ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನ ಮಡಿಲಲ್ಲಿ ಜೀವ ಪಡೆದ ‘ಗೊಟ್ಟಿಗಡ್ಡೆ’

ಶ್ರೀನಿವಾಸಪುರ: ತಾಲ್ಲೂಕಿನ ಕೆರೆಗಳಿಗೆ ಜೀವಕಳೆ
Last Updated 26 ಸೆಪ್ಟೆಂಬರ್ 2020, 2:08 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ಕೆರೆಗಳಿಗೆ ಮಳೆ ನೀರು ಹರಿದು ಬರುವುದರೊಂದಿಗೆ ಗೊಟ್ಟಿಗಡ್ಡೆ ಜೀವ ಪಡೆದಿದೆ. ಇದರಿಂದ ಗ್ರಾಮೀಣ ಪ್ರದೇಶದ ಗೊಟ್ಟಿಗಡ್ಡೆ ಪ್ರಿಯರು ಸಂತಸಗೊಂಡಿದ್ದಾರೆ.

ಕೆರೆಯೆಂದರೆ ಬರಿ ನೀರೇ ಅಲ್ಲ. ಕೆರೆ ಉತ್ಪನ್ನಗಳಾದ ಮೀನು, ಏಡಿ, ಸಿಗಡಿಯ ಜತೆಗೆ, ಮೀನು ಸೊಪ್ಪು ಹಾಗೂ ಗೊಟ್ಟಿಗಡ್ಡೆ ಸಿಗುತ್ತದೆ. ಕೆರೆ ಸಮೀಪದ ಗ್ರಾಮಸ್ಥರು ಈ ಉತ್ಪನ್ನಗಳನ್ನು ಸಂಗ್ರಹಿಸಿ ತಿಂದು ಖುಷಿ ಪಡುತ್ತಾರೆ. ಹೆಚ್ಚಾಗಿ ಸಿಗುವ ಕಾಲದಲ್ಲಿ ನೆಂಟರಿಷ್ಟರಿಗೂ ಕಳುಹಿಸಿಕೊಡುವುದುಂಟು.

ತಾಲ್ಲೂಕಿನ ಕೆರೆಗಳಲ್ಲಿ ಹೂಳು ತುಂಬಿ, ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಳೆದುಕೊಂಡ ಮೇಲೆ, ಕೆರೆ ಉತ್ಪನ್ನಗಳು ಅಪರೂಪವಾದವು. ಮಳೆ ಸುರಿಯುವ ಪ್ರಮಾಣ ಕುಸಿದಂತೆ ಹೊಸ ತಲೆಮಾರಿನ ಜನರು ಕೆರೆ ಉತ್ಪನ್ನಗಳನ್ನು ಮರೆತುಬಿಟ್ಟಿದ್ದರು. ಆದರೆ ಈ ಸಲ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಅದರಲ್ಲೂ ತಾಲ್ಲೂಕಿನ ಉತ್ತರ ಭಾಗದ ಕೆರೆಗಳು ತುಂಬಿವೆ. ಹಾಗಾಗಿ ಕೆರೆಗಳಿಗೆ ಹಿಂದಿನ ವೈಭವ ಮತ್ತೆ ಬಂದಿದೆ.

ತುಂಬಿದ ಕೆರೆಗಳಲ್ಲಿ ನಾಟಿ ಮೀನು ಉತ್ಪತ್ತಿ ತಡವಾದರೂ, ಗೊಟ್ಟಿಗಡ್ಡೆ ಪೈರು ಬೆಳೆದು ನೀರಿನ ಮೇಲೆ ತೇಲುತ್ತಿದೆ. ಕೆಲವು ಕಡೆಗಳಲ್ಲಿ ಪೈರಿನಲ್ಲಿ ಬಿಳಿ ಹೂಗಳು ಕಾಣಿಸಿಕೊಂಡು ಕೆರೆಗೆ ವಿಶೇಷ ಮೆರುಗು ನೀಡಿವೆ. ಗ್ರಾಮೀಣ ಪ್ರದೇಶದ ಹಿರಿಯ ತಲೆಮಾರಿಗೆ ಗೊಟ್ಟಿಗಡ್ಡೆ ಸಾರೆಂದರೆ ಇಷ್ಟ. ಹಾಗಾಗಿ ಗೊಟ್ಟಿಗಡ್ಡೆಯನ್ನು ಕಿತ್ತುತಂದು, ಚೆನ್ನಾಗಿ ತೊಳೆದು, ಹೊಟ್ಟು ಬಿಡಿಸಿ, ಹುರುಳಿಯೊಂದಿಗೆ ಸಾರು ಮಾಡಿ ಮುದ್ದೆಯೊಂದಿಗೆ ಸವಿಯುತ್ತಾರೆ.

‘ಗೊಟ್ಟಿಗಡ್ಡೆ ಸಾಂಬಾರಾದರೆ, ಇನ್ನೂ ಎರಡು ತುತ್ತು ಹೆಚ್ಚಾಗಿಯೇ ಹೊಟ್ಟೆ ಸೇರುತ್ತದೆ. ಮೀನು ಸೊಪ್ಪಿನ ಬಸ್ಸಾರಿನ ರುಚಿಯ ಮೇಲೆ ಯಾವುದೂ ಕಟ್ಟುವುದಿಲ್ಲ’ ಎನ್ನುತ್ತಾರೆ ಕೃಷಿಕ ಮಹಿಳೆ ಸೀತಮ್ಮ.

ಈಗ ನೈಸರ್ಗಿಕವಾಗಿ ದೊರೆಯುವ ಕಿರು ಹಣ್ಣುಗಳು, ಅಣಬೆ, ಮಂಗರವಳ್ಳಿ ಮುಂತಾದವುಗಳಿಗೆ ಆರ್ಥಿಕ ಮೌಲ್ಯ ಬಂದಿದೆ. ಕೆಲವರು ಇಂಥ ಅಪರೂಪದ ಪದಾರ್ಥಗಳನ್ನು ಸಂಗ್ರಹಿಸಿ ಮಾರುಕಟ್ಟೆಗೆ ಕೊಂಡೊಯ್ದು ಮಾರಿ ನಾಲ್ಕು ಕಾಸು ಸಂಪಾದಿಸುತ್ತಾರೆ. ಹಾಗೆಯೇ ಈಗ ಗೊಟ್ಟಿಗಡ್ಡೆಯೂ ಮಾರಾಟದ ಸರಕಾಗಿದೆ. ಕೆಲವರು, ಕೆರೆಯಲ್ಲಿ ಬೆಳೆಯುವ ಈ ಗಡ್ಡೆಯನ್ನು ಕಿತ್ತು, ಚೆನ್ನಾಗಿ ತೊಳೆದು ಮಾರಾಟ ಮಾಡುವುದುಂಟು ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT