ಜಮೀನು ಒತ್ತುವರಿ ತೆರವಿಗೆ ಒತ್ತಾಯ: ಧರಣಿ

ಕೋಲಾರ: ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವು ಮಾಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಇಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಧರಣಿ ನಡೆಸಿದರು.
ಟಮಕದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಸದಸ್ಯರು, ‘ಸರ್ಕಾರಿ ಜಮೀನು ರಕ್ಷಿಸಬೇಕಾದ ಕಂದಾಯ ಇಲಾಖೆ ಅಧಿಕಾರಿಗಳು ಭೂಗಳ್ಳರ ಜತೆ ಶಾಮೀಲಾಗಿದ್ದಾರೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಗೋಮಾಳ, ಗುಂಡು ತೋಪು, ಸ್ಮಶಾನ, ಕೆರೆ ಅಂಗಳ ಒತ್ತುವರಿಯಾಗಿವೆ. ಆದರೆ, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಜಿಲ್ಲೆಯ ವಿವಿಧೆಡೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಮೀನುಗಳು ಒತ್ತುವರಿಯಾಗಿವೆ. ಕಂದಾಯ ಇಲಾಖೆ ಅಧಿಕಾರಿಗಳೇ ಸರ್ಕಾರಿ ಜಮೀನುಗಳಿಗೆ ನಕಲಿ ದಾಖಲೆಪತ್ರ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಪರಭಾರೆ ಮಾಡಿದ್ದಾರೆ’ ಎಂದು ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಸಿ.ನಾಗೇಶ್ ಹೇಳಿದರು.
‘ತಾಲ್ಲೂಕಿನ ಚಲುವನಹಳ್ಳಿ ಕೆರೆ ಅಂಗಳದ 43 ಎಕರೆ ಜಮೀನನ್ನು ರಮೇಶ್ಬಾಬು ಎಂಬುವರು ಒತ್ತುವರಿ ಮಾಡಿದ್ದಾರೆ. ಅದೇ ರೀತಿ ಲಕ್ಷ್ಮಣರಾಜು ಎಂಬುವರು ಕೋಡಿಕಣ್ಣೂರು ಕೆರೆ ಅಂಗಳದಲ್ಲಿ 2 ಎಕರೆ ಜಾಗ ಅತಿಕ್ರಮಿಸಿಕೊಂಡಿದ್ದಾರೆ. ಈ ಸಂಬಂಧ ದಾಖಲೆಪತ್ರ ಸಮೇತ ಅಧಿಕಾರಿಗಳಿಗೆ ದೂರು ನೀಡಿದ್ದರೂ ಒತ್ತುವರಿ ತೆರವುಗೊಳಿಸಿಲ್ಲ’ ಎಂದು ಆರೋಪಿಸಿದರು.
ಅನರ್ಹರಿಗೆ ಮಂಜೂರು: ‘ಬಗರ್ ಹುಕುಂ ಸಮಿತಿ ಮೂಲಕ ಸರ್ಕಾರಿ ಜಮೀನುಗಳನ್ನು ಅನರ್ಹರಿಗೆ ಮಂಜೂರು ಮಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ಲಂಚ ಸಂದಾಯವಾಗಿದೆ. ತಾಲ್ಲೂಕು ಕಚೇರಿ, ಕಂದಾಯ ಹಾಗೂ ಭೂದಾಖಲೆ ಇಲಾಖೆ ಅಧಿಕಾರಿಗಳು ಶಾಮೀಲಾಗಿ ಭೂ ಅಕ್ರಮ ಎಸಗಿದ್ದಾರೆ. ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳಕ್ಕೆ ಜಮೀನು ಮೀಸಲಿಡಬೇಕೆಂಬ ನಿಯಮವಿದೆ. ಆದರೆ, ಅಧಿಕಾರಿಗಳು ಈ ನಿಯಮ ಉಲ್ಲಂಘಿಸಿದ್ದಾರೆ’ ಎಂದು ಹೇಳಿದರು.
ದಾಖಲೆಪತ್ರ ನಾಪತ್ತೆ: ‘ಕಸಬಾ ಗ್ರಾಮದ ಸರ್ವೆ ನಂಬರ್ 27ರಲ್ಲಿನ ನಿವೇಶಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಕೋಡಿಕಣ್ಣೂರು ಗ್ರಾಮದಲ್ಲಿನ ಸರ್ಕಾರಿ ಬಾವಿ ಜಾಗವನ್ನು ಕೈಗಾರಿಕಾ ಪ್ರದೇಶವಾಗಿ ಪರಿವರ್ತಿಸಲಾಗಿದೆ. ಮಾಲೂರು ತಾಲ್ಲೂಕಿನ ಊರುಗುರ್ಕಿ ಗ್ರಾಮದ 25 ಎಕರೆ ಗೋಮಾಳ ಜಾಗದ ದಾಖಲೆಪತ್ರಗಳು ನಾಪತ್ತೆಯಾಗಿವೆ’ ಎಂದು ಧರಣಿನಿರತರು ದೂರಿದರು.
‘ಭೂಅಕ್ರಮದ ಸಂಬಂಧ ಉನ್ನತ ತನಿಖೆ ನಡೆಸಬೇಕು. ಭೂಗಳ್ಳರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಒತ್ತುವರಿ ಜಮೀನಿನ ಸರ್ವೆ ಮಾಡಿಸಿ ಜಿಲ್ಲಾಡಳಿತದ ವಶಕ್ಕೆ ತೆಗೆದುಕೊಳ್ಳಬೇಕು. ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವಿಗೆ ಸಹಕರಿಸದ ಅಧಿಕಾರಿಗಳ ವಿರುದ್ಧ ನಗರಾಭಿವೃದ್ಧಿ ಇಲಾಖೆಯು ದೂರು ದಾಖಲಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ. ಅದೇ ರೀತಿ ಜಿಲ್ಲೆಯಲ್ಲೂ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಬೇಕು’ ಎಂದು ಒತ್ತಾಯಿಸಿದರು.
ಸಮಿತಿ ಸದಸ್ಯರಾದ ನರಸಿಂಹಮೂರ್ತಿ, ಎಂ.ರವಿಕುಮಾರ್, ಮಂಜುನಾಥ್, ನಾಗರಾಜ್, ರವಿ, ಹನುಮಪ್ಪ, ಲಕ್ಷ್ಮಮ್ಮ, ಎನ್.ಮುನಿರಾಜು, ವೆಂಕಟಮ್ಮ ಪಾಲ್ಗೊಂಡಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.