ಭಾನುವಾರ, ಮೇ 16, 2021
22 °C

ನೀರಿನ ಶುದ್ಧತೆ ಬಗ್ಗೆ ಜನರ ಆತಂಕ ನಿವಾರಿಸಲು ಕೆ.ಸಿ ವ್ಯಾಲಿ ನೀರು ಕುಡಿದ ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ಕೆ.ಸಿ ವ್ಯಾಲಿ ಯೋಜನೆ ನೀರಿನ ಶುದ್ಧತೆ ಕುರಿತು ಜಿಲ್ಲೆಯ ಜನರ ಆತಂಕ ನಿವಾರಿಸುವ ನಿಟ್ಟಿನಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ಅವರು ಯೋಜನೆ ವ್ಯಾಪ್ತಿಯ ನರಸಾಪುರ ಕೆರೆ ನೀರನ್ನು ಸೋಮವಾರ ಕುಡಿದು ಯೋಜನೆ ವಿರೋಧಿಗಳಿಗೆ ತಿರುಗೇಟು ನೀಡಿದರು.

ಬೆಂಬಲಿಗರು ಹಾಗೂ ಜೆಡಿಎಸ್‌ ಪಕ್ಷದ ಕಾರ್ಯಕರ್ತರೊಂದಿಗೆ ತಾಲ್ಲೂಕಿನ ನರಸಾಪುರ ಕೆರೆಗೆ ಆಗಮಿಸಿದ ಶ್ರೀನಿವಾಸಗೌಡ ಅಳುಕಿಲ್ಲದೆ ನೀರು ಕುಡಿದು, ‘ನೀರು ಶುದ್ಧವಾಗಿದೆ. ಈ ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುವುದಿಲ್ಲ. ಕೆಲವರು ರಾಜಕೀಯ ದುರುದ್ದೇಶದಿಂದ ಯೋಜನೆ ಬಗ್ಗೆ ಅನಗತ್ಯ ಟೀಕೆ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಾನು ಸಹ ಹಳ್ಳಿಯಲ್ಲಿ ಹುಟ್ಟಿದವನೇ. ಹಳ್ಳಿಯಲ್ಲಿ ಈ ಹಿಂದೆ ಜನ ಕೆರೆ ಕುಂಟೆಗಳ ನೀರು ಕುಡಿಯಲು ಬಳಸುತ್ತಿದ್ದರು. ನಾನೂ ಕೆರೆ ಕುಂಟೆ ನೀರು ಕುಡಿದು ಬೆಳೆದವನು. ಇದರಿಂದ ಯಾವ ರೋಗವೂ ಬಂದಿಲ್ಲ. ಕೆರೆಗಳಲ್ಲಿ ದನ ಕರು ತೊಳೆಯುತ್ತಿದ್ದರು. ಅಂತಹ ನೀರು ಕುಡಿದ ನನಗೆ ಯಾಕೆ ರೋಗ ಬರಲಿಲ್ಲ ಎಂಬ ಬಗ್ಗೆ ಕೆ.ಸಿ ವ್ಯಾಲಿ ಯೋಜನೆ ಬಗ್ಗೆ ಚಕಾರ ಎತ್ತಿರುವವರು ಉತ್ತರಿಸಬೇಕು’ ಎಂದು ಸವಾಲು ಹಾಕಿದರು.

‘ಕೆ.ಸಿ ವ್ಯಾಲಿ ಯೋಜನೆಯಿಂದ ನರಸಾಪುರ ಕೆರೆಗೆ ಹರಿದು ಬಂದಿರುವ ನೀರು ಕುಡಿದಿದ್ದೇನೆ. ಈ ನೀರಿನಲ್ಲಿ ವಿಷಕಾರಿ ಅಂಶವಿಲ್ಲ. ನೀರು ವಿಷಪೂರಿತವಾಗಿ ಸಾಯುವುದಾದರೆ ಮೊದಲು ನಾನೇ ಸಾಯುತ್ತೇನೆ. ಈ ನೀರಿನ ಬಳಕೆಯಿಂದ ಸಮಸ್ಯೆ ಆಗುವುದಿಲ್ಲ. ಕೆಲ ವ್ಯಕ್ತಿಗಳು ಯೋಜನೆ ಬಗ್ಗೆ ಆರಂಭದಿಂದಲೂ ಅಪಸ್ವರ ಎತ್ತುತ್ತಿದ್ದಾರೆ. ಜಿಲ್ಲೆಗೆ ನೀರು ತಂದಿರುವವರಿಗೆ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಅವರು ಇದನ್ನೆಲ್ಲಾ ಮಾಡಿಸುತ್ತಿದ್ದಾರೆ’ ಎಂದು ಪರೋಕ್ಷವಾಗಿ ಸಂಸದ ಕೆ.ಎಚ್‌.ಮುನಿಯಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ವಸೂಲಿ ಗಿರಾಕಿಗಳು: ‘ಯೋಜನೆಗೆ ಆರಂಭದಿಂದಲೂ ಅಡ್ಡಿಪಡಿಸುತ್ತಿರುವವರು ಜಿಲ್ಲೆಗೆ ನೀರು ಬಂದಿದ್ದರಿಂದ ಒಳಗೊಳಗೆ ಕುದಿಯುತ್ತಿದ್ದಾರೆ. ಯೋಜನೆಯ ಗುತ್ತಿಗೆದಾರರಿಂದ ತಮಗೆ ಕಮಿಷನ್ ಸಿಗಲಿಲ್ಲ ಎಂಬುದು ಅವರ ತೊಳಲಾಟ. ಇಂತಹ ವಸೂಲಿ ಗಿರಾಕಿಗಳ ಮಾತಿಗೆ ಜನ ಕಿವಿಗೊಡಬಾರದು’ ಎಂದು ವ್ಯಂಗ್ಯವಾಡಿದರು.

‘ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಸಿ ವ್ಯಾಲಿ ಯೋಜನೆ ರೂಪಿಸಿ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದಾರೆ. ₹ 1,400 ಕೋಟಿ ಅಂದಾಜು ವೆಚ್ಚದ ಈ ಯೋಜನೆಯಿಂದ ಜಿಲ್ಲೆಯ ನೀರಿನ ಬವಣೆ ಬಗೆಹರಿಯುವ ನಿರೀಕ್ಷೆ ಇತ್ತು. ಆದರೆ, ಕುತಂತ್ರಿಗಳು ಯೋಜನೆಗೆ ಕಲ್ಲು ಹಾಕಿದ್ದಾರೆ’ ಎಂದು ಕಿಡಿಕಾರಿದರು.

‘ಯೋಜನೆಯಿಂದ ಜಿಲ್ಲೆಯ 126 ಕೆರೆ ತುಂಬಿಸುವ ಉದ್ದೇಶವಿತ್ತು. ಕೆರೆಗಳು ಭರ್ತಿಯಾಗಿದ್ದರೆ ಅಂತರ್ಜಲ ವೃದ್ಧಿಯಾಗಿ ಕೃಷಿ ವಲಯ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ನೀರಿನ ಸಮಸ್ಯೆ ಕಾರಣಕ್ಕೆ ಕೃಷಿಯಿಂದ ವಿಮುಖವಾಗಿರುವ ರೈತಾಪಿ ವರ್ಗ ಪುನಃ ಕೃಷಿಯತ್ತ ಮುಖ ಮಾಡುತ್ತಿತ್ತು. ಆದರೆ, ಕೆಲ ಕಾಣದ ಕೈಗಳು ಯೋಜನೆಗೆ ಅಡ್ಡಗಾಲು ಹಾಕಿವೆ. ಜನ ಈ ಸಂಚುಕೋರರ ರಾಜಕೀಯ ದುರುದ್ದೇಶ ತಿಳಿಯಬೇಕು’ ಎಂದರು.

ಶುದ್ಧ ಸುಳ್ಳು: ‘ಬೆಂಗಳೂರಿನ ಕೊಳಚೆ ನೀರನ್ನು ತಮಿಳುನಾಡಿನ ಹೊಸೂರು ಸುತ್ತಮುತ್ತಲ ಗ್ರಾಮಗಳ ರೈತರು ಕೆರೆಗಳಲ್ಲಿ ಸಂಗ್ರಹಿಸಿಕೊಂಡು ಬೆಳೆ ಬೆಳೆಯುತ್ತಿದ್ದಾರೆ. ಜತೆಗೆ ಕೆರೆಗಳ ಅಕ್ಕಪಕ್ಕದ ಕೊಳವೆ ಬಾವಿಗಳ ನೀರು ಕುಡಿಯುತ್ತಿದ್ದಾರೆ. ಅವರಿಗೆ ಬಾರದ ಕಾಯಿಲೆ ನಮಗೆ ಹೇಗೆ ಬರುತ್ತದೆ? ನಮ್ಮ ಗ್ರಾಮದಲ್ಲಿ ಕೆಲವರಿಗೆ ಜ್ವರ, ನೆಗಡಿ, ಕೆಮ್ಮು ಬಂದಿರುವುದು ನಿಜ. ಕೆ.ಸಿ ವ್ಯಾಲಿ ನೀರಿನ ಬಳಕೆಯಿಂದ ಜನರಿಗೆ ಕಾಯಿಲೆ ಆಗಿದೆ ಎಂಬುದು ಶುದ್ಧ ಸುಳ್ಳು’ ಎಂದು ಖಾಜಿಕಲ್ಲಹಳ್ಳಿ ಗ್ರಾಮಸ್ಥ ಮುನಿರಾಜು ಸ್ಪಷ್ಟಪಡಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ, ಎಪಿಎಂಸಿ ಅಧ್ಯಕ್ಷ ವೆಂಕಟೇಶ್, ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಇ.ಗೋಪಾಲ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು