ಭಾನುವಾರ, ಆಗಸ್ಟ್ 1, 2021
21 °C
ಸುರಕ್ಷತೆಗೆ ಒತ್ತು: ಅಂತರ ಕಾಯ್ದುಕೊಂಡು ಪ್ರಯಾಣ

ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯಲ್ಲಿ ಕೋವಿಡ್‌ ಹಾಗೂ ಲಾಕ್‌ಡೌನ್‌ ಕಾರಣಕ್ಕೆ ಸತತ 60 ದಿನಗಳಿಂದ ಸ್ಥಗಿತಗೊಂಡಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ ಸೇವೆ ಸೋಮವಾರ ಪುನರಾರಂಭವಾಯಿತು.

ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಅಬ್ಬರ ತಗ್ಗಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಸ್‌ ಸಂಚಾರಕ್ಕೆ ಅನುಮತಿ ನೀಡಿದ್ದು, ಜಿಲ್ಲೆಯಾದ್ಯಂತ ಬಸ್‌ಗಳು ರಸ್ತೆಗಿಳಿದವು. ದೀರ್ಘ ಕಾಲದವರೆಗೆ ನಿಂತಲ್ಲೇ ನಿಂತಿದ್ದ ಬಸ್‌ಗಳನ್ನು ಡಿಪೊಗಳಲ್ಲಿ ನೀರಿನಿಂದ ಸ್ವಚ್ಛಗೊಳಿಸಲಾಯಿತು.

ಪ್ರಯಾಣಿಕರು ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು, ಬಸ್‌ಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಸೇರಿದಂತೆ ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಬಸ್‌ಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಆದರೆ, ಮೊದಲ ದಿನವಾದ ಕಾರಣ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.

ಕೆಎಸ್‌ಆರ್‌ಟಿಸಿ ಸಿಬ್ಬಂದಿಯು ನಿಗದಿಪಡಿಸಿದ್ದ ಸಂಖ್ಯೆಯ ಪ್ರಯಾಣಿಕರನ್ನು ಬಸ್‌ಗಳಿಗೆ ಹತ್ತಿಸಿದರು. ಪ್ರತಿ ಬಸ್‌ನಲ್ಲಿ ಗರಿಷ್ಠ 30 ಮಂದಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಯಿತು. ಪ್ರಯಾಣಿಕರೆಲ್ಲರೂ ಅಂತರ ಕಾಯ್ದುಕೊಂಡು ಮಾಸ್ಕ್‌ ಧರಿಸಿ ಪ್ರಯಾಣ ಮಾಡಿದರು. ನಿರ್ವಾಹಕರು ಕೈಗಳ ಸ್ವಚ್ಛತೆಗೆ ಸ್ಯಾನಿಟೈಸರ್‌ ಬಳಕೆ ಮಾಡುವಂತೆ ಪ್ರಯಾಣಿಕರಿಗೆ ತಿಳಿ ಹೇಳಿದರು.

ಜಿಲ್ಲಾ ಕೇಂದ್ರ ಕೋಲಾರ, ಮಾಲೂರು, ಮುಳಬಾಗಿಲು, ಕೆಜಿಎಫ್‌ ಹಾಗೂ ಶ್ರೀನಿವಾಸಪುರ ಸೇರಿದಂತೆ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿಯ 5 ಡಿಪೊಗಳಿವೆ. ಜಿಲ್ಲೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಪರ್ಕವಿದೆ.

ಕೋಲಾರ ವಿಭಾಗದ 5 ಡಿಪೊಗಳಿಂದ ಸಾಮಾನ್ಯ ದಿನಗಳಲ್ಲಿ ಪ್ರತಿನಿತ್ಯ 514 ಅನುಸೂಚಿಗಳಲ್ಲಿ (ಶೆಡ್ಯೂಲ್‌) ಬಸ್‌ ಸಂಚರಿಸುತ್ತಿದ್ದವು. ಆದರೆ, ಸೋಮವಾರ 200 ಅನುಸೂಚಿಗಳಲ್ಲಿ ಬಸ್‌ಗಳನ್ನು ಓಡಿಸಲಾಯಿತು. ಬೆಂಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗೆ ಬಸ್‌ಗಳು ಸಂಚರಿಸಿದವು. ಜಿಲ್ಲೆಯೊಳಗೆ ತಾಲ್ಲೂಕು ಮತ್ತು ಪ್ರಮುಖ ಹೋಬಳಿ ಕೇಂದ್ರಗಳಿಗೆ ಮಾತ್ರ ಬಸ್‌ ಸಂಚರಿಸಿದವು. ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳು ಸೇರಿದಂತೆ ದೂರದ ಊರುಗಳಿಗೆ ಬಸ್‌ಗಳು ಹೋಗಲಿಲ್ಲ.

ಬೆಂಗಳೂರು ಮತ್ತು ಜಿಲ್ಲೆಯ ನಡುವೆ ಸಂಚರಿಸಿದ ಬಸ್‌ಗಳಲ್ಲಿ ಪ್ರಯಾಣಿಕರು ನಿಗದಿತ ಸಂಖ್ಯೆಯಲ್ಲಿ ಭರ್ತಿಯಾಗಿದ್ದರು. ಆದರೆ, ಜಿಲ್ಲೆಯೊಳಗೆ ಗ್ರಾಮೀಣ ಭಾಗದಲ್ಲಿ ಬಸ್‌ಗಳು ಪ್ರಯಾಣಿಕರಿಲ್ಲದೆ ಖಾಲಿಯಾಗಿ ಸಂಚರಿಸಿದವು.

ಬಸ್‌ ಸ್ಯಾನಿಟೈಸ್‌: ಬಸ್‌ ಚಾಲಕ ಹಾಗೂ ನಿರ್ವಾಹಕರು ಸಹ ಮಾಸ್ಕ್‌ ಧರಿಸಿದ್ದರು. ಬಸ್‌ಗಳು ಬೆಳಿಗ್ಗೆ ನಿಲ್ದಾಣಕ್ಕೆ ಬರುವುದಕ್ಕೂ ಮುನ್ನ ಡಿಪೊಗಳಲ್ಲಿ ಸ್ಯಾನಿಟೈಸ್‌ಗೊಳಿಸಲಾಯಿತು. ಸಂಜೆ 5 ಗಂಟೆವರೆಗೂ ಬಸ್‌ಗಳು ಸಂಚರಿಸಿದವು. ಬಳಿಕ ರಾತ್ರಿ ಬಸ್‌ಗಳನ್ನು ಡಿಪೊಗೆ ತಂದು ಮತ್ತೊಮ್ಮೆ ಸ್ಯಾನಿಟೈಸ್‌ ಮಾಡಲಾಯಿತು.

ಲಾಕ್‌ಡೌನ್‌ ಕಾರಣಕ್ಕೆ ಬಂದ್‌ ಆಗಿದ್ದ ಬಸ್‌ ನಿಲ್ದಾಣಗಳ ಒಳಗಿನ ಹಣ್ಣಿನ ಅಂಗಡಿಗಳು, ದಿನಪತ್ರಿಕೆ ಮತ್ತು ಪುಸ್ತಕ ಮಾರಾಟ ಮಳಿಗೆಗಳು, ಹೋಟೆಲ್‌ಗಳು ಸೋಮವಾರ ಬಾಗಿಲು ತೆರೆದವು. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದ ಕಾರಣ ವಹಿವಾಟು ನಿರೀಕ್ಷೆಯಂತೆ ನಡೆಯಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು