ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀಕೆ ಬಿಟ್ಟು ಜವಾಬ್ದಾರಿ ನಿಭಾಯಿಸಿ

ವಿಪಕ್ಷ ಮುಖಂಡರ ವಿರುದ್ಧ ಸಂಸದ ಮುನಿಸ್ವಾಮಿ ವಾಗ್ದಾಳಿ
Last Updated 16 ಏಪ್ರಿಲ್ 2021, 14:12 IST
ಅಕ್ಷರ ಗಾತ್ರ

ಕೋಲಾರ: ‘ವಿಪಕ್ಷಗಳ ಮುಖಂಡರು ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ವಿನಾಕಾರಣ ಸರ್ಕಾರವನ್ನು ಟೀಕಿಸುವುದನ್ನು ಬಿಟ್ಟು ತಮ್ಮ ಜವಾಬ್ದಾರಿ ಸಮರ್ಪಕವಾಗಿ ನಿಭಾಯಿಸಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿ ವಾಗ್ದಾಳಿ ನಡೆಸಿದರು.

ತಮ್ಮ ಹುಟ್ಟು ಹಬ್ಬದ ಅಂಗವಾಗಿ ನಗರದ ಹೊರವಲಯದ ಅಂತರಗಂಗೆ ಬೆಟ್ಟದಲ್ಲಿ ಪ್ರಾಣಿಗಳಿಗೆ ಹಣ್ಣು-ತರಕಾರಿ ಹಂಚಿ ನೀರಿನ ಸೌಲಭ್ಯ ಕಲ್ಪಿಸಿ ಮಾತನಾಡಿ, ‘ವಿಪಕ್ಷಗಳ ಮುಖಂಡರು ಸರ್ಕಾರ ಕೋವಿಡ್‌ ನಿಯಂತ್ರಿಸಬೇಕು ಅಥವಾ ಬೇರೊಬ್ಬರೂ ನಿಯಂತ್ರಣ ಮಾಡಬೇಕೆಂದು ಟೀಕಿಸುವುದನ್ನು ಬಿಟ್ಟು ಪಕ್ಷಾತೀತವಾಗಿ ಚಿಂತಿಸಿ ಕೈಲಾಗುವ ಕೆಲಸ ಮಾಡಬೇಕು’ ಎಂದು ಹೇಳಿದರು.

‘ರಾಜಕೀಯ ಬದಿಗಿಟ್ಟು ಸಮಾಜಕ್ಕೆ ನಾವು ಏನು ಮಾಡಿದ್ದೇವೆ, ಏನು ಮಾಡಬೇಕೆಂಬ ಬಗ್ಗೆ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಚಿಂತಿಸಬೇಕು. ದೇಶದೆಲ್ಲೆಡೆ ಕೋವಿಡ್‌ 2ನೇ ಅಲೆ ಆರಂಭವಾಗಿದ್ದು, ಜನರು ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಮತ್ತು ಆಗಾಗ್ಗೆ ಸ್ಯಾನಿಟೈಸರ್ ಬಳಕೆ ಮಾಡಬೇಕು. ಸಾರ್ವಜನಿಕ ಸ್ಥಳಗಳು, ಸಭೆ ಸಮಾರಂಭಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು. ಇದು ನಾಗರೀಕರ ಜವಾಬ್ದಾರಿ’ ಎಂದರು.

‘ಹಿಂದಿನ ವರ್ಷ ಲಾಕ್‌ಡೌನ್‌ ಘೋಷಣೆಯಾಗಿದ್ದ ಸಂದರ್ಭದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದೆಲ್ಲೆಡೆ ಆಹಾರ ಸಾಮಗ್ರಿಗಳ ಕಿಟ್‌, ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ವಿತರಿಸಲಾಗಿತ್ತು. ಅದೇ ರೀತಿ ಪಕ್ಷದ ಕಾರ್ಯಕರ್ತರು ಈಗಲೂ ಕೊರೊನಾ ಸಂಬಂಧ ಜಾಗೃತಿ ಕೆಲಸಗಳನ್ನು ಮಾಡಬೇಕು’ ಎಂದು ಸಲಹೆ ನೀಡಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿ ಬಡವರು, ಕಾರ್ಮಿಕರು, ಚಾಲಕರಿಗೆ ಹಣ ನೀಡಿವೆ. ಕೋವಿಡ್‌ 2ನೇ ಅಲೆಯಲ್ಲಿ ಹೆಚ್ಚು ಸಾವು ನೋವು ಸಂಭವಿಸದಂತೆ ತಡೆದು ಜನ ನೆಮ್ಮದಿಯಿಂದ ಜೀವನ ಸಾಗಿಸಲು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಸೋಂಕು ಹೆಚ್ಚಳ: ‘ರಾಜ್ಯದ 8 ಜಿಲ್ಲೆಗಳಲ್ಲಿ ಈಗಾಗಲೇ ರಾತ್ರಿ ಕರ್ಫ್ಯೂ ಜಾರಿಯಾಗಿದೆ. ಕೋಲಾರ ಜಿಲ್ಲೆಯಲ್ಲಿ 491 ಮಂದಿ ಸಕ್ರಿಯ ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೂರ್ನಾಲ್ಕು ದಿನದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸುತ್ತೇವೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ ಮುಂದೆ ಕೊರೊನಾ ಸೋಂಕಿನ ಪ್ರಕರಣ ಹೆಚ್ಚಾದರೆ ಎಲ್ಲಾ ಇಲಾಖೆಗಳನ್ನು ಒಗ್ಗೂಡಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಸರ್ಕಾರ ಜತೆ ಕೈಜೋಡಿಸಿದರೆ ಮಾತ್ರ ಮನುಕುಲ ಕೋವಿಡ್‌ ಗಂಢಾಂತರದಿಂದ ಪಾರಾಗಬಹುದು’ ಎಂದು ಕಿವಿಮಾತು ಹೇಳಿದರು.

‘ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಅಂತರಗಂಗೆ ಬೆಟ್ಟದಲ್ಲಿನ ಪ್ರಾಣಿಗಳಿಗೆ ನೀರು, ಹಣ್ಣು, -ತರಕಾರಿ ನೀಡುತ್ತೇವೆ. ಅಂತರಗಂಗೆ ಬೆಟ್ಟದಲ್ಲಿ ಸಾವಿರಾರು ಕೋತಿಗಳಿದ್ದು, ಬೇಸಿಗೆ ಕಾರಣಕ್ಕೆ ಅವುಗಳಿಗೆ ಆಹಾರದ ಕೊರತೆ ಎದುರಾಗಿದೆ. ಹೀಗಾಗಿ ಸ್ಥಳೀಯರು ಬೆಟ್ಟಕ್ಕೆ ಬರುವಾಗ ತರಕಾರಿ, ಹಣ್ಣು ತಂದುಕೊಟ್ಟರೆ ಅನುಕೂಲವಾಗುತ್ತದೆ. ಪ್ರಾಣಿ ಪಕ್ಷಿಗಳನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ’ ಎಂದರು.

ನಗರದ ಕೋಲಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಂಸದರು ಮಹಿಳೆಯರಿಗೆ ಪ್ರಸಾದ ಅರಿಶಿನ -ಕುಂಕುಮ, ಎಲೆ ಅಡಿಕೆ ವಿತರಿಸಿದರು. ಉಪ ವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ಶೋಭಿತಾ, ನಗರಸಭೆ ಆಯುಕ್ತ ಶ್ರೀಕಾಂತ್‌, ವಿವಿಧ ಇಲಾಖೆ ಅಧಿಕಾರಿಗಳು, ಬಿಜೆಪಿ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT