ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಲಹಳ್ಳಿಯಲ್ಲಿ ಸ್ವಚ್ಛತೆ ಮರೀಚಿಕೆ

ಗ್ರಾಮದಲ್ಲಿ ಹರಿಯುವ ಕಾರ್ಖಾನೆ ತಾಜ್ಯ ನೀರು l ಸೌಕರ್ಯವಿಲ್ಲದೆ ಬಳಲಿದ ಗ್ರಾಮಸ್ಥರು
Last Updated 27 ಡಿಸೆಂಬರ್ 2022, 5:53 IST
ಅಕ್ಷರ ಗಾತ್ರ

ಮಾಲೂರು: ಪಟ್ಟಣದ ಸಮೀಪ ಇರುವ ಬ್ಯಾಲಹಳ್ಳಿ ಮೂಲ ಸೌರ್ಕಯಗಳಿಂದ ವಂಚಿತವಾಗಿದ್ದು, ಸ್ವಚ್ಛತೆ ಇಲ್ಲಿ ಮರಿಚೀಕೆಯಾಗಿದೆ.

370 ಮತದಾರರು ಇರುವ ಈ ಗ್ರಾಮದಲ್ಲಿ ಎರಡು– ಮೂರು ಸಾವಿರ ಕಾರ್ಮಿಕರು ಬಾಡಿಗೆ ಮನೆಗಳಲ್ಲಿ ವಾಸವಿದ್ದಾರೆ. ರಸ್ತೆ, ಚರಂಡಿಯಂತಹ ಕನಿಷ್ಠ ಮೂಲಸೌಕರ್ಯ ಇಲ್ಲದೆ ಇಲ್ಲಿನ ಜನ ಬಳಲಿದ್ದಾರೆ.

ತಾಲ್ಲೂಕಿನ ನೊಸಗೆರೆ ಗ್ರಾ.ಪಂ. ವ್ಯಾಪ್ತಿಯ ಬ್ಯಾಲಹಳ್ಳಿ ಬಳಿ ಹಲವು ಕೈಗಾರಿಕೆಗಳಿವೆ. ಆದರೆ ಇದರಿಂದ ಅನುಕೂಲಕ್ಕಿಂತ ಗ್ರಾಮಸ್ಥರಿಗೆ ತೊಂದರೆ ಹೆಚ್ಚಾಗಿದೆ.

ಬ್ಯಾಲಹಳ್ಳಿ ತಗ್ಗು ಪ್ರದೇಶದ ಲ್ಲಿರುವುದರಿಂದ ಅಪೋಲೋ, ರೆಸೀಲ್ ಮತ್ತು ಎಡಿಎಲ್‌ಆರ್‌ ಸೇರಿದಂತೆ ಮುಂತಾದ ಕಾರ್ಖಾನೆಗಳಿಂದ ವಿಷಯುಕ್ತ ರಾಸಾಯನಿಕ ತ್ಯಾಜ್ಯದ ದ್ರವ ಹರಿಯುತ್ತಿದೆ. ಇದು ಚರಂಡಿಗಳ ಮೂಲಕ ಕೆರೆ ಸೇರುತ್ತಿದೆ. ಇದರಿಂದ ನೀರು ಮಲಿನವಾಗಿ ನಿರುಪಯುಕ್ತವಾಗಿದೆ. ಜಾನುವಾರುಗಳಿಗೆ ನೀರು ಕುಡಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಅಂತರ್ಜಲವು ವಿಷವಾಗುತ್ತಿದೆ. ಕುಡಿಯುವ ನೀರಿಗೆ ವಿಷ ಪೂರಿತ ಕೆಮಿಕಲ್ಸ್ ಸೇರಿಕೊಳ್ಳುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದ ಕಾಯಿಲೆ ಹರಡುವ ಭೀತಿ ಗ್ರಾಮದ ನಿವಾಸಿಗಳನ್ನು ಕಾಡುತ್ತಿದೆ.

ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲ. ಇರುವ ಚರಂಡಿಗಳು ಹದಗೆಟ್ಟಿವೆ. ಮನೆ ಮುಂದೆಯೇ ಹರಿಯುವ ಚರಂಡಿಗಳನ್ನು ಸ್ವಚ್ಛಗೊಳಿಸಿದೆ ಅಶುಚಿತ್ವ ತಾಂಡವವಾಡುತ್ತಿದೆ. ಇಲ್ಲಿನ ಜನ ದುರ್ನಾತದೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ಬ್ಯಾಲಹಳ್ಳಿಯಲ್ಲಿ ಕಸ ವಿಲೇವಾರಿಯೂ ಆಗುತ್ತಿಲ್ಲ. ಎಲ್ಲಂದರಲ್ಲ ಕಸದ ರಾಶಿ
ಬಿದ್ದಿದೆ.

ಕುಂಟೆ ನಿರ್ಲಕ್ಷ್ಯ:ಗ್ರಾಮಕ್ಕೆ ಪ್ರವೇಶ ದ್ವಾರದಲ್ಲಿ ಕುಂಟೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಗಿಡ ಗೆಂಟುಗಳು ಬೆಳೆದು ವಿಷಜಂತುಗಳ ಆವಾಸಸ್ಥಾನವಾಗಿದೆ. ಇಲ್ಲಿಂದ ಹಾವು–ಚೇಳುಗಳು ಮನೆಗಳು ಸೇರಿ ಜನರಲ್ಲಿ ಭಯ ಹುಟ್ಟಿಸುತ್ತಿದೆ. ನಿರ್ವಹಣೆ ಇಲ್ಲದ ಕಾರಣ ಕುಂಟೆ ದುರ್ನಾತ ಬೀರುತ್ತಿದೆ. ಇಲ್ಲಿನ ಸುತ್ತಮುತ್ತಲಿನ ನಿವಾಸಿಗಳು ಮೂಗು ಮುಚ್ಚಿಕೊಂಡು ಜೀವನ ನಡೆಸುತ್ತಿದ್ದಾರೆ.

ಕಾಲುದಾರಿಯಲ್ಲೇ ಸಂಚಾರ: ಗ್ರಾಮದಲ್ಲಿ ಸರಿಯಾದ ರಸ್ತೆಗಳಿಲ್ಲದೆ ಕಾಲು ದಾರಿಯಲ್ಲಿ ಸಂಚರಿಸಬೇಕಾದ ಸ್ಥಿತಿ ಇದೆ. ಇಲ್ಲಿ ದ್ವಿಚಕ್ರ ಬಿಟ್ಟರೆ ನಾಲ್ಕು ಚಕ್ರದ ವಾಹನಗಳು ಸಂಚರಿಸಲು ಸಾಧ್ಯವಿಲ್ಲ. ಆಸ್ಪತ್ರೆಗೆ ಹೋಗಬೇಕಾದ ತುರ್ತು ಸಂದರ್ಭಗಳಲ್ಲಿ ಪರದಾಡಬೇಕಿದೆ.

ಅಧಿಕಾರಿಗಳ ನಿರ್ಲಕ್ಷ್ಯ

‘ಗ್ರಾಮದ ಸಮಸ್ಯೆ ಬಗ್ಗೆ ಹಲವು ಬಾರಿ ಪಂಚಾಯಿತಿಯ ಗಮನಕ್ಕೆ ತಂದರೂ ಅಧಿಕಾರಿಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಅಭಿವೃದ್ಧಿ ಕಾಣದ ಹಾಗೂ ಸಮಸ್ಯೆ ಇರುವ ಗ್ರಾಮಕ್ಕೆ ಪಂಚಾಯಿತಿಯಿಂದ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಪ್ರತಿ ಸದಸ್ಯರಿಗೂ ಸಮ ಅನುದಾನ ಬಿಡುಗಡೆ ಮಾಡದೇ ಮೂಲ ಸೌರ್ಕಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬ್ಯಾಲಹಳ್ಳಿ ಕ್ಷೇತ್ರದ ಗ್ರಾ.ಪಂ ಸದಸ್ಯ ಚಂದಶೇಖರ್‌ ತಿಳಿಸಿದರು.

ಮಂಡಳಿಗೆ ದೂರು

‘ಅಧಿಕಾರ ವಹಿಸಿಕೊಂಡು ಒಂದು ಕಳೆದಿದೆ. ಬ್ಯಾಲಹಳ್ಳಿ ಸ್ವಚ್ಛತೆ ಕ್ರಮಕೈ ಗೊಳ್ಳುತ್ತೇವೆ. ಗ್ರಾಮದ ಸುತ್ತಮುತ್ತಲಿನ ಕಾರ್ಖಾನೆಗಳಿಂದ ಬರುವ ರಾಸಾಯನಿಕ ಹರಿಯುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಲಾಗಿದೆ. ಆದರೆ ಮಂಡಳಿಯಿಂದ ಪತ್ರಿಕ್ರಿಯೆ ಬಂದಿಲ್ಲ’ ಎಂದು ನೊಸಗೆರೆ ಪಿಡಿಒ ಅಂಬರೀಶ್
ತಿಳಿಸಿದರು.

ಪ್ರತಿಕ್ರಿಯಿಸದ ಅಧಿಕಾರಿ

ಬ್ಯಾಲಹಳ್ಳಿಯ ದುಸ್ಥಿತಿಯ ಬಗ್ಗೆ ಪ್ರಜಾವಾಣಿ ನೊಸಗೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವಿಶ್ವನಾಥ್ ಅವರನ್ನು ಫೋನ್‌ ಮೂಲಕ ಸಂಪರ್ಕಿಸಿದ ವೇಳೆ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT