ಭಾನುವಾರ, ಆಗಸ್ಟ್ 25, 2019
28 °C

ಜಿಲ್ಲೆಯಲ್ಲಿ ಕುಷ್ಠ ರೋಗ ಪತ್ತೆ ಅಭಿಯಾನ

Published:
Updated:

ಕೋಲಾರ: ‘ರಾಷ್ಟ್ರೀಯ ಕುಷ್ಠ ರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಕುಷ್ಠ ರೋಗ ಪ್ರಕರಣ ಪತ್ತೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹೇಳಿದರು.

ಕುಷ್ಠ ರೋಗ ಪ್ರಕರಣ ಪತ್ತೆ ಅಭಿಯಾನ ಸಂಬಂಧ ಇಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿ, ‘2025ರೊಳಗೆ ಭಾರತವು ಕುಷ್ಠ ರೋಗ ನಿರ್ಮೂಲನಾ ದೇಶವಾಗಬೇಕು’ ಎಂದು ತಿಳಿಸಿದರು.

‘ಸೆ.5ರಿಂದ 14 ದಿನಗಳ ಕಾಲ ಜಿಲ್ಲೆಯಲ್ಲಿ ಕುಷ್ಠ ರೋಗ ಪ್ರಕರಣ ಪತ್ತೆ ಅಭಿಯಾನ ನಡೆಯಲಿದೆ. ಸಾರ್ವಜನಿಕರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಹಕಾರ ನೀಡಿ ಅಭಿಯಾನ ಯಶಸ್ವಿಗೊಳಿಸಬೇಕು. ಕುಷ್ಠ ರೋಗವು ಸಾಂಕ್ರಾಮಿಕ ಕಾಯಿಲೆಯಾಗದ್ದು, ಆರಂಭದಲ್ಲಿ ಗುರುತಿಸಿ ನಿವಾರಣೆ ಮಾಡಬಹುದು. ಈ ಕಾಯಿಲೆಯ ಲಕ್ಷಣ ಕಂಡುಬಂದಲ್ಲಿ ಆಸ್ಪತ್ರೆಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದರು.

‘ಕುಷ್ಠ ರೋಗ ಪ್ರಕರಣ ಪತ್ತೆ ಅಭಿಯಾನದಡಿ ರಾಜ್ಯದ 19 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಪೈಕಿ ಕೋಲಾರ ಜಿಲ್ಲೆಯೂ ಒಂದಾಗಿದೆ. ಜಿಲ್ಲೆಯಲ್ಲಿ ಈ ಹಿಂದೆ ಕುಷ್ಠ ರೋಗ ಪ್ರಕರಣಗಳ ಸಂಖ್ಯೆ ಹೆಚ್ಚಿತ್ತು. ಇದೀಗ ಕಡಿಮೆಯಾಗಿದೆ’ ಎಂದು ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಎನ್.ನಾರಾಯಣಸ್ವಾಮಿ ವಿವರಿಸಿದರು.

‘ಕುಷ್ಠ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿಲಾಗುವುದು. ಚರ್ಮದ ಮೇಲೆ ತಿಳಿ ಬಿಳಿ ತಾಮ್ರ ಬಣ್ಣದ ಮಚ್ಚೆ ಕಂಡುಬಂದು ಅವುಗಳಿಗೆ ಸ್ಪರ್ಶ ಜ್ಞಾನ ಇಲ್ಲದೆ ಇರುವುದು ಈ ರೋಗದ ಪ್ರಮುಖ ಲಕ್ಷಣ. ಈ ಕಾಯಿಲೆಯಿಂದ ಬಳಲುತ್ತಿರುವವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

ಸಹಕಾರ ನೀಡಿ: ‘ಅಭಿಯಾನದಡಿ ಮನೆ ಮನೆಗೆ ಭೇಟಿ ನೀಡಿ ಕುಟುಂಬದ ಎಲ್ಲಾ ಸದಸ್ಯರನ್ನೂ ಪರೀಕ್ಷಿಸಲಾಗುವುದು. ಇದಕ್ಕೆ ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇವರು ಮನೆಗಳ ಬಳಿ ಬಂದಾಗ ವೈದ್ಯಕೀಯ ತಪಾಸಣೆಗೆ ಸಹಕಾರ ನೀಡಬೇಕು’ ಎಂದು ಕೋರಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ ಹಾಜರಿದ್ದರು.

Post Comments (+)