ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡು ಭಾಷೆಗೆ ಜೀವ ತುಂಬಿದ ಲಂಕೇಶ್‌: ರಮೇಶ್‌ ಕುಮಾರ್‌ ಬಣ್ಣನೆ

ಲಂಕೇಶ್‌ ಸಾಹಿತ್ಯ ಸಪ್ತಾಹದಲ್ಲಿ ಶಾಸಕ ರಮೇಶ್‌ಕುಮಾರ್‌ ಬಣ್ಣನೆ
Last Updated 22 ಮಾರ್ಚ್ 2021, 14:28 IST
ಅಕ್ಷರ ಗಾತ್ರ

ಕೋಲಾರ: ‘ಮಡಿವಂತಿಕೆಯಿಂದ ದೂರ ಹೋಗಿ ಆಡು ಭಾಷೆಗೆ ಜೀವ ತುಂಬಿದ ಸಾಹಿತಿ ಲಂಕೇಶ್‌ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ತಂದರು. ಲಂಕೇಶ್‌ ಗ್ರಾಮೀಣ ಜನರ ಭರವಸೆಗಳಿಗೆ ಧ್ವನಿಯಾಗಿ ಅವರ ಸ್ವಾಭಿಮಾನ ಎತ್ತಿ ಹಿಡಿಯುವಲ್ಲಿ ಶ್ರಮಿಸಿದ್ದಾರೆ’ ಎಂದು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಬಣ್ಣಿಸಿದರು.

ಆದಿಮ ಸಾಂಸ್ಕೃತಿಕ ಕೇಂದ್ರ ಹಾಗೂ ಸಂಸ ರಂಗ ತಂಡದ ಸಹಯೋಗದಲ್ಲಿ ಇಲ್ಲಿ ಸೋಮವಾರ ಆರಂಭವಾದ ಲಂಕೇಶ್ ಸಾಹಿತ್ಯ ಸಪ್ತಾಹದಲ್ಲಿ ಮಾತನಾಡಿ, ‘ಲಂಕೇಶ್ ಜಾಹೀರಾತು ಇಲ್ಲದೆ ಜನರಿಗೆ ಭರವಸೆಯ ಪತ್ರಿಕೆ ಹೊರತಂದರು. ಪತ್ರಿಕೆ ಜನರ ಭಾಷೆಯಲ್ಲಿ ಬಂದಿದ್ದರಿಂದ ಓದುಗರ ಪತ್ರಿಕೆಯಾಯಿತು’ ಎಂದರು.

‘ರಾಜಕಾರಣವು ಅನುಕೂಲ ಸಿದ್ಧಾಂತ. ಇಲ್ಲಿ ಸಾಹಿತಿ ಅಥವಾ ಹೋರಾಟಗಾರನಂತೆ ನಿಷ್ಠುರವಾದಿಯಾಗಿ ಬದುಕಲು ಸಾಧ್ಯವಿಲ್ಲ. ಪಕ್ಷ, ಸಿದ್ಧಾಂತಗಳಿಗೆ ಹೆದರಿ ಬದುಕಬೇಕು. ರಾಜಕಾರಣದಲ್ಲಿರುವ ಬಹುತೇಕರು ಹೊಂದಿಕೊಳ್ಳುವ ಮನಸ್ಥಿತಿಯ ಮಂದಿ. ಹೋರಾಟಗಾರರಂತೆ ಮನದಾಳದಿಂದ ಮಾತನಾಡಲು ಆಗುವುದಿಲ್ಲ. ಹೀಗೂ ಸರಿ ಆಗೂ ಸರಿ ಎಂಬಂತೆ ಎಲ್ಲರಿಗೂ ಹೊಂದಿಕೊಂಡು ಬದುಕಬೇಕು’ ಎಂದು ನುಡಿದರು.

‘ಸಮಾಜದಲ್ಲಿ ಯಾವ ವ್ಯತ್ಯಾಸವಿಲ್ಲದೆ ಬದುಕುವ ಶರಣರ ಸಿದ್ಧಾಂತ ಮತ್ತು ಆಚಾರ ವಿಚಾರ ತತ್ವಗಳು ಜಾತಿಯಾಗಿ ಪರಿವರ್ತನೆಯಾಗಿವೆ. ಸ್ಥಾಪಿತ ಹಿತಾಸಕ್ತಿಗಳು ಕೂಡಲ ಸಂಗಮಕ್ಕೆ ದುಡ್ಡು ಕೊಡುತ್ತವೆ. ಜಾತಿಯು ಕ್ಯಾನ್ಸರ್ ರೋಗದಂತೆ ಆಗಿದೆ. ಎಷ್ಟೇ ಚಿಕಿತ್ಸೆ ನೀಡಿದರೂ ಗುಣಪಡಿಸಲಾಗದ ಮಟ್ಟಕ್ಕೆ ಬೆಳೆದಿದೆ. ಇಂತಹ ಅನೇಕ ವಿಚಾರಗಳಿಂದ ಪ್ರಜಾಪ್ರಭುತ್ವ ಸತ್ತು ಹೋಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಅಂಬೇಡ್ಕರ್ ಮಹಾನ್‌ ಮಾನವತವಾದಿ. ಅಂತಹ ಮಹನೀಯ ಜಗತ್ತಿನಲ್ಲೇ ಇಲ್ಲ. ಅವರ ಎಂದಿಗೂ ಜಾತಿವಾದಿಯಾಗಿ ಕಾಣಿಸಿಕೊಂಡಿಲ್ಲ. ಅವರ ಪಂಚೇಂದ್ರಿಯಗಳು ಸದಾ ಚಟುವಟಿಕೆಯಿಂದ ಇದ್ದವು. ಹೀಗಾಗಿ ಅವರು ಎಲ್ಲಾ ವಿಚಾರದಲ್ಲೂ ಸಫಲರಾಗಲು ಸಾಧ್ಯವಾಯಿತು. ಅವರು ಚಲನಶೀಲತೆ ಉಳಿಸಿಕೊಂಡಿದ್ದರಿಂದ ಅವರಲ್ಲಿ ಸ್ಪಷ್ಟತೆ ಮತ್ತು ಬದ್ಧತೆಯಿತ್ತು’ ಎಂದು ಅಭಿಪ್ರಾಯಪಟ್ಟರು.

ಆರ್‌ಎಸ್‌ಎಸ್‌ ಕಾಳಗ: ‘ಇಂದು ದೇಶದಲ್ಲಿ ಆರ್‍ಎಸ್‍ಎಸ್ ಕಾಳಗ ನಡೆಯುತ್ತಿದೆ. ಸಂವಿಧಾನದ ಹೆಸರಿನಲ್ಲಿ ಸಂವಿಧಾನ ವಿರೋಧಿಗಳು ಪ್ರಜಾಪ್ರಭುತ್ವ ವ್ಯವಸ್ಥೆ ಹಾಳು ಮಾಡುತ್ತಿದ್ದು, ಈಗಿನ ವ್ಯವಸ್ಥೆ ಕೇವಲ ತಾಂತ್ರಿಕತೆಯ ಮೇಲೆ ನಡೆಯುತ್ತಿದೆ. ತತ್ವ ಸಿದ್ದಾಂತಕ್ಕೆ ಬೆಲೆ ಇಲ್ಲವಾಗಿದೆ. ವರ್ಗಕ್ಕೆ ಇರುವ ಪ್ರಾಧಾನ್ಯತೆ ಜಾತಿಗೆ ಇರೋಲ್ಲ. ಜಾತಿ ಕಾರಣಕ್ಕೆ ಎದುರಾಗುವ ಅಡೆತಡೆ ತಡೆಯಲು ವರ್ಗ ಬದಲಿಸಿಕೊಳ್ಳಬೇಕಿದೆ’ ಎಂದು ಮಾರ್ಮಿಕವಾಗಿ ನುಡಿದರು.

‘ಶ್ರೀರಾಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವನು ಮತ್ತು ಮರ್ಯಾದೆಗೆ ಅಂಜಿ ಬದುಕಿದವನು. ರಾಜನಾಗಿದ್ದ ಆತ ಪ್ರಜೆಗಳ ಅಭಿಪ್ರಾಯಗಳಿಗೆ ಗೌರವ ಕೊಡುತ್ತಿದ್ದ. ಅಧಿಕಾರ ಧಿಕ್ಕರಿಸಿ ಕಾಡಿಗೆ ಹೋದ ಆತ ಜನರೊಂದಿಗೆ ಗೌರವಯುತವಾಗಿ ನಡೆದುಕೊಂಡ. ಆತನಿಗೆ ಅಧಿಕಾರ ಹಾಗೂ ಕಾಡಿಗೂ ವ್ಯತ್ಯಾಸವೇ ಇರಲಿಲ್ಲ. ಅಂತಹ ರಾಮನ ಹೆಸರಿನಲ್ಲಿ ಇಂದು ಸಂಸತ್ತಿನಲ್ಲಿ ಗದ್ದಲ ಗಲಾಟೆ ನಡೆಯುತ್ತಿವೆ. ದೇಶದಲ್ಲಿ ರಕ್ತಪಾತ ಸಾವು ನೋವು ಸಂಭವಿಸುತ್ತಿವೆ’ ಎಂದು ವಿಷಾದಿಸಿದರು.

‘ನೂರಾರು ಜನ ಬೀದಿಯಲ್ಲಿ ಪ್ರಾಣ ಬಿಟ್ಟರೂ ಅಧಿಕಾರದ ಕುರ್ಚಿ ಬಿಡದವರ ಮಧ್ಯೆ ನಾವಿದ್ದೇವೆ. ಕಾಲಕ್ಕೆ ತಕ್ಕಂತೆ ಆಟ ಆಡುವವರು ಸ್ವಾರ್ಥಕ್ಕಾಗಿ ಯಾರ ಜತೆ ಬೇಕಾದರೂ ಸೇರುವ ಮನಸ್ಸು ಮಾಡುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT