ಬುಧವಾರ, ನವೆಂಬರ್ 20, 2019
26 °C
ಸಭೆಯಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಬಾವಾ ಹೇಳಿಕೆ

ಅರಿವಿನ ಕೊರತೆ: ಅರ್ಹರಿಗೆ ತಲುಪದ ಸವಲತ್ತು

Published:
Updated:
Prajavani

ಕೋಲಾರ: ‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಕ್ಫ್‌ ಬೋರ್ಡ್‌ ಸೇರಿದಂತೆ ವಿವಿಧ ಇಲಾಖೆ ಸವಲತ್ತುಗಳ ಬಗ್ಗೆ ಸಮುದಾಯದವರಿಗೆ ಜಾಗೃತಿ ಮೂಡಿಸಲು ಬೆಂಗಳೂರಿನಲ್ಲಿ ಸೆ.21ರಂದು ಸ್ವಯಂ ಸೇವಾ ಸಂಸ್ಥೆಗಳ ಸಭೆ ಕರೆಯಲಾಗಿದೆ’ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಿ.ಎ.ಬಾವಾ ತಿಳಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸಮುದಾಯಕ್ಕೆ ಸಾಕಷ್ಟು ಸವಲತ್ತು ನೀಡಿದೆ. ಆದರೆ, ಅರಿವಿನ ಕೊರತೆಯಿಂದ ಸೌಲಭ್ಯಗಳು ಅರ್ಹರಿಗೆ ತಲುಪಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸ್ವಯಂ ಸೇವಾ ಸಂಸ್ಥೆಗಳ ಸಭೆ ನಡೆಸಿ ವಿವಿಧ ಇಲಾಖೆ ಸವಲತ್ತುಗಳ ಬಗ್ಗೆ ಸಮುದಾಯದವರಿಗೆ ತಿಳಿವಳಿಕೆ ಮೂಡಿಸುತ್ತೇವೆ. ರಾಜ್ಯದಲ್ಲಿ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಮಾರ್ಚ್‌ನಲ್ಲೇ ವಿದ್ಯಾರ್ಥಿವೇತನ ಬಿಡುಗಡೆಯಾಗಬೇಕಿತ್ತು. ಆದರೆ, ಕೆಲ ಮಾಹಿತಿ ಕೊರತೆಯಿಂದ ವಿಳಂಬವಾಗಿದೆ. ದೆಹಲಿಗೆ ತೆರಳಿ ಅಗತ್ಯ ಮಾಹಿತಿ ಒದಗಿಸಿದ್ದು, ಸದ್ಯದಲ್ಲೇ 9 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬಿಡುಗಡೆಯಾಗಲಿದೆ’ ಎಂದು ಭರವಸೆ ನೀಡಿದರು.

‘ಅಧಿಕಾರಿಗಳು ಸರ್ಕಾರ ನೀಡುವ ಸಂಬಳಕ್ಕಾಗಿ ಕೆಲಸ ಮಾಡಬೇಡಿ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ ಎಂದು ಭಾವಿಸಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ’ ಎಂದು ಕಿವಿಮಾತು ಹೇಳಿದರು.

‘ಜಿಲ್ಲಾ ಮಟ್ಟದಲ್ಲಿ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸುವುದು ಕುಂದು ಕೊರತೆ ಸಭೆಯ ಮೂಲ ಉದ್ದೇಶ. ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ’ ಎಂದು ಆಯೋಗದ ಕಾರ್ಯದರ್ಶಿ ಅನಿಸ್ ಸಿರಾಜ್ ಕೋರಿದರು.

ನಿಯಮ ಸರಳಗೊಳಿಸಿ: ‘ಸರ್ಕಾರದ ಯೋಜನೆಗಳ ಬಗ್ಗೆ ಶಿಕ್ಷಕರು ಶಾಲಾ ಮಕ್ಕಳ ಮೂಲಕ ಪೋಷಕರಿಗೆ ಅರಿವು ಮೂಡಿಸಬೇಕು. ಸಣ್ಣಪುಟ್ಟ ಲೋಪದೋಷದಿಂದ ವಿದ್ಯಾರ್ಥಿವೇತನದ ಹಣ ಬ್ಯಾಂಕ್‌ನಲ್ಲೇ ಉಳಿದಿದೆ. ಯಾವುದಾದರೂ ಒಂದು ದಾಖಲೆಪತ್ರ ಸರಿಯಿದ್ದರೂ ಹಣ ಪಾವತಿಸುವಂತೆ ನಿಯಮ ಸರಳಗೊಳಿಸಬೇಕು. ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಕಾಲಾವಧಿ ಅ.15ರವರೆಗೆ ವಿಸ್ತರಣೆಯಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ವಿವರಿಸಿದರು.

‘ಜಿಲ್ಲಾ ಕೇಂದ್ರದ 13 ವಾರ್ಡ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉರ್ದು ಶಾಲೆಗಳಿಗೆ ಜಾಗದ ಕೊರತೆ ನೀಗಿಸಬೇಕು. ಅಲ್ಪಸಂಖ್ಯಾತರ ವಾರ್ಡ್‌ಗಳ ಅಭಿವೃದ್ಧಿಗೆ ₹ 3 ಕೋಟಿ ಬಿಡುಗಡೆ ಮಾಡಬೇಕು, ಅಮೃತ್‌ ಯೋಜನೆ 3ನೇ ಹಂತದಲ್ಲಿ ಆಶ್ರಯ ಬಡಾವಣೆಗಳಿಗೆ ಯುಜಿಡಿ ಸೌಲಭ್ಯ ಕಲ್ಪಿಸಬೇಕು. ಜನಸಂಖ್ಯೆ ಆಧಾರದಲ್ಲಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ನಗರಸಭೆ ಮಾಜಿ ಸದಸ್ಯ ಅಫ್ರೋಜ್‌ ಪಾಷಾ ಮನವಿ ಮಾಡಿದರು.

ಸಾಲ ಕೊಡುತ್ತಿಲ್ಲ: ‘ಯಾವುದೇ ರಾಜಕೀಯ ಪಕ್ಷವಿದ್ದರೂ ಶಾಸಕರ ಬೆಂಬಲಿಗರಿಗಷ್ಟೇ ಸರ್ಕಾರದ ಸವಲತ್ತು ಸಿಗುತ್ತಿವೆ. ಬಡವರು ಸರ್ಕಾರದ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಸಾಲ ಮರುಪಾವತಿ ಆಗುವುದಿಲ್ಲ ಎಂಬ ಕಾರಣಕ್ಕೆ ಅಲ್ಪಸಂಖ್ಯಾತರಿಗೆ ಬ್ಯಾಂಕ್‌ಗಳು ಸಾಲ ಕೊಡುತ್ತಿಲ್ಲ’ ಎಂದು ಇಕ್ಬಾಲ್ ಅಹಮ್ಮದ್‌ ಆರೋಪಿಸಿದರು.

‘ಕ್ರಿಶ್ಚಿಯನ್ ಬಿಟ್ಟು ಇತರ ಸಮುದಾಯದವರು ನಕಲಿ ಜಾತ್ರಿ ಪ್ರಮಾಣಪತ್ರ ಸೃಷ್ಟಿಸಿ ಬಿದಾಯಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ಈ ಅಕ್ರಮಕ್ಕೆ ಕಡಿವಾಣ ಹಾಕಬೇಕು. ಶೈಕ್ಷಣಿಕ ಸಾಲದ ಮೊತ್ತವನ್ನು ಹೆಚ್ಚಿಸಬೇ’ ಎಂದು ಆರ್.ಭಾಸ್ಕರ್ ದೇವತ ಒತ್ತಾಯಿಸಿದರು.

ಜಿಲ್ಲಾ ವಕ್ಫ್‌ ಬೋರ್ಡ್‌ ಅಧ್ಯಕ್ಷ ಇದಾಯತ್‌ ಉಲ್ಲಾ ಷರೀಫ್‌, ಉಪಾಧ್ಯಕ್ಷ ಯೂನಿಸ್, ಸದಸ್ಯ ಅಕ್ಬರ್ ಷರೀಫ್, ಮಾಜಿ ಅಧ್ಯಕ್ಷ ಅಬ್ದುಲ್ ಖಯ್ಯೂಂ, ಮಾಲೂರು ಪುರಸಭೆ ಸದಸ್ಯ ಇಮ್ತಿಯಾಜ್‌ ಖಾನ್‌, ಉರ್ದು ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಶೇಖ್ ಫಯಾಜ್‌ ಉಲ್ಲಾ, ನಗರಸಭೆ ಮಾಜಿ ಸದಸ್ಯರಾದ ಚಾಂದ್‌ಪಾಷಾ, ಸಾದಿಕ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)