ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವಿನ ಕೊರತೆ: ಪ್ರಾಕೃತಿಕ ಅಸಮತೋಲನ

ವನ್ಯಜೀವಿ ಸಪ್ತಾಹದಲ್ಲಿ ರಾಜ್ಯ ವಿಜ್ಞಾನ ಪರಿಷತ್‌ ಅಧ್ಯಕ್ಷ ಶಿವಣ್ಣ ಕಳವಳ
Last Updated 9 ಅಕ್ಟೋಬರ್ 2019, 14:00 IST
ಅಕ್ಷರ ಗಾತ್ರ

ಕೋಲಾರ: ‘ಅರಿವಿನ ಕೊರತೆಯಿಂದ ಮನುಷ್ಯ ಪರಿಸರದ ಮೇಲೆ ದಾಳಿ ನಡೆಸುತ್ತಿದ್ದು, ಇದರಿಂದ ಪ್ರಾಕೃತಿಕ ಅಸಮತೋಲನವಾಗುತ್ತಿದೆ’ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಅಧ್ಯಕ್ಷ ಡಾ.ಶಿವಣ್ಣ ಕಳವಳ ವ್ಯಕ್ತಪಡಿಸಿದರು.

ರಾಜ್ಯ ವಿಜ್ಞಾನ ಪರಿಷತ್‌ ಹಾಗೂ ನಗರದ ಸರ್ಕಾರಿ ಮಹಿಳಾ ಕಾಲೇಜಿನ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ವನ್ಯಜೀವಿ ಸಪ್ತಾಹದಲ್ಲಿ ಮಾತನಾಡಿ, ‘ಮನುಷ್ಯ ಪ್ರಕೃತಿಯನ್ನು ಸೃಷ್ಟಿಸಬೇಕೇ ಹೊರತು ವಿಕೃತಿಯನ್ನು ಅಲ್ಲ’ ಎಂದರು.

‘ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ದುರಾಸೆಯ ಫಲವಾಗಿ ಪರಿಸರ ನಾಶವಾಗಿದೆ. ಜೀವಿಗಳು ಒಂದಕ್ಕೊಂದು ಅವಲಂಬಿತವಾಗಿರುತ್ತವೆ. ಜೀವಿಗಳನ್ನು ನಾಶ ಮಾಡಿದರೆ ಮನುಷ್ಯ ಸಹ ವಿನಾಶ ಕಾಣಬೇಕಾಗುತ್ತದೆ. ಮನುಷ್ಯನಿಗೆ ಇರುವ ಪ್ರಾಮುಖ್ಯತೆಯನ್ನು ವನ್ಯಜೀವಿಗಳಿಗೂ ಕೊಡಬೇಕು’ ಎಂದು ಕಿವಿಮಾತು ಹೇಳಿದರು.

‘ಹಿಂದಿನ ಕಾಲದಲ್ಲಿ ಖಾಲಿ ಜಾಗದಲ್ಲಿ ಗಿಡ ಮರ ಕಾಣುತ್ತಿದ್ದೆವು. ಅರಣ್ಯ ಸಂಪತ್ತು ಸಮೃದ್ಧವಾಗಿತ್ತು. ಹೀಗಾಗಿ ಸಕಾಲಕ್ಕೆ ಮಳೆಯಾಗಿ ಕೆರೆ ಕುಂಟೆಗಳಲ್ಲಿ ನೀರು ಸಂಗ್ರಹವಾಗುತ್ತಿತ್ತು. ಆದರೆ, ಈಗ ಗಿಡ ಮರ ನಾಶದಿಂದ ವಾತಾವರಣ ಕಲುಷಿತಗೊಂಡು ಆರೋಗ್ಯ ಸಮಸ್ಯೆ ಎದುರಾಗಿದೆ. ಜತೆಗೆ ಪ್ರಾಕೃತಿಕ ವಿಕೋಪ ಸಂಭವಿಸುತ್ತಿವೆ’ ಎಂದು ವಿಷಾದಿಸಿದರು.

‘ಮನುಷ್ಯ ಮೃಗದಂತೆ ವರ್ತಿಸುತ್ತಿದ್ದೇನೆ. ಜೀವಿಗಳಿಗೂ ಹಿಂಸೆ ನೀಡುತ್ತಾ ಪ್ರಾಕೃತಿಕ ಅಸಮತೋಲನ ಸೃಷ್ಟಿಸುತ್ತಿದ್ದಾನೆ. ಖಾಲಿ ಜಾಗದಲ್ಲೆಲ್ಲಾ ಗಗನಚುಂಬಿ ಕಟ್ಟಡಗಳು ತಲೆಎತ್ತಿವೆ. ಪ್ರಾಣಿ ಪಕ್ಷಿ ಸಂಕುಲ ನಾಶವಾಗುತ್ತಿದೆ. ಪರಿಸರ ರಕ್ಷಣೆಗೆ ಸರ್ಕಾರ ಅನೇಕ ಕಾರ್ಯಕ್ರಮ ರೂಪಿಸಿದೆ. ಪರಿಸರ ನಾಶದಿಂದ ಆಗುವ ದುಷ್ಪರಿಣಾಮದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.

ದೊಡ್ಡ ದುರಂತ: ‘ಬೆಳೆಗಳಿಗೆ ಮಾರಕವಾಗಿರುವ ಕ್ರಿಮಿ ಕೀಟ ತಿನ್ನುವ ಪಕ್ಷಿಗಳು ರೈತರ ಜೀವನಾಡಿಗಳಾಗಿವೆ. ಆದರೆ, ಮಾನವ ಪಕ್ಷಿ ಸಂಕುಲವನ್ನೇ ನಾಶ ಮಾಡಲು ಹೊರಟಿರುವುದು ದೊಡ್ಡ ದುರಂತ’ ಎಂದು ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಘಟಕದ ಕಾರ್ಯದರ್ಶಿ ವಿ.ಮಂಜುಳಾ ಭೀಮರಾವ್ ಹೇಳಿದರು.

‘ಪ್ರತಿ ಜೀವಿಗೂ ಬದುಕುವ ಹಕ್ಕಿದೆ. ಜನಸಂಖ್ಯೆಗೆ ಹೋಲಿಸಿದರೆ ಮರಗಳ ಸಂಖ್ಯೆ ಕಡಿಮೆಯಿದ್ದು, ಶುದ್ಧ ಗಾಳಿ ಸಿಗುತ್ತಿಲ್ಲ. ಪರಿಸರ ನಾಶದಿಂದ ಪ್ರಾಣಿ ಪಕ್ಷಿ ಸಂಕುಲಕ್ಕೆ ಸಮಸ್ಯೆಯಾಗುತ್ತಿದೆ. ಅರಣ್ಯ ನಾಶದಿಂದ ಭೂ ಸವಕಳಿ ಹೆಚ್ಚುತ್ತಿದೆ. ಜಲ ಮಾಲಿನ್ಯದಿಂದ ಅಂತರ್ಜಲ ಕಲುಷಿತಗೊಳ್ಳುತ್ತಿದೆ. ಜನ ಇನ್ನಾದರೂ ಎಚ್ಚೆತ್ತು ಪರಿಸರ ಮಾಲಿನ್ಯ ತಡೆಗೆ ಮುಂದಾಗಬೇಕು. ಇಲ್ಲದಿದ್ದರೆ ಮನುಕುಲಕ್ಕೆ ಉಳಿಗಾಲವಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

‘ವನ ಸಂರಕ್ಷಣೆಯೆಂದರೆ ಕೇವಲ ಮರ ಗಿಡ ಸಂರಕ್ಷಿಸುವುದು ಮಾತ್ರವಲ್ಲ. ಪಕ್ಷಿಗಳನ್ನು ಸಂರಕ್ಷಣೆ ಮಾಡುವುದು ಜನರ ಕರ್ತವ್ಯವಾಗಬೇಕು. ಇತ್ತೀಚಿನ ವರ್ಷಗಳಲ್ಲಿ ಗುಬ್ಬಿ, ಗಿಣಿ, ಪರಿವಾಳದಂತಹ ಪಕ್ಷಿಗಳು ಕಾಣಿಸುವುದು ಕಡಿಮೆಯಾಗಿದೆ. ಬೆಳೆ ಹಾಳು ಮಾಡುವ ಕ್ರಿಮಿ ಕೀಟಗಳ ಕಾಟ ತಪ್ಪಿಸಲು ರೈತರು ಕೀಟನಾಶಕ ಹಾಗೂ ರಾಸಾಯನಿಕ ಗೊಬ್ಬರ ಬಳಸುತ್ತಿರುವುದರಿಂದ ಪಕ್ಷಿ ಸಂಕುಲ ನಾಶವಾಗುತ್ತಿದೆ’ ಎಂದರು.

‘ಮನುಷ್ಯ ಉಳಿವಿಗಾಗಿ ಭವಿಷ್ಯದಲ್ಲಿ ಪರಿಸರದ ಜೊತೆಗೆ ಯುದ್ಧ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಈ ಸತ್ಯ ಅದನ್ನು ಅರಿತು ಪ್ರಕೃತಿ ರಕ್ಷಣೆಗೆ ಮುಂದಾಗಿ’ ಎಂದು ಬೆಮಲ್‌ ನಿವೃತ್ತ ನೌಕರ ಜಯಸಿಂಹ ಕಿವಿಮಾತು ಹೇಳಿದರು.

ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ವಿಜಯ್‌ಕುಮಾರ್, ರೋಟರಿ ಸಂಸ್ಥೆ ಅಧ್ಯಕ್ಷ ವೆಂಕಟರಮಣಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT