೇನೆ’ ಎಂದರು.

ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಕೆ.ಆರ್‌.ರಮೇಶ್‌ಕುಮಾರ್‌ರ ಹೆಸರು ಕೇಳಿಬಂದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುನಿಯಪ್ಪ, ‘ವಿರೋಧ ಪಕ್ಷದ ನಾಯಕರನ್ನು ಸೋನಿಯಾ ಗಾಂಧಿ ಆಯ್ಕೆ ಮಾಡುತ್ತಾರೆ. ಪಕ್ಷದ ಶಾಸಕರು ಹಾಗೂ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ಹೇಳಿದರು.

‘ಕಾಂಗ್ರೆಸ್ ದೊಡ್ಡ ಪಕ್ಷವಾಗಿರುವುದರಿಂದ ಗೊಂದಲ ಸಹಜ. ಸದ್ಯದಲ್ಲೇ ವಿರೋಧ ಪಕ್ಷದ ನಾಯಕನ್ನು ಆಯ್ಕೆ ಮಾಡಲಾಗುತ್ತದೆ’ ಎಂದು ವಿವರಿಸಿದರು.

ಪ್ರತಿಕ್ರಿಯಿಸಿ (+)