ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿಗೆ ಜಮೀನು ಮಂಜೂರು ಭರವಸೆ

ಸರ್ಕಾರದ ಮೇಲೆ ಒತ್ತಡ ತರುತ್ತೇನೆ: ಸಂಸದ ಮುನಿಸ್ವಾಮಿ ಹೇಳಿಕೆ
Last Updated 25 ಸೆಪ್ಟೆಂಬರ್ 2019, 15:52 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ನಗರದ ಎಪಿಎಂಸಿ ಮಾರುಕಟ್ಟೆ ವಿಸ್ತರಣೆಗೆ ಜಮೀನು ಮಂಜೂರು ಮಾಡಿಸುತ್ತೇನೆ’ ಎಂದು ಸಂಸದ ಎಸ್.ಮುನಿಸ್ವಾಮಿ ಭರವಸೆ ನೀಡಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಟೊಮೆಟೊ ವಾಣಿಜ್ಯ ಬೆಳೆಯಾಗಿದ್ದು, ಈ ಹಿಂದೆ ಇದ್ದ ಬೆಳೆ ವಿಸ್ತೀರ್ಣಕ್ಕೆ ತಕ್ಕಂತೆ ಮಾರುಕಟ್ಟೆ ನಿರ್ಮಾಣವಾಗಿದೆ. ಆದರೆ, ಈಗ ಬೆಳೆಗಾರರ ಸಂಖ್ಯೆ ಹಾಗೂ ಬೆಳೆ ವಿಸ್ತೀರ್ಣ ಹೆಚ್ಚಿರುವುದರಿಂದ ನಿರೀಕ್ಷೆಗೂ ಮೀರಿ ಟೊಮೆಟೊ ಆವಕವಾಗುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ಜಾಗದ ಸಮಸ್ಯೆ ಎದುರಾಗಿದೆ’ ಎಂದು ಹೇಳಿದರು.

‘ಜಿಲ್ಲೆಯ ಮಾರುಕಟ್ಟೆಯು ಟೊಮೆಟೊ ವಹಿವಾಟಿನಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಶಾಸಕ ಕೆ.ಶ್ರೀನಿವಾಸಗೌಡರು ಮಾರುಕಟ್ಟೆ ವಿಸ್ತರಣೆಗೆ ಸರ್ಕಾರ ಹೆಚ್ಚುವರಿ ಭೂಮಿ ಮಂಜೂರು ಮಾಡಬೇಕೆಂದು ಒತ್ತಾಯಿಸಿದ್ದಾರೆ. ರೈತರ ಸಂಸ್ಥೆಯಾಗಿರುವ ಎಪಿಎಂಸಿ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುತ್ತೇವೆ’ ಎಂದರು.

‘ನಾನು ರೈತ ಕುಟುಂಬದವನಾಗಿದ್ದು, ಕೋಲಾರದ ಮಾರುಕಟ್ಟೆಗೆ ಟೊಮೆಟೊ ತಂದು ಮಾರಿದ್ದೇನೆ. ರೈತರ ಸಂಸ್ಥೆ ಮೇಲೆ ನನಗೆ ಪ್ರೀತಿ ಇರುವುದರಿಂದ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ಎಪಿಎಂಸಿಯಲ್ಲಿನ ಮೂಲಸೌಕರ್ಯ ಪರಿಹರಿಸುತ್ತೇವೆ. ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನ ಯಶಸ್ವಿಗೆ ಎಪಿಎಂಸಿ ಆಡಳಿತ ಮಂಡಳಿ ಕೈಜೋಡಿಸಬೇಕು’ ಎಂದು ಕೋರಿದರು.

‘ತಾಲ್ಲೂಕಿನ ಚೆಲುವನಹಳ್ಳಿಯ ಸರ್ವೆ ನಂ 74ರಲ್ಲಿ ಅರಣ್ಯ ಇಲಾಖೆಗೆ ಸೇರಿದ 30.04 ಎಕರೆ ಜಮೀನನ್ನು ಎಪಿಎಂಸಿಗೆ ಮಂಜೂರು ಮಾಡುವಂತೆ ಕೋರಲಾಗಿದೆ. ಈ ಸಂಬಂಧ ಕಂದಾಯ ಸಚಿವ ಆರ್‌.ಅಶೋಕ್‌ ಅವರಿಗೆ ಮನವಿ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಮಾರುಕಟ್ಟೆ ವಿಸ್ತರಣೆಗೆ ಜಮೀನು ಮಂಜೂರು ಮಾಡಿಸುತ್ತೇನೆ’ ಎಂದು ಹೇಳಿದರು.

ಪ್ರಸ್ತಾವ ತಿರಸ್ಕೃತ: ‘ಚೆಲುವನಹಳ್ಳಿಯಲ್ಲಿನ ಜಮೀನು ಮಂಜೂರು ಮಾಡುವಂತೆ ಹಿಂದೆಯೇ ಪ್ರಸ್ತಾವ ಸಲ್ಲಿಸಲಾಗಿತ್ತು. ಆ ಜಮೀನು ಕೆರೆ ಪ್ರದೇಶವಾಗಿರುವುದರಿಂದ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಪ್ರಸ್ತಾವ ತಿರಸ್ಕರಿಸಲಾಗಿದೆ. ಆದ ಕಾರಣ ಸಂಸದರು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಮೇಲೆ ಒತ್ತಡ ತಂದು ಜಮೀನು ಮಂಜೂರು ಮಾಡಿಸಬೇಕು’ ಎಂದು ಎಪಿಎಂಸಿ ಅಧ್ಯಕ್ಷ ಡಿ.ಎಲ್.ನಾಗರಾಜು ಮನವಿ ಮಾಡಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಬಿಡುಗಡೆಯಾದ ಅನುದಾನದ ಮಾಹಿತಿ ನೀಡಲು ಅಧಿಕಾರಿಗಳು ವಿಫಲರಾಗಿದ್ದಾರೆ. ಯಾವ ಕಾಮಗಾರಿಗೆ ಎಷ್ಟು ಹಣ ಖರ್ಚಾಗಿದೆ, ಎಷ್ಟು ಹಣ ಉಳಿದಿದೆ ಎಂಬ ಮಾಹಿತಿ ಪಡೆಯಲು 2 ತಿಂಗಳಿಂದ ಪ್ರಯತ್ನಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಭ್ರಷ್ಟಾಚಾರ ನಡೆದಿರುವುದರಿಂದಲೇ ಅಧಿಕಾರಿಗಳು ಮಾಹಿತಿ ಕೊಡುತ್ತಿಲ್ಲ’ ಎಂದು ಆರೋಪಿಸಿದರು.

ಎಪಿಎಂಸಿ ಉಪಾಧ್ಯಕ್ಷ ಕೆ.ರವಿಶಂಕರ್, ಸದಸ್ಯರಾದ ಬಿ.ವೆಂಕಟೇಶ್, ಭಾಗ್ಯಮ್ಮ, ಎಸ್.ರೇಖಾ, ನಾರಾಯಣಸ್ವಾಮಿ, ಅಪ್ಪಯ್ಯಪ್ಪ, ಸಿ.ಎನ್.ರವಿಕುಮಾರ್, ಸಿ.ಎಂ.ಮಂಜುನಾಥ್, ಎಲ್.ವೆಂಕಟೇಶಪ್ಪ, ದೇವರಾಜು, ಆರ್.ಚಂದ್ರೇಗೌಡ, ಮಂಜುನಾಥ್, ಕಾರ್ಯದರ್ಶಿ ಟಿ.ಎಸ್.ರವಿಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT