ಗುರುವಾರ , ನವೆಂಬರ್ 21, 2019
23 °C

ಗೋಮಾಳ ಒತ್ತುವರಿ: ವರದಿಗೆ ಸೂಚನೆ

Published:
Updated:

ಕೋಲಾರ: ತಾಲ್ಲೂಕಿನ ಹೊಳಲಿ ಗ್ರಾಮದ ಬಳಿಯ ಸರ್ವೆ ನಂಬರ್‌ 103ರಲ್ಲಿನ ಗೋಮಾಳದ ಜಮೀನಿನ ಒತ್ತುವರಿ ಸಂಬಂಧ ಪರಿಶೀಲನೆ ನಡೆಸಿ ವರದಿ ನೀಡುವಂತೆ ಉಪ ವಿಭಾಗಾಧಿಕಾರಿ ಸೋಮಶೇಖರ್ ತಹಶೀಲ್ದಾರ್‌ಗೆ ಆದೇಶಿಸಿದ್ದಾರೆ.

ಸರ್ವೆ ನಂಬರ್‌ 103ರಲ್ಲಿ 100ಕ್ಕೂ ಹೆಚ್ಚು ಎಕರೆ ಜಾಗವಿದೆ. ಇದರಲ್ಲಿ 16 ಎಕರೆ ಜಮೀನನ್ನು ಜಿಲ್ಲಾಡಳಿತವು ಗುತ್ತಿಗೆ ಆಧಾರದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ)  ಮಂಜೂರು ಮಾಡಿದೆ. ಈ ಜಾಗ ಹೊರತುಪಡಿಸಿ ಉಳಿದ ಜಮೀನನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ.

ಒತ್ತುವರಿ ಜಮೀನು ಕಂದಾಯ ಇಲಾಖೆಯಿಂದ ಮಂಜೂರಾಗಿರುವಂತೆ ಒತ್ತುವರಿದಾರರು ನಕಲಿ ದಾಖಲೆಪತ್ರ ಸೃಷ್ಟಿಸಿಕೊಂಡಿದ್ದಾರೆ. ಈ ಸಂಬಂಧ ಸಾರ್ವಜನಿಕರಿಂದ ಉಪ ವಿಭಾಗಾಧಿಕಾರಿಗೆ ದೂರು ಸಲ್ಲಿಕೆಯಾಗಿತ್ತು. ಈ ದೂರು ಆಧರಿಸಿ ಉಪ ವಿಭಾಗಾಧಿಕಾರಿಯು ಜಮೀನಿನ ಪರಿಶೀಲನೆಗೆ ಆದೇಶ ಹೊರಡಿಸಿದ್ದಾರೆ.

ಗೋಮಾಳದ ಜಮೀನಿನ ಒಟ್ಟು ವಿಸ್ತೀರ್ಣವೆಷ್ಟು, ಅದರಲ್ಲಿ ಎಷ್ಟು ಜಮೀನು ಕೆಎಸ್‌ಸಿಎಗೆ ಹಸ್ತಾಂತರವಾಗಿದೆ, ಉಳಿದ ಜಮೀನು ಎಷ್ಟು ಎಂಬ ಬಗ್ಗೆ ತನಿಖೆ ನಡೆಸಬೇಕು. ದರಖಾಸ್ತು ಮೂಲಕ ಮಂಜೂರಾಗಿರುವ ಜಮೀನುಗಳಲ್ಲಿ ಎಷ್ಟು ಹೊಸ ಸರ್ವೆ ನಂಬರ್‌ಗಳಾಗಿವೆ ಎಂಬುದನ್ನು ಪರಿಶೀಲಿಸಿ ಗಣಕಿಕೃತ ಪಹಣಿಯ ದಾಖಲೆಪತ್ರಗಳೊಂದಿಗೆ ವರದಿ ನೀಡಿ ಉಪ ವಿಭಾಗಾಧಿಕಾರಿ ಆದೇಶದಲ್ಲಿ ಸೂಚಿಸಿದ್ದಾರೆ.

ಒಂದೇ ಜಾಗದಲ್ಲಿ ಒಬ್ಬೊಬ್ಬರಿಗೆ ಎಷ್ಟು ಜಮೀನು ಮಂಜೂರಾಗಿದೆ ಎಂಬ ಬಗ್ಗೆ ಮತ್ತು ಮಂಜೂರಾತಿ ಸಂಬಂಧ ಸಂಪೂರ್ಣ ಮಾಹಿತಿ ನೀಡಬೇಕು. ದರಖಾಸ್ತು ಮೂಲಕ ಮಂಜೂರಾದ ಜಮೀನನ್ನು ಮಾರಾಟ ಮಾಡುವಾಗ ಸರ್ಕಾರದ ನಿಯಮ ಪಾಲಿಸಿದ್ದಾರೆಯೆ, ಜಮೀನು ಅತಿಕ್ರಮಿಸಿಕೊಂಡು ಸುಳ್ಳು ದಾಖಲೆಪತ್ರ ಸೃಷ್ಟಿಸಿ ಅಕ್ರಮ ಖಾತೆ ಮಾಡಿಕೊಂಡಿರುವ ಬಗ್ಗೆ ಸಮಗ್ರ ವರದಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಅಕ್ರಮವಾಗಿ ಖಾತೆ ಮಾಡಿಕೊಂಡಿರುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿ ವರದಿ ನೀಡಿ ಎಂದು ಆದೇಶದಲ್ಲಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)