ಭಾನುವಾರ, ಫೆಬ್ರವರಿ 23, 2020
19 °C
ನಕಲಿ ದಾಖಲೆಪತ್ರ ಸೃಷ್ಟಿಸಿ ಕೃತ್ಯ: ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು

ಜಮೀನು ಕಬಳಿಕೆ ಯತ್ನ: ದೂರು ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ನಕಲಿ ದಾಖಲೆಪತ್ರ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ಕಬಳಿಸಲು ಯತ್ನಿಸಿದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ರಿಯಲ್ ಎಸ್ಟೇಟ್‌ ಉದ್ಯಮಿ ಸೇರಿದಂತೆ 4 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಜಮೀನು ಖರೀದಿಸಿರುವುದಾಗಿ ನಕಲಿ ದಾಖಲೆಪತ್ರ ಸೃಷ್ಟಿಸಿದ ತಾಲ್ಲೂಕಿನ ರಾಮಸಂದ್ರ ಗ್ರಾಮದ ವಿಜಯ್‌ಕುಮಾರ್, ಕುಂಬಾರಹಳ್ಳಿಯ ಸುರೇಶ್, ಜಯರಾಮ್‌ ಹಾಗೂ ಬೆಂಗಳೂರಿನ ಮೊಹಮ್ಮದ್ ಅಮ್ಜದ್‌ ಅವರ ವಿರುದ್ಧ ನಗರದ ಹಳೇ ಬಡಾವಣೆ ನಿವಾಸಿ ಬಿ.ಕೆ.ಎಸ್‌.ಗೋಕುಲ್‌ ಎಂಬುವರು ದೂರು ದಾಖಲಿಸಿದ್ದಾರೆ.

ತಾಲ್ಲೂಕಿನ ಕುಂಬಾರಹಳ್ಳಿಯ ಸರ್ವೆ ನಂಬರ್ 32/1, 32/2 ಹಾಗೂ 32/3ರಲ್ಲಿರುವ 5 ಎಕರೆ 15 ಗುಂಟೆ ಜಮೀನನ್ನು ಗೋಕುಲ್‌ರ ತಾಯಿ ಶೋಭಾ ಮೂರ್ತಿ ಮತ್ತು ದೊಡ್ಡಮ್ಮ ಸುಜಾತಾ ಅವರು 1994ರಲ್ಲಿ ಖರೀದಿ ಮಾಡಿ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಾದ ವಿಜಯ್‌ಕುಮಾರ್, ಸುರೇಶ್ ಮತ್ತು ಜಯರಾಮ್‌ ಆ ಜಮೀನನ್ನು ಮೊಹಮ್ಮದ್ ಅಮ್ಜದ್‌ಗೆ ಮಾರಾಟ ಮಾಡಿರುವಂತೆ ನಕಲಿ ಕ್ರಯಪತ್ರ ಸೃಷ್ಟಿಸಿ ನಗರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಫೆ.6ರಂದು ನೋಂದಣಿ ಮಾಡಿಸಲು ಯತ್ನಿಸಿದ್ದರು. ಈ ವಿಷಯ ತಿಳಿದ ಗೋಕುಲ್‌ ನೋಂದಣಾಧಿಕಾರಿ ಕಚೇರಿ ಬಳಿ ಹೋಗಿ ವಿಜಯ್‌ಕುಮಾರ್‌ಗೆ ಪ್ರಶ್ನೆ ಮಾಡಿದ್ದರು. ಆಗ ಆರೋಪಿಗಳು ಗೋಕುಲ್‌ ಮೇಲೆ ಹಲ್ಲೆ ಮಾಡಲೆತ್ನಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮೊಹಮ್ಮದ್‌ ಅಮ್ಜದ್‌ ₹2 ಕೋಟಿಗೆ ಜಮೀನು ಖರೀದಿಸಿರುವಂತೆ ನಕಲಿ ಕ್ರಯಪತ್ರ ಸೃಷ್ಟಿಸಿ ಬ್ಯಾಂಕ್‌ನಲ್ಲಿ ನೋಂದಣಿ ಶುಲ್ಕ ಪಾವತಿಸಿದ್ದರು. ಅಲ್ಲದೇ, ಸುಜಾತಾ ಮತ್ತು ಶೋಭಾ ಮೂರ್ತಿ ಹೆಸರಿನಲ್ಲಿ ನಕಲಿ ಆಧಾರ್‌ ಕಾರ್ಡ್‌ ಸಹ ಸೃಷ್ಟಿಸಿದ್ದರು. ಆಧಾರ್‌ ಕಾರ್ಡ್‌ಗಳಲ್ಲಿ ಬೇರೆ ಮಹಿಳೆಯರ ಫೋಟೊಗಳಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದಲ್ಲಾಳಿ ನೆರವು: ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿಯು ಆರೋಪಿಗಳು ನೀಡಿದ ಜಮೀನಿನ ನಕಲಿ ದಾಖಲೆಪತ್ರ ಹಾಗೂ ಮಾರಾಟದ ಕ್ರಯಪತ್ರದ ಕಡತವನ್ನು ಸರಿಯಾಗಿ ಪರಿಶೀಲಿಸದೆ ಮೇಲಾಧಿಕಾರಿ ಸಹಿಗೆ ರವಾನಿಸಿದ್ದರು. ಮೇಲಾಧಿಕಾರಿ ಜಮೀನಿನ ಅಸಲಿ ದಾಖಲೆಪತ್ರ ಸಲ್ಲಿಸುವಂತೆ ಕೇಳಿದಾಗ ಆರೋಪಿಗಳು ದಾಖಲೆಪತ್ರ ಮನೆಯಲ್ಲಿದ್ದು, ತಂದು ಕೊಡುತ್ತೇವೆ ಸುಳ್ಳು ಹೇಳಿದ್ದರು. ಅಲ್ಲದೇ, ದಲ್ಲಾಳಿ ಮೂಲಕ ಕಡತಕ್ಕೆ ಮೇಲಾಧಿಕಾರಿಯ ಸಹಿ ಮಾಡಿಸಲು ಪ್ರಯತ್ನ ಪಟ್ಟಿದ್ದರು. ಮೇಲಾಧಿಕಾರಿ ಮಂಜುಳಮ್ಮ ಕಡತಕ್ಕೆ ಸಹಿ ಹಾಕದೆ ಬಾಕಿ ಇರಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು