ಬುಧವಾರ, ಆಗಸ್ಟ್ 21, 2019
22 °C
ಕಂದಾಯ ಇಲಾಖೆ ದೃಢೀಕರಣ ಪಡೆಯಿರಿ: ಜಿಲ್ಲಾಧಿಕಾರಿ ಮಂಜುನಾಥ್‌ ಸೂಚನೆ

ಪರಿಶಿಷ್ಟ ಭೂರಹಿತ ಕೃಷಿಕರಿಗೆ ಜಮೀನು

Published:
Updated:
Prajavani

ಕೋಲಾರ: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭೂರಹಿತ ಕೃಷಿಕರಿಗೆ ಜಮೀನು ಹಂಚಲು ಹಾಗೂ ಭೂಮಿ ಮಾರಲು ಮುಂದಾಗಿರುವ ಮಾಲೀಕರ ಜಮೀನಿನ ದಾಖಲೆಪತ್ರಗಳಿಗೆ ಕಂದಾಯ ಇಲಾಖೆಯಿಂದ ದೃಢೀಕರಣ ಪಡೆದುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು.

ಇಲ್ಲಿ ಗುರುವಾರ ನಡೆದ ಭೂಒಡೆತನ ಯೋಜನೆಯ ಜಿಲ್ಲಾ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ, ‘ಅರ್ಜಿ ಸಲ್ಲಿಸಿರುವ ಭೂರಹಿತ ಕೃಷಿಕರು ಹಾಗೂ ಭೂಮಾಲೀಕರು ಮತ್ತು ಮಾಲೀಕರಿಗೆ ಭೂಮಿ ಹೇಗೆ ಮಂಜೂರಾಗಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಬೇಕು’ ಎಂದರು.

‘ಯಾವುದೇ ಇಲಾಖೆ ಅಥವಾ ನಿಗಮದಿಂದ ಜಮೀನು ಹಂಚಿಕೆಗೆ ಅರ್ಜಿ ಆಹ್ವಾನಿಸಿದರೆ ಲಕ್ಷಗಟ್ಟಲೇ ಅರ್ಜಿ ಬರುತ್ತವೆ. ಆದರೆ, ಭೂಒಡೆತನ ಯೋಜನೆಯಡಿ ಜಮೀನು ಕೋರಿ 42 ಅರ್ಜಿ ಮಾತ್ರ ಬಂದಿವೆ. ಈ ಯೋಜನೆ ಬಗ್ಗೆ ಹೆಚ್ಚಿನ ಪ್ರಚಾರ ನಡೆಸಿಲ್ಲವೇ?’ ಎಂದು ಅಧಿಕಾರಿಗಳನ್ನು ಪಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ವಿಜಯ್‌ಕುಮಾರ್, ‘ಜಿಲ್ಲೆಯಲ್ಲಿ ಒಟ್ಟು 42 ಅರ್ಜಿ ಸಲ್ಲಿಕೆಯಾಗಿವೆ. 38 ಮಂದಿ ಮಾಲೀಕರು ಜಮೀನು ಮಾರಾಟಕ್ಕೆ ಮುಂದಾಗಿದ್ದಾರೆ’ ಎಂದು ವಿವರಿಸಿದರು.

‘38 ಮಂದಿಯಿಂದ 100 ಎಕರೆಗೂ ಹೆಚ್ಚು ಭೂಮಿ ಲಭ್ಯವಿದೆ. ಸರ್ಕಾರ ಖುಷ್ಕಿ ಜಮೀನಿಗೆ ಎಕರೆಗೆ ₹ 15 ಲಕ್ಷ ದರ ನಿಗದಿಪಡಿಸಿದೆ. ಭೂಮಿ ಖರೀದಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು. ಗ್ರಾಮ ಸಭೆಗಳಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಸುತ್ತೇವೆ’ ಎಂದು ಮಾಹಿತಿ ನೀಡಿದರು.

ಪರಿಶೀಲನೆ ನಡೆಸಬೇಕು: ‘ಉಚಿತವಾಗಿ ಜಮೀನು ನೀಡುತ್ತೇವೆ ಎಂದರೆ ಸಾಕಷ್ಟು ಅರ್ಜಿ ಬರುತ್ತವೆ. ಈ ಹಿಂದೆ ಯಾವುದಾದರೂ ಯೋಜನೆಯಿಂದ ಜಮೀನು ಮಂಜೂರಾಗಿದ್ದರೆ ಅಂತಹವರಿಗೆ ಭೂಒಡೆತನ ಯೋಜನೆಯಡಿ ಜಮೀನು ಕೊಡಲು ಅವಕಾಶವಿಲ್ಲ. ಬೇರೆ ಯೋಜನೆಗಳಲ್ಲಿ ಭೂಮಿ ಪಡೆದಿರುವ ಫಲಾನುಭವಿಗಳ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದು ಉಪ ವಿಭಾಗಾಧಿಕಾರಿ ಸೋಮಶೇಖರ್ ಸಲಹೆ ನೀಡಿದರು.

‘ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿರುವವರಿಗೆ ಯಾವ ರೀತಿ ಭೂಮಿ ಮಂಜೂರು ಮಾಡಬೇಕೆಂದು ಗೊಂದಲದಲ್ಲಿದ್ದೇವೆ. ಭೂಒಡೆತನ ಯೋಜನೆ ಬಗ್ಗೆ ವ್ಯಾಪಕ ಪ್ರಚಾರ ನಡೆಸಿದರೆ ಹೆಚ್ಚಿನ ಅರ್ಜಿ ಬರುತ್ತವೆ. ಮಾಲೀಕರು ಮಾರಾಟ ಮಾಡುವ ಭೂಮಿಗೆ ಸಂಬಂಧಪಟ್ಟ ದಾಖಲೆಪತ್ರಗಳನ್ನು ಪರಿಶೀಲಿಸಬೇಕು’ ಎಂದು ತಿಳಿಸಿದರು.

ಮಾಹಿತಿ ನೀಡಬೇಕು: ‘ಈಗಾಗಲೇ ಜಮೀನುರಹಿತ ಫಲಾನುಭವಿಗಳ ಪಟ್ಟಿ ಸಿದ್ಧಗೊಂಡಿದ್ದು, ಅದರಲ್ಲಿ ಈ ಅರ್ಜಿದಾರರ ಹೆಸರು ಇದೆಯೋ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕು. ಯಾವ ಆಧಾರದ ಮೇಲೆ ಫಲಾನುಭವಿಗಳ ಆಯ್ಕೆ ನಡೆಯುತ್ತದೆ ಎಂಬ ಬಗ್ಗೆ ಮಾಹಿತಿ ನೀಡಬೇಕು’ ಎಂದು ಜಿಲ್ಲಾಧಿಕಾರಿಯು ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಿಗೆ ಸೂಚಿಸಿದರು.

‘ಮಾಲೀಕ ತನ್ನ ಹೆಸರಿನಲ್ಲಿರುವ ಜಮೀನನ್ನು ಇನ್ನೊಬ್ಬರ ಹೆಸರಿಗೆ ಖಾತೆ ಅಥವಾ ವರ್ಗಾವಣೆ ಮಾಡಿರುತ್ತಾರೆ. ಒಬ್ಬನಿಂದ ಜಮೀನು ಖರೀದಿಸಿದ್ದರೆ ಮುಂದೆ ಮೂಲ ಮಾಲೀಕರು ತಕರಾರು ಮಾಡುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆ ಎದುರಾಗದಂತೆ ಮಾಡಲು ಕಂದಾಯ ಇಲಾಖೆಯಿಂದ ದೃಢೀಕರಣ ಪಡೆದುಕೊಳ್ಳುವುದು ಉತ್ತಮ’ ಎಂದರು.

‘ಪರಿಶಿಷ್ಟ ಸಮುದಾಯದವರ ಜಮೀನು ಖರೀದಿಗೆ ಅವಕಾಶವಿಲ್ಲ. ಖರೀದಿ ಮಾಡುವ ಜಮೀನು ಸಹ ಫಲಾನುಭವಿ ವಾಸ ಸ್ಥಳದಿಂದ 10 ಕಿ.ಮೀ ವ್ಯಾಪ್ತಿಯೊಳಗಿರಬೇಕು. ಜಮೀನಿನ ಸುತ್ತಮುತ್ತ ಕೊಳವೆ ಬಾವಿ ಕೊರೆಸಿದರೆ ನೀರಿನ ಲಭ್ಯತೆ ಮತ್ತು ಭೂಮಿಯ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.

Post Comments (+)