ಬಂಗಾರಪೇಟೆ: ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಕದರಿನತ್ತ ಗ್ರಾಮದ ಮುಖ್ಯ ರಸ್ತೆಯು ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿಡಿದು ಓಡಾಡುವಂತಾಗಿದೆ.
ಕದರಿನತ್ತ ಗ್ರಾಮದ ಸುತ್ತಾ ಕಾಡು ಆವರಿಸಿಕೊಂಡಿದ್ದು, ಸುಮಾರು 120 ರೈತಾಪಿ ಕುಟುಂಬಗಳು ವಾಸಿಸುತ್ತಿವೆ. ಆದರೆ ಈ ಗ್ರಾಮಕ್ಕೆ ಸರಿಯಾದ ರಸ್ತೆ, ಚರಂಡಿ, ಬೀದಿ ದೀಪ, ಸಶ್ಮಾನ ಇಲ್ಲದೆ ಪರದಾಡುವಂತಾಗಿದೆ.
ಈ ಗ್ರಾಮಕ್ಕೆ ತೆರಳಬೇಕಾದರೆ ಮೂರು ಕಿ.ಮೀ. ಕಾಡಿನ ಮಧ್ಯೆ ಹೋಗಬೇಕಾಗಿದೆ. ಗ್ರಾಮಕ್ಕೆ ಬೆಳಿಗ್ಗೆ ಮತ್ತು ಸಂಜೆ ಮಾತ್ರ ಬಸ್ ಸಂಚರಿಸುತ್ತದೆ. ಈ ಮಧ್ಯೆ ಏನಾದರೂ ನಗರಕ್ಕೆ ಹೋಗಬೇಕಾದರೆ ನಡೆದುಕೊಂಡೇ ಸಾಗಬೇಕು. ಜತೆಗೆ ಗ್ರಾಮದಲ್ಲಿ ಏಳನೇ ತರಗತಿವರೆಗೂ ಮಾತ್ರ ಶಾಲೆಯಿದ್ದು, ಹೆಚ್ಚಿನ ಶಿಕ್ಷಣಕ್ಕೆ ಬೇರೆ ಗ್ರಾಮಕ್ಕೆ ತೆರಳಬೇಕು. ಹಾಗಾಗಿ ಅನೇಕ ಮಂದಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇನ್ನೂ ರಾತ್ರಿ ವೇಳೆ ಆನೆಗಳು ಸಂಚಿಸುತ್ತಿದ್ದು, ರಸ್ತೆ ತೀರಾ ಹದಗೆಟ್ಟಿರುವುದರಿಂದ ವಾಹನ ಸವಾರರಿಗೆ ರಸ್ತೆಯಲ್ಲಿನ ಗುಂಡಿಯಿಂದ ತಪ್ಪಿಸಿಕೊಳ್ಳುವುದಾ ಅಥವಾ ವಾಹನಗಳಿಗೆ ಅಡ್ಡ ಬರುವ ಆನೆಗಳಿಂದ ತಪ್ಪಿಸಿಕೊಳ್ಳುವುದಾ ಎಂಬುದು ಚಿಂತೆಯಾಗಿದೆ.
ಗ್ರಾಮಸ್ಥರು ಆರೋಗ್ಯ ಹದಗೆಟ್ಟರೆ ತೋಪ್ಪನಹಳ್ಳಿ, ಕಾಮಸಮುದ್ರ, ಬಂಗಾರಪೇಟೆ, ಕೆಜಿಎಫ್‌ಗೆ ತೆರಳಬೇಕಾಗಿದೆ. ಇನ್ನೂ ಗ್ರಾಮದ ರೈತರ ಜಮೀನುಗಳಿಗೆ ಹೋಗಲು ಸರಿಯಾದ ರಸ್ತೆ ಇಲ್ಲದೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಗ್ರಾಮದಲ್ಲಿ ಸಮರ್ಪಕ ಬೀದಿ ದೀಪಗಳಿಲ್ಲ. ಕೆಲವಡೆ ದೀಪ ಬೆಳಗುವುದಿಲ್ಲ, ಇನ್ನೂ ಕೆಲವೆಡೆ ದೀಪಗಳೇ ಇಲ್ಲ. ಇದರಿಂದ ಮಕ್ಕಳು, ಮಹಿಳೆಯರು ರಾತ್ರಿ ವೇಳೆ ಸಂಚರಿಸಲು ಭಯಪಡಬೇಕಾಗಿದೆ.
ಸ್ಮಶಾನದ ಕೊರತೆ: ಯಾರಾದರೂ ಮೃತಪಟ್ಟರೆ ಗೌರವಯುತ ಅಂತ್ಯಸಂಸ್ಕಾರ ಮಾಡಲು ಸ್ಮಶಾನ ಇಲ್ಲದ ಪರಿಸ್ಥಿತಿ ಗ್ರಾಮಸ್ಥರದು. ಗ್ರಾಮ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಇದ್ದು, ಸ್ಮಶಾನಕ್ಕೆ ಜಮೀನು ಕಾಯ್ದಿರಿಸಲು ಹಲವು ಬಾರಿ ಹೋರಾಟ ಮಾಡಿದರೂ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ನಡೆಸಿ ಸ್ಮಶಾನ ಭೂಮಿ ಗುರುತಿಸಲು ಆಸಕ್ತಿ ವಹಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.
ಚುನಾವಣೆ ಸಂದರ್ಭದಲ್ಲಿ ಮಾತ್ರ ಊರಿಗೆ ಬರುವ ಜನಪ್ರತಿನಿಧಿಗಳು ನಂತರ ಈ ಕಡೆ ತಲೆ ಹಾಕುವುದೇ ಇಲ್ಲ. ರಸ್ತೆ ಸಂಪೂರ್ಣ ಹಾಳಾಗಿದ್ದರೂ ದುರಸ್ತಿ ಮಾಡಿಸುವವರಿಲ್ಲ ಎಂದು ಕದರಿನತ್ತ ನಿವಾಸಿ ಸತೀಶ್ ರಾವ್ ಬೇಸರ ವ್ಯಕ್ತಪಡಿಸಿದರು.
ರಸ್ತೆ ಅಭಿವೃದ್ಧಿಪಡಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ಅಮಾಧಾನ ಹೊರಹಾಕಿದರು.
ಕದರಿನತ್ತ ಗ್ರಾಮಕ್ಕೆ ಸ್ಮಶಾನ ಭೂಮಿ ಸರ್ವೆ ಮಾಡಿ ಅತಿ ಶೀಘ್ರದಲ್ಲೇ ಪಂಚಾಯಿತಿಗೆ ಹಸ್ತಾಂತರ ಮಾಡಲಾಗುವುದುರಶ್ಮಿ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.