ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಪ್ರಜ್ಞೆ ಹೊಸತನ ಕಾಣಲಿ: ಕೋಟಿಗಾನಹಳ್ಳಿ ರಾಮಯ್ಯ

Last Updated 16 ಆಗಸ್ಟ್ 2019, 13:53 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯಮಟ್ಟದ ದಲಿತ ಸಾಹಿತ್ಯ ಸಮ್ಮೇಳನವು ಇಲ್ಲಿ ನೆಲೆಗೊಂಡಿರುವ ನೆಲದ ಹೆಜ್ಜೆ ಗುರುತುಗಳನ್ನು ನಿಷ್ಠೆಯಾಗಿ ಗುರುತಿಸುವ ಸಮ್ಮೇಳನವಾಗಬೇಕು’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಆಶಿಸಿದರು.

ತಾಲ್ಲೂಕಿನ ತೇರಹಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಸಮ್ಮೇಳನದಲ್ಲಿ ಸಮಕಾಲೀನ ಪರಂಪರೆಯ ಗುರುತುಗಳ ಜತೆಗೆ ಪ್ರಾದೇಶಿಕ ವೈಶಿಷ್ಟ್ಯತೆ ಕಾಣಬೇಕಾಗಿದೆ’ ಎಂದು ಹೇಳಿದರು.

‘ದಶಕಗಳ ಹಿಂದೆ ದಲಿತರ ಮೇಲೆ ನಡೆದಿರುವ ಘಟನೆ ಆಧಾರದಲ್ಲಿ ಪ್ರಥಮ ಸಮ್ಮೇಳನ ನಡೆಯಬೇಕು. ಆದರೆ, ಅಂತಹ ವಾತಾವರಣದಲ್ಲಿ ಸಮ್ಮೇಳನ ನಡೆಯುತ್ತಿಲ್ಲ. ಹುಣಸಿಕೋಟೆಯ ಅನುಸೂಯಮ್ಮ, ಕಂಬಾಲಪಲ್ಲಿ ದಲಿತರನ್ನು ಸುಟ್ಟ ಘಟನೆ ಆಧಾರದಲ್ಲಿ ಸಮ್ಮೇಳನ ನಡೆಯುತ್ತಿಲ್ಲ. ಆಗ ಹತ್ಯೆಯಾದವರ ಚಿತಾಭಸ್ಮ ಮರು ಭೇಟಿಯಾಗುವಂತೆ ಸಮ್ಮೇಳನ ನಡೆದಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.

‘ದಲಿತ ಸಾಹಿತ್ಯ ಸಮ್ಮೇಳನವೆಂದು ಪ್ರತ್ಯೇಕವಾಗಿ ಮೀಸಲಿಟ್ಟರೆ ಜನರ ಭಾವನೆಯಲ್ಲಿ ದಲಿತರೆಂಬ ಪ್ರತ್ಯೇಕತೆಯ ಕೂಗು ಹಾಗೆಯೇ ಉಳಿಯುತ್ತದೆ. ದಲಿತರು ಪ್ರಸ್ತುತ ಕಾಲಘಟ್ಟದಲ್ಲಿ ಮುಖ್ಯವಾಹಿನಿಯಲ್ಲಿ ಇರಬೇಕು ಎಂಬುದು ಸಮ್ಮೇಳನದ ಮುಖ್ಯ ಆಶಯವಾಗಬೇಕು’ ಎಂದರು.

‘ದಲಿತ ಸಾಹಿತ್ಯ ಸಮ್ಮೇಳನವನ್ನು ಪ್ರತ್ಯೇಕವಾಗಿ ಸಮ್ಮೇಳನದಂತೆ ನಡೆಸದೆ ಪ್ರತಿ ವರ್ಷ ನಡೆಯುವ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲೇ ನಡೆಸುವಂತಾಗಬೇಕು. ಇದು ದಲಿತರ ಪ್ರಥಮ ರಾಜ್ಯ ಸಮ್ಮೇಳನ ಎಂದರೂ ದೊಡ್ಡ ಶ್ರದ್ಧೆಯ ರೀತಿಯಲ್ಲಿ ನಡೆಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೋಲಾರ ಜಿಲ್ಲೆಯನ್ನು ಚಳವಳಿಗಳ ತವರೂರು ಎಂದು ಕರೆಯಲಾಗಿದೆ. ಅಂತಹ ಚಳವಳಿಗೆ ಋಣ ತೀರಿಸುವಂತಹ ಸಮ್ಮೇಳನ ಇದಾಗಿಲ್ಲ. ಚಳವಳಿಗಳ ದಲಿತ ಪ್ರಜ್ಞೆಯ ಆರಂಭಿಕ ನೆಲೆಗಳು ಎಚ್ಚರದೊಂದಿಗೆ ಹೊಸತನ ಕಾಣಬೇಕಾಗಿದೆ. ಪ್ರಸ್ತುತ ಕಾಲಘಟ್ಟದ ಸಮಾಜದಲ್ಲಿ ದಲಿತ ಪ್ರಜ್ಞೆಯ ಸಾಹಿತ್ಯ ಪ್ರಕಾರಗಳು ಸಮ್ಮೇಳನದಲ್ಲಿ ಕಾಣುವಂತಾಗಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT