ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷದ ಬಳಿಕ ಹಕ್ಕುಪತ್ರ

10 ನಿವಾಸಿಗಳಿಗೆ ವಿತರಣೆ: ತಹಶೀಲ್ದಾರ್‌ ನಾಗರಾಜ್‌
Last Updated 24 ಸೆಪ್ಟೆಂಬರ್ 2022, 5:16 IST
ಅಕ್ಷರ ಗಾತ್ರ

ವೇಮಗಲ್‌ (ಕೋಲಾರ): ಹೋಬಳಿಯ ಕಡಗಟ್ಟೂರು ಗ್ರಾಮದ 10 ನಿವಾಸಿಗಳಿಗೆ ಸುಮಾರು 25 ವರ್ಷಗಳ ಬಳಿಕ 94 ಸಿ ಹಕ್ಕು ಪತ್ರ ಲಭಿಸಿದೆ.

ಕೋಲಾರ ತಾಲ್ಲೂಕಿನ ತಹಶೀಲ್ದಾರ್‌ ವಿ.ನಾಗರಾಜ್‌ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಹಕ್ಕು ಪತ್ರ ವಿತರಿಸಿದರು.

‘ಹಕ್ಕು ಪತ್ರಗಳನ್ನು ಜೋಪಾನವಾಗಿ ಇಟ್ಟುಕೊಂಡು, ಮನೆ ಮಾರಾಟ ಮಾಡದೆ ಜೀವನ ನಡೆಸಬೇಕು’ ಎಂದು ಅವರು ಫಲಾನುಭವಿಗಳಿಗೆ ಕಿವಿಮಾತು ಹೇಳಿದರು.

‘ಫಲಾನುಭವಿಗಳು 94 ಸಿಎಲ್‌ನಲ್ಲಿ ಅರ್ಜಿ ಹಾಕಿಕೊಂಡಿದ್ದರು. ಸುಮಾರು 30 ವರ್ಷಗಳಿಂದ ಅನುಭೋಗದಲ್ಲಿ ಇದ್ದುಕೊಂಡು, 10 ವರ್ಷಗಳ ಈಚೆಗೆ ಮನೆ ಕಟ್ಟಿಕೊಂಡಿದ್ದಾರೆ. ಫಲಾನುಭವಿಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ವಾರದ ಹಿಂದೆ ನನ್ನ ಗಮನಕ್ಕೆ ತಂದಿದ್ದರು. ಅದಕ್ಕೆ ಸಂಬಂಧಪಟ್ಟಂತೆ ಕಿಮ್ಮತ್ ಹಣ ಪಾವಸಿದ್ದಾರೆ. ನನ್ನ ಗಮನಕ್ಕೆ ತಂದ ಕೂಡಲೇ ಪರಿಶೀಲನೆ ನಡೆಸಿ ಕಾನೂನು ರೀತಿಯಲ್ಲಿ ಹಕ್ಕುಪತ್ರ ನೀಡಲಾಗಿದೆ’
ಎಂದರು.

‘ಗ್ರಾಮದ ಇನ್ನೂ ಹತ್ತು ಕುಟುಂಬಗಳು ಅರ್ಜಿ ಹಾಕಿಕೊಂಡಿರುವ ಕುರಿತು ಪಂಚಾಯತಿ ಸದಸ್ಯರು ಗಮನಕ್ಕೆ ತಂದಿದ್ದಾರೆ. ಅದನ್ನು ಪರಿಶೀಲನೆ ನಡೆಸಿ ವರದಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

ಗ್ರಾಮ ಪಂಚಾಯತಿ ಸದಸ್ಯ ದೇವರಾಜ್, ‘ಗ್ರಾಮಸ್ಥರು ಹಲವಾರು ವರ್ಷಗಳಿಂದ ಅರ್ಜಿ ಹಾಕಿಕೊಂಡಿದ್ದರೂ ಪ್ರಯೋಜನವಾಗಿರಲಿಲ್ಲ. ಮನೆ ಕಟ್ಟಿಕೊಂಡಿದ್ದ ಫಲಾನುಭವಿಗಳು ಆತಂಕಕ್ಕೆ ಒಳಗಾಗಿದ್ದರು. ಈ ವಿಚಾರವನ್ನು ತಹಶೀಲ್ದಾರ್‌ ಗಮನಕ್ಕೆ ವಾರದ ಹಿಂದೆ ತರಲಾಗಿತ್ತು’ ಎಂದರು.

ಮನೆ ಬಾಗಿಲಿಗೆ ಬಂದು ಹಕ್ಕುಪತ್ರ ವಿತರಿಸಿದ ತಹಶೀಲ್ದಾರ್‌ಗೆ ಫಲಾನುಭವಿಗಳು ಧನ್ಯವಾದ ತಿಳಿಸಿದರು. ಗೌರಮ್ಮ, ಎಸ್‌.ಗುರುಮೂರ್ತಿ, ಹನುಮಕ್ಕ, ವೆಂಕಟೇಶ್‌, ಜಯರಾಂ, ಶಿವಪ್ಪ, ಆಂಜಿನಪ್ಪ, ಮೂಗತಿರುಮಳಪ್ಪ, ಆಂಜಿನಪ್ಪ, ಮುನಿದ್ಯಾವಪ್ಪ ಅವರಿಗೆ ಹಕ್ಕುಪತ್ರ ಲಭಿಸಿತು.

ವೇಮಗಲ್ ಹೋಬಳಿ ರಾಜಸ್ವ ನಿರೀಕ್ಷಕ ಬಿ.ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯರು, ಆಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT