ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ, ಕಾಲೇಜು ಆರಂಭ: ಬಸ್‌ಗಾಗಿ ಪರದಾಟ - ಸಾರ್ವಜನಿಕರಿಗೆ ತೊಂದರೆ

ಆಯ್ದ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಸೇವೆ
Last Updated 6 ಫೆಬ್ರುವರಿ 2021, 7:07 IST
ಅಕ್ಷರ ಗಾತ್ರ

ಬಂಗಾರಪೇಟೆ: ಕೊರೊನಾ ಸೋಂಕಿನ ತೀವ್ರತೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು ಎಲ್ಲೆಡೆ ಪ್ರಾರಂಭವಾಗಿವೆ. ಆದರೆ ಗ್ರಾಮೀಣ ಭಾಗಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡುವಂತಾಗಿದೆ.

ಆಯ್ದ ಮಾರ್ಗಗಳಲ್ಲಿ ಮಾತ್ರ ರಾಜ್ಯ ರಸ್ತೆ ಸಾರಿಗೆ ಬಸ್ ಸೇವೆ ಆರಂಭಿಸಿದ್ದು, ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ಸಮರ್ಪಕ ಬಸ್ ಸೇವೆ ಒದಗಿಸದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗಿದೆ.

ಕಾಮಸಮುದ್ರ, ಬೂದಿಕೋಟೆ ಮತ್ತು ಕಸಬಾ ಸೇರಿದಂತೆ ಒಟ್ಟು ಮೂರು ಹೋಬಳಿ ಈ ತಾಲ್ಲೂಕಿನ ವ್ಯಾಪ್ತಿಗೆ ಸೇರಿದೆ. ಅಲ್ಲದೆ ಸೂಲಿಕುಂಟೆ, ಟೇಕಲ್, ಕೆಜಿಎಫ್, ಕೋಲಾರ, ಹರಟಿ ಹೀಗೆ ವಿವಿಧ ಭಾಗಗಳಿಂದ ನಿತ್ಯ ಸಾವಿರಾರು ಮಂದಿ ಆಸ್ಪತ್ರೆ, ತಾಲ್ಲೂಕು ಕಚೇರಿಗೆ ಸಂಚರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಆಗಮಿಸುತ್ತಿದ್ದು ಬಸ್ ವ್ಯವಸ್ಥೆ ಇಲ್ಲದೆ ಕಿರಿಕಿರಿ ಅನುಭವಿಸುವಂತಾಗಿದೆ. ಬಸ್‌ಪಾಸ್ ವಿತರಿಸುತ್ತಿರುವ ಸಾರಿಗೆ ಸಂಸ್ಥೆ ಬಸ್ ಸೇವೆ ಒದಗಿಸುತ್ತಿಲ್ಲ ಎನ್ನುವುದು ವಿದ್ಯಾರ್ಥಿಗಳ ದೂರು.

ಕಾಮಸಮುದ್ರ ಮಾಗರ್ದಲ್ಲಿ ಮೊದಲು ಗಂಟೆಗೊಮ್ಮೆ ಸಂಚರಿಸುತ್ತಿದ್ದ ಬಸ್‌ಗೆ ಈಗ ಗಂಟೆಗಟ್ಟಲೆ ಕಾಯುವ ಅನಿವಾರ್ಯ ಎದುರಾಗಿದೆ. ಅಲ್ಲದೆ ಸಂಜೆ 5 ಗಂಟೆಗೆ ಸಂಚಾರ ಸ್ಥಗಿತಗೊಳ್ಳುತ್ತದೆ. ಬೂದಿಕೋಟೆ ಮಾರ್ಗದಲ್ಲಿ ಮಧ್ಯಾಹ್ನ 3 ಗಂಟೆ, ಸೂಲಿಕುಂಟೆ ಮಾರ್ಗದಲ್ಲಿ ಮಧ್ಯಾಹ್ನ 4 ಗಂಟೆ, ತೊಪ್ಪನಹಳ್ಳಿ, ಬಲಮಂದೆ, ಕನಮನಹಳ್ಳಿ, ಮಾಸ್ತಿ, ಹುನ್ಕುಂದ ಮತ್ತು ಹರಟಿ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳು ಮಧ್ಯಾಹ್ನ 3 ಗಂಟೆಗೆ ಸ್ಥಗಿತಗೊಳ್ಳುತ್ತಿರುವ ಕಾರಣ ಸಮಸ್ಯೆ ಹೆಚ್ಚಿದೆ.

ಕೆಜಿಎಫ್, ಬಂಗಾರಪೇಟೆ ಸೇರಿದಂತೆ ತಾಲ್ಲೂಕಿನಿಂದ ಕೆಲಸಕ್ಕಾಗಿ ಬೆಂಗಳೂರಿಗೆ ಸಾವಿರಾರು ಜನರು ಸಂಚರಿಸುತ್ತಿದ್ದಾರೆ. ಅವರೆಲ್ಲರೂ ಸಂಜೆ 8 ಗಂಟೆ ಬಳಿಕ ರೈಲಿನಲ್ಲಿ ಪಟ್ಟಣಕ್ಕೆ ತಲುಪುತ್ತಾರೆ. ಆದರೆ ಬಸ್‌ಗಳು ಇಲ್ಲದೆ ದುಪ್ಪಟ್ಟು ಹಣ ನೀಡಿ ಆಟೊಗಳಲ್ಲಿ ಸಂಚರಿಸುವ ಸ್ಥಿತಿ ಎದುರಾಗಿದೆ.
ಹೊಟ್ಟೆಪಾಡಿಗಾಗಿ 100 ಕಿ.ಮೀ ಪ್ರಯಾಣಿಸಿ, ದುಡಿದ ಕಾಸನ್ನು ಅಟೋಗಳಿಗೆ ನೀಡುವ ಸ್ಥಿತಿ ಎದುರಾಗಿದೆ. ಈ ಬಗ್ಗೆ ಯಾರಿಗೆ ಹೇಳಬೇಕು ಎನ್ನುತ್ತಾರೆ ಪ್ರಯಾಣಿಕ ಬಾಬು.

ತಾಲ್ಲೂಕಿನ ಕಾಡಂಚಿನ ಗ್ರಾಮಗಳಿಗೆ ರಾತ್ರಿಯಾದರೆ ಕಾಡಾನೆಗಳು ಲಗ್ಗೆ ಹಾಕುತ್ತಿವೆ. ಬೂದಿಕೋಟೆ, ಕಾಮಸಮುದ್ರ, ತೊಪ್ಪನಹಳ್ಳಿ, ಬಲಮಂದೆ ಮತ್ತು ಕನಮನಹಳ್ಳಿ ಮಾರ್ಗಗಳಲ್ಲಿ ಆನೆ ಸಂಚಾರ ಸಾಮಾನ್ಯವಾಗಿದೆ. ಎಲ್ಲಿ, ಯಾವಾಗ ಆನೆ ಎದುರಾಗುವುದೋ ಎನ್ನುವ ಭೀತಿಯಲ್ಲಿ ಈ ಭಾಗದ ಜನರು ಸಂಚರಿಸುತ್ತಿದ್ದಾರೆ.

ಪ್ರಯಾಣಿಕರ ಸಂಚಾರಕ್ಕೆ ತಕ್ಕಂತೆ ಶೇ 50ರಷ್ಟು ಬಸ್‌ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅಲ್ಲದೆ ಸಿಬ್ಬಂದಿ ಕೂಡ ಕೆಲಸಕ್ಕೆ ಹಾಜರಾಗಿರಲಿಲ್ಲ. ಕೊರೊನಾ ಸೋಂಕು ಕ್ಷೀಣಿಸುತ್ತಿದ್ದು, 10 ದಿನದೊಳಗೆ ಎಲ್ಲ ಮಾರ್ಗದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕೆಜಿಎಫ್ ಬಸ್ ಡಿಪೋ ವ್ಯವಸ್ಥಾಪಕ ಭಾಸ್ಕರ್ ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT