ಗುರುವಾರ , ಜನವರಿ 23, 2020
28 °C
ಸಭೆಯಲ್ಲಿ ಅಧಿಕಾರಿಗಳಿಗೆ ಸಂಸದ ಮುನಿಸ್ವಾಮಿ ತಾಕೀತು

ರಾಜಕೀಯ ಬಿಟ್ಟು ಕೆಲಸ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಅಧಿಕಾರಿಗಳು ಅಭಿವೃದ್ಧಿ ಕಡೆ ಗಮನ ಹರಿಸಬೇಕು. ಅದು ಬಿಟ್ಟು ರಾಜಕೀಯ ಮಾಡಲು ಹೋದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಸಂಸದ ಎಸ್.ಮುನಿಸ್ವಾಮಿ ಖಡಕ್‌ ಎಚ್ಚರಿಕೆ ನೀಡಿದರು.

ಇಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಯಾರೋ ಜನಪ್ರತಿನಿಧಿಗಳು ಶಿಫಾರಸ್ಸು ಮಾಡಿದ ವ್ಯಕ್ತಿಗಳಿಗೆ ಸೌಕರ್ಯ ಕಲ್ಪಿಸುವುದನ್ನು ಬಿಟ್ಟು ಅರ್ಹ ಫಲಾನುಭವಿಗಳಿಗೆ ಕೊಡಿ’ ಎಂದು ಸೂಚಿಸಿದರು.

‘ಜಿಲ್ಲೆಯ ಸಾಕಷ್ಟು ಗ್ರಾಮಗಳಲ್ಲಿ ಮೂಲಸೌಕರ್ಯ ಸಮಸ್ಯೆಯಿದೆ. ಅಧಿಕಾರಿಗಳು ಜನಪ್ರತಿನಿಧಿಗಳ ಶಿಫಾರಸ್ಸಿನಂತೆ ಕೆಲಸ ಮಾಡುತ್ತಿದ್ದಾರೆ. ನಾನು ಹಳ್ಳಿಗಳಿಗೆ ಹೋದಾಗ ಜನ ಸಮಸ್ಯೆ ಹೇಳುತ್ತಾರೆ. ಅಧಿಕಾರಿಗಳು ರಾಜಕೀಯ ಬಿಟ್ಟು ಜನರ ಕೆಲಸ ಮಾಡಿದರೆ ಸಾಕು’ ಎಂದು ತಾಕೀತು ಮಾಡಿದರು.

‘ವಿವಿಧ ಇಲಾಖೆ ಯೋಜನೆ ಅನುಷ್ಠಾನಗೊಳಿಸಲು ಗುರಿ ನೀಡಲಾಗುತ್ತದೆ. ಆದರೆ, ಗುರಿಗೂ ಮೀರಿ ಅರ್ಜಿ ಬರುತ್ತವೆ. ಅಂತಹ ಸಂದರ್ಭದಲ್ಲಿ ಯಾರಿಗೆ ಕೊಡೋದು ಯಾರಿಗೆ ಬಿಡೋದು, ಲಾಟರಿ ಮೂಲಕ ಫಲಾನುಭವಿ ಆಯ್ಕೆ ಮಾಡುವುದು ಸೂಕ್ತ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ‘ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿ ಡಿಸಿಸಿ ಬ್ಯಾಂಕ್‌ನಿಂದ ಸಾಲ ಕೊಡಿ’ ಎಂದು ಹೇಳಿದರು. ಇದಕ್ಕೆ ಗರಂ ಆದ ಶ್ರೀನಿವಾಸಗೌಡ, ‘ನನಗೆ ಸಹಕಾರಿ ಕ್ಷೇತ್ರದಲ್ಲಿ 45 ವರ್ಷ ಅನುಭವವಿದೆ. ಡಿಸಿಸಿ ಬ್ಯಾಂಕ್‌ ಬಗ್ಗೆ ಟೀಕೆ ಮಾಡಿದರೆ ನಾನು ತಳ ಮಟ್ಟಕ್ಕೆ ಹೋಗಿ ಮಾತನಾಡಬೇಕಾಗುತ್ತದೆ’ ಎಂದು ತಿರುಗೇಟು ನೀಡಿದರು.

ಶಿಕ್ಷಕರ ದರ್ಬಾರ್‌: ‘ಶಿಕ್ಷಕರಿಗೆ ವೇತನ ತಡವಾಗಿ ಬರುತ್ತದೆ. ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಕ್ರಿಯಾಯೋಜನೆ ತಯಾರಿಸಿ ತಡ ಮಾಡುವುದು ಇದಕ್ಕೆ ಕಾರಣ. ಕೆಲ ಶಿಕ್ಷಕರು ಇಲಾಖೆ ಕಚೇರಿಯಲ್ಲಿ ಕುಳಿತು ದರ್ಬಾರ್ ನಡೆಸುತ್ತಿದ್ದಾರೆ. ಡಿಡಿಪಿಐ ಇದಕ್ಕೆಲ್ಲ ಕಡಿವಾಣ ಹಾಕಬೇಕು’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಸೂಚಿಸಿದರು.

‘ತಾಲ್ಲೂಕು ಆಡಳಿತ, ಬೆಸ್ಕಾಂ ಹಾಗೂ ಖಜಾನೆ ಇಲಾಖೆಯಲ್ಲಿ ಸಣ್ಣಪುಟ್ಟ ಕೆಲಸವೂ ಆಗುತ್ತಿಲ್ಲ. ಜನಸಾಮಾನ್ಯರು ಕಚೇರಿಗಳಿಗೆ ಅಲೆದು ಸುಸ್ತಾದರೂ ಕೆಲಸ ಆಗಿರುವುದಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲ್ಲೂಕು ಕಚೇರಿಗಳಿಗೆ ಭೇಟಿ ಕೊಟ್ಟು ವ್ಯವಸ್ಥೆ ಸರಿಪಡಿಸಬೇಕು’ ಎಂದು ಹೇಳಿದರು.

ಶಾಲೆಗಳು ಶಿಥಿಲ: ‘ಕೆಲ ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲಗೊಂಡಿವೆ. ಮತ್ತೆ ಕೆಲ ಕಟ್ಟಡಗಳು ಬೀಳುವ ಸ್ಥಿತಿಯಲ್ಲಿವೆ. ಶಿಕ್ಷಕರು ಭಯದ ವಾತಾವರಣದಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಆದರೆ, ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರೆ’ ಎಂದು ಶಾಸಕ ಕೆ.ವೈ.ನಂಜೇಗೌಡ ದೂರಿದರು.

ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಉಪಾಧ್ಯಕ್ಷೆ ಯಶೋದಾ, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿ.ಪಂ ಸಿಇಒ ಎಚ್.ವಿ.ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಕೆಜಿಫ್ ಪೊಲೀಸ್‌ ವರಿಷ್ಠಾಧಿಕಾರಿ ಮಹಮ್ಮದ್‌ ಸುಜಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು