ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಾರದ ಕೊರತೆ: ಭಣಗುಟ್ಟಿದ ಯುವಜನ ಮೇಳ

ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್‌ ಸಿಡಿಮಿಡಿ
Last Updated 16 ನವೆಂಬರ್ 2019, 14:08 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಕೆಂಬೋಡಿ ಗ್ರಾಮದ ಜನತಾ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವಜನ ಮೇಳವು ಜನರಿಲ್ಲದೆ ಭಣಗುಟ್ಟಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಹಳ್ಳಿಹಾಡು ಸಾಂಸ್ಕೃತಿಕ ಜನಪದ ಕಲಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಯುವಜನ ಮೇಳವು ಪ್ರಚಾರದ ಕೊರತೆಯಿಂದಾಗಿ ನಿರೀಕ್ಷಿತ ಯಶ ಕಾಣಲಿಲ್ಲ.

ಅಧಿಕಾರಿಗಳು ಕಾರ್ಯಕ್ರಮದ ಬಗ್ಗೆ ವ್ಯಾಪಕ ಪ್ರಚಾರ ನಡೆಸಿರಲಿಲ್ಲ. ಹೀಗಾಗಿ ಸರಿಯಾದ ಮಾಹಿತಿ ಇಲ್ಲದೆ ಕಲಾ ತಂಡಗಳು ಕಾರ್ಯಕ್ರಮದಿಂದ ದೂರ ಉಳಿದವು. ಜಿಲ್ಲಾ ಮಟ್ಟದ ಯುವಜನ ಮೇಳದ ಸಂಬಂಧ ಜಿಲ್ಲಾಧಿಕಾರಿ ಆಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಿದ್ದ ಅಧಿಕಾರಿಗಳು 500ಕ್ಕೂ ಹೆಚ್ಚು ಯುವಕ ಯುವತಿಯರು ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಇದೆ ಎಂದು ಸಭೆಯಲ್ಲಿ ಹೇಳಿದ್ದರು.

ಪೂರ್ವ ನಿಗದಿಯಂತೆ ಶನಿವಾರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾದರೂ ಪ್ರೇಕ್ಷಕರೇ ಇರಲಿಲ್ಲ, ಹೀಗಾಗಿ ಅಧಿಕಾರಿಗಳು ಶಾಲಾ ಮಕ್ಕಳನ್ನು ಕಾರ್ಯಕ್ರಮಕ್ಕೆ ಕರೆತಂದರು. ಕಾರ್ಯಕ್ರಮ ಆರಂಭವಾಗಿ ಒಂದು ತಾಸು ಕಳೆದರೂ ಕಲಾ ತಂಡಗಳು ಬಾರದಿದ್ದರಿಂದ ಸಿಡಿಮಿಡಿಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಯುವಜನ ಮೇಳದಲ್ಲಿ ಭಾವಗೀತೆ, ಗೀಗಿ ಪದ, ಲಾವಣಿ ಸೇರಿದಂತೆ 17 ಸ್ಪರ್ಧೆ ಆಯೋಜಿಸಲಾಗಿತ್ತು. ಕೆಂಬೋಡಿ ಗ್ರಾಮದ ಯುವಕರ ಕಲಾ ತಂಡ ಹೊರತುಪಡಿಸಿದರೆ ಜಿಲ್ಲೆಯ ಬೇರೆ ಯಾವ ತಾಲ್ಲೂಕಿನಿಂದಲೂ ಕಲಾ ತಂಡಗಳು ಬರಲಿಲ್ಲ.

ಜನಪ್ರತಿನಿಧಿಗಳ ಗೈರು: ಯುವಜನ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಸಂಸದ ಎಸ್.ಮುನಿಸ್ವಾಮಿ ಹಾಗೂ ಎಲ್ಲಾ ಶಾಸಕರನ್ನು ಆಹ್ವಾನಿಸಲಾಗಿತು. ಈ ಪೈಕಿ ಸಚಿವ ನಾಗೇಶ್‌ ಅವರನ್ನು ಹೊರತುಪಡಿಸಿ ಯಾವೊಬ್ಬ ಜನಪ್ರತಿನಿಧಿಗಳು ಕಾರ್ಯಕ್ರಮದತ್ತ ಸುಳಿಯಲಿಲ್ಲ.

ಕಾರ್ಯಕ್ರಮದ ಅವ್ಯವಸ್ಥೆಯಿಂದ ರೋಸಿ ಹೋದ ಸಚಿವರು, ‘ನಾಮಕಾವಸ್ಥೆಗೆ ಯುವಜನ ಮೇಳ ನಡೆಯಬಾರದು. ಯುವ ಮನಸ್ಸುಗಳನ್ನು ಸೃಜನಾತ್ಮಕವಾಗಿ ಬೆಳೆಸಿ ಮುನ್ನಡೆಸಲು ಮೇಳ ಪೂರಕವಾಗಿರಬೇಕು’ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಉದ್ಯೋಗ ಮೇಳ: ‘ಜಿಲ್ಲೆಯಲ್ಲಿ ಸಾಕಷ್ಟು ಮಂದಿ ವಿದ್ಯಾವಂತ ನಿರುದ್ಯೋಗಿಗಳಿದ್ದು, ಇವರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿಷ್ಠಿತ ಕಂಪನಿಗಳನ್ನು ಆಹ್ವಾನಿಸಿ ಬೃಹತ್‌ ಉದ್ಯೋಗ ಮೇಳ ನಡೆಸಲಾಗುತ್ತದೆ’ ಎಂದು ಹೇಳಿದರು.

‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಬರ ಪರಿಸ್ಥಿತಿಯಿದೆ. ಹಣಕಾಸು ಸಮಸ್ಯೆ ನಡುವೆಯೂ ಜಿಲ್ಲೆಯ ಮಕ್ಕಳು ಶಿಕ್ಷಣ ಮುಂದುವರಿಸಿ ವಿದ್ಯಾವಂತರಾಗುತ್ತಿದ್ದಾರೆ. ಉನ್ನತ ಶಿಕ್ಷಣ ಪಡೆದರೆ ಉದ್ಯೋಗ ಸಿಗುತ್ತದೆ’ ಎಂದು ಕಿವಿಮಾತು ಹೇಳಿದರು.

‘ಕಲೆ, ಸಾಹಿತ್ಯದಲ್ಲಿ ಯಾವುದೇ ಭೇದ ಭಾವವಿಲ್ಲ, ಕಲಿಕೆಯ ಆಸಕ್ತಿಯಿದ್ದರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಪುರುಷ, ಮಹಿಳೆ ಎಂಬ ಮೇಲು ಕೀಳು ಭಾವನೆ ಬಿಟ್ಟು, ಸಮಾಜದ ಶಕ್ತಿಯಾಗಿ ಬೆಳೆಯಬೇಕು’ ಎಂದು ಆಶಿಸಿದರು.

ಯುವ ಸಂಪನ್ಮೂಲ: ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ‘ಭಾರತ ದೇಶವು ಯುವ ಸಂಪನ್ಮೂಲದಿಂದ ಕೂಡಿದೆ. ಮಕ್ಕಳು ಶಿಕ್ಷಣ ಮತ್ತು ಕೌಶಲ ಪಡೆದು ತಮ್ಮ ಪ್ರತಿಭೆ ತೋರಿಸಬೇಕು. ಕೌಶಲದಿಂದ ವಿಶ್ವದ ಇತರೆ ಭಾಗಗಳಿಗೂ ದೇಶದ ಮಾನವ ಸಂಪನ್ಮೂಲ ಕೊಡುವಂತಾಗಬೇಕು’ ಎಂದು ಸಲಹೆ ನೀಡಿದರು.

‘ಮಾಹಿತಿ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಅವಕಾಶವಿದೆ. ಅತಿಯಾದ ಮೊಬೈಲ್ ಬಳಸುವುದು ಒಳ್ಳೆಯದಲ್ಲ. ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇಂಟರ್‌ನೆಟ್‌ ಹಾಗೂ ಮೊಬೈಲ್‌ ಸದುದ್ದೇಶಕ್ಕೆ ಬಳಸಬೇಕು’ ಎಂದು ಹೇಳಿದರು.

ತಹಶೀಲ್ದಾರ್ ಶೋಭಿತಾ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಎಲ್.ದೇವಿಕಾ, ಜನತಾ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಬಿಸಪ್ಪಗೌಡ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT