ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೆ ಶ್ರಾವಣ ಶನಿವಾರ: ಭಕ್ತರ ದಂಡು

Last Updated 24 ಆಗಸ್ಟ್ 2019, 15:28 IST
ಅಕ್ಷರ ಗಾತ್ರ

ಕೋಲಾರ: ಶ್ರಾವಣ ಮಾಸದ ಕಡೆ ಶನಿವಾರದ ಅಂಗವಾಗಿ ಇಲ್ಲಿನ ವಿವಿಧ ದೇವಾಲಯಗಳಲ್ಲಿ ಶನಿವಾರ ವಿಶೇಷ ಪೂಜೆ ನಡೆಯಿತು.

ದೇವಸ್ಥಾನಗಳನ್ನು ಹೂವು, ತಳಿರು ತೋರಣದಿಂದ ಸಿಂಗರಿಸಲಾಗಿತ್ತು. ಜತೆಗೆ ದೇವಸ್ಥಾನಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ಬೆಳಿಗ್ಗೆಯಿಂದಲೇ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ದೊಡ್ಡಪೇಟೆಯ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಪೂಜೆ ಆರಂಭವಾಯಿತು. ದೇವಾಲಯ ಸಂಪರ್ಕಿಸುವ ರಸ್ತೆಗಳ ಆರಂಭದಲ್ಲಿ ಬೃಹತ್ ಕಮಾನು ನಿರ್ಮಿಸಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಕೇಸರಿ ಭಗವಧ್ವಜ ಹಾಕಲಾಗಿತ್ತು. ದೇವಾಲಯದ ರಾಜಗೋಪುರ, ಮುಖ್ಯದ್ವಾರದಲ್ಲಿ ಹೂವಿನ ಅಲಂಕಾರ ಮಾಡಲಾಗಿತ್ತು.

ಬಾಲಾಜಿ ಮತ್ತು ವೆಂಕಟರಮಣಸ್ವಾಮಿ ದೇವಾಲಯಕ್ಕೆ ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಭಕ್ತರು ಆಗಮಿಸಿದ್ದರು. ಜನದಟ್ಟಣೆ ಕಾರಣಕ್ಕೆ ದೇವಾಲಯದ ಮುಂಭಾಗದ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಅನ್ನ ದಾಸೋಹ: ತಾಲ್ಲೂಕಿನ ವಿವಿಧ ಗ್ರಾಮಗಳ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೂವಿನ ಅಲಂಕಾರ, ಅಭಿಷೇಕ, ಅನ್ನ ದಾಸೋಹ, ಭಜನೆ, ನಾಟಕ, ಹರಿಕಥೆ ಹಮ್ಮಿಕೊಳ್ಳಲಾಗಿತ್ತು. ಅರಾಭಿಕೊತ್ತನೂರು ಗ್ರಾಮದ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ಪಂಚಮುಖಿ ಆಂಜನೇಯಸ್ವಾಮಿಯ ಅಲಂಕಾರ ಮಾಡಲಾಗಿತ್ತು.

ನಗರದ ಹೊರವಲಯದ ಎಪಿಎಂಸಿ ಬಳಿಯಿರುವ ನರಸಿಂಹಸ್ವಾಮಿ ದೇವಾಲಯದಲ್ಲಿ ಇತ್ತೀಚೆಗೆ ಸುದರ್ಶನಸ್ವಾಮಿ ಹಾಗೂ ಅಭಯ ಆಂಜನೇಯಸ್ವಾಮಿಯ ಪ್ರಾಣ ಪ್ರತಿಷ್ಠಾಪನೆ ನಡೆದಿದ್ದು, ಭಕ್ತರು ದೇವರ ದರ್ಶನಕ್ಕಾಗಿ ಮುಂಜಾನೆಯೇ ದೇವಸ್ಥಾನಕ್ಕೆ ಬಂದರು. ದೇವಾಲಯದ ಪಕ್ಕದಲ್ಲೇ ಪೆಂಡಾಲ್ ಹಾಕಿ ಪ್ರಸಾದ ವಿತರಿಸಲಾಯಿತು.

ಕ್ಷೀರಾಭಿಷೇಕ: ಬಜರಂಗದಳ ಕಾರ್ಯಕರ್ತರು ವೆಂಕಟರಮಣಸ್ವಾಮಿ ದೇವರಿಗೆ 108 ಲೀಟರ್ ಕ್ಷೀರಾಭಿಷೇಕ ಮಾಡಿದರು. ವಿವಿಧ ಭಕ್ತ ಮಂಡಳಿಗಳಿಂದ ವಿಷ್ಣು ಸಹಸ್ರನಾಮ, ಅನ್ನಮಯ್ಯ ಕೀರ್ತನೆ ಗಾಯನ ನಡೆಯಿತು. ಭಕ್ತರಿಗೆ ಸಿಹಿ ಪೊಂಗಲ್, ಪುಳಿಯೊಗರೆ ಪ್ರಸಾದ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT