ಶುಕ್ರವಾರ, ಜನವರಿ 24, 2020
28 °C

28ಕ್ಕೆ ಕುವೆಂಪು ನಾಟಕೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಬೆಂಗಳೂರಿನ ರಂಗ ಕಹಳೆ ತಂಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಡಿ.28ರಿಂದ 31ರವರಗೆ ಕುವೆಂಪು ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ’ ಎಂದು ನಾಟಕೋತ್ಸವದ ಸಂಚಾಲಕ ಓಹಿಲೇಶ ಲಕ್ಷ್ಮಣ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಂಗ ಕಹಳೆ ತಂಡವು 19 ವರ್ಷಗಳಿಂದ ಕುವೆಂಪು ನಾಟಕೋತ್ಸವ ನಡೆಸಿಕೊಂಡು ಬರುತ್ತಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಾಟಕೋತ್ಸವ ಆಯೋಜಿಸಿದೆ. ರಂಗಾಸಕ್ತರು ನಾಟಕೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

‘ಪ್ರತಿನಿತ್ಯ ಸಂಜೆ 6 ಗಂಟೆಯಿಂದ 8.45ರವರೆಗೆ ನಾಟಕ ಪ್ರದರ್ಶನ ನಡೆಯಲಿದ್ದು, ಉಚಿತ ಪ್ರವೇಶವಿದೆ. ನಾಟಕೋತ್ಸವಕ್ಕೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಕಾರವಿದೆ. ಸಾರ್ವಜನಿಕರು, ರಂಗಾಸಕ್ತರು, ಮಕ್ಕಳು ಜೀವನ ಪರಿವರ್ತನೆಗೆ ಸಾಕ್ಷಿಯಾಗಬಲ್ಲ ಕುವೆಂಪು ನಾಟಕಗಳನ್ನು ನೋಡಬೇಕು’ ಎಂದರು.

‘ಜಿಲ್ಲೆಯಲ್ಲಿ ಮೊದಲ ಬಾರಿಗೆ ಕುವೆಂಪು ನಾಟಕೋತ್ಸವ ನಡೆಯುತ್ತಿದೆ. ಸಾಂಸ್ಕೃತಿಕವಾಗಿ ರೂಪುಗೊಳ್ಳಲು ಕುವೆಂಪು ನಾಟಕಗಳು ಸಹಕಾರಿ’ ಎಂದು ನಾಟಕೋತ್ಸವ ಸಮಿತಿ ಅಧ್ಯಕ್ಷ ಕೆ.ವಿ.ಶಂಕರಪ್ಪ ಅಭಿಪ್ರಾಯಪಟ್ಟರು.

‘ಜಿಲ್ಲಾಧಿಕಾರಿ ಜೆ.ಮಂಜುನಾಥ್ ಡಿ.28ರಂದು ಸಂಜೆ 6 ಗಂಟೆಗೆ ನಾಟಕೋತ್ಸವ ಉದ್ಘಾಟಿಸುತ್ತಾರೆ. ಸಾಹಿತಿ ಹಂಪ ನಾಗರಾಜಯ್ಯ ಹಾಗೂ ರಂಗ ಕಹಳೆ ತಂಡದ ಪದಾಧಿಕಾರಿಗಳು ಭಾಗವಹಿಸುತ್ತಾರೆ. ಡಿ.31ರಂದು ಸಂಜೆ ಸಮಾರೋಪ ಸಮಾರಂಭ ನಡೆಯುತ್ತದೆ’ ಎಂದು ವಿವರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗನಂದ ಕೆಂಪರಾಜ್, ರಂಗ ಕಹಳೆ ತಂಡದ ಜಿಲ್ಲಾ ಸಂಘಟಕ ಪ್ರೊ.ಮುನಿರತ್ನಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು