ಸೋಮವಾರ, ಸೆಪ್ಟೆಂಬರ್ 20, 2021
30 °C
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಮಹೇಶ್‌ ಜೋಶಿ ಆಶಯ

ಗಡಿ ಜಿಲ್ಲೆಯಲ್ಲಿ ಕನ್ನಡ ಬದುಕಿ ಬೆಳೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಗಡಿ ಜಿಲ್ಲೆ ಕೋಲಾರದಲ್ಲಿ ಕನ್ನಡ ಬದುಕಬೇಕು ಮತ್ತು ಬೆಳೆಯಬೇಕು. ಜಿಲ್ಲೆಯಲ್ಲಿ ಸಾಹಿತ್ಯದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡತನ ಗಟ್ಟಿಗೊಳಿಸುವ ಗುರಿಯಿದೆ’ ಎಂದು ದೂರದರ್ಶನದ ವಿಶ್ರಾಂತ ಹೆಚ್ಚುವರಿ ಮಹಾ ನಿರ್ದೇಶಕ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಮಹೇಶ್‌ ಜೋಶಿ ಹೇಳಿದರು.

ಇಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮತದಾರರನ್ನು ಭೇಟಿಯಾಗಿ ಮತ ಯಾಚಿಸಿ ಮಾತನಾಡಿ, ‘ಚುನಾವಣೆಯಲ್ಲಿ ನಾನು ಗೆದ್ದು ಅಧ್ಯಕ್ಷನಾದರೆ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ’ ಎಂದು ಭರವಸೆ ನೀಡಿದರು.

‘ಹಿಂದೆ ದೂರದರ್ಶನವನ್ನು ಜನರ ಸಮೀಪ ದರ್ಶನವಾಗಿ ಮಾಡಿದ್ದೇನೆ. ಅದೇ ರೀತಿ ಸಾಹಿತ್ಯ ಪರಿಷತ್ತನ್ನು ಜನರ ಪರಿಷತ್ತಾಗಿ ಮಾಡುವ ಆಲೋಚನೆಯಿದೆ. ಹಳ್ಳಿ ಹಳ್ಳಿಗೆ ಪಾದಯಾತ್ರೆ ಮಾಡಿ ಕನ್ನಡ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಕೆಲಸ ಮಾಡುತ್ತೇನೆ. ಗ್ರಾಮೀಣ ಭಾಗದ ಹಿರಿಯರ ಜತೆಗೆ ಸಾಹಿತ್ಯ ಸಂವಾದ ಏರ್ಪಡಿಸಿ ಗ್ರಾಮ ಮಟ್ಟದಿಂದ ಪರಿಷತ್ತಿನ ಬೇರು ಗಟ್ಟಿಗೊಳಿಸುತ್ತೇವೆ’ ಎಂದರು.

‘ಚುನಾವಣೆಯಲ್ಲಿ ಗೆದ್ದರೆ ಜಿಲ್ಲೆಯ ಸಾಹಿತಿಗಳು, ಸಂಘ ಸಂಸ್ಥೆಗಳ ಸಹಕಾರದಿಂದ ಕನ್ನಡಪರ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸುತ್ತೇವೆ. ನಾಡು, ನುಡಿ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸುತ್ತೇನೆ’ ಎಂದು ತಿಳಿಸಿದರು.

‘ಮಹೇಶ್‌ ಜೋಶಿ ಅವರು ಚಂದನ ವಾಹಿನಿಯಲ್ಲಿ ನಡೆಸಿಕೊಡುತ್ತಿದ್ದ ಕಾರ್ಯಕ್ರಮಗಳು ಮನೆ ಮಾತಾಗಿದ್ದವು. ಅವರು ಕನ್ನಡ ಭಾಷೆ ಕಟ್ಟಿ ಬೆಳೆಸಲು ರೂಪಿಸಿದ ಕಾರ್ಯಕ್ರಮಗಳು ಇಂದಿಗೂ ಪ್ರಸಾರವಾಗುತ್ತಿವೆ. ಮತದಾರರು ಅವರ ಸೇವೆ ಗುರುತಿಸಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು’ ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯನಿಧಿ ಪ್ರಮುಖ್ ಆರ್.ನಾಗೇಂದ್ರಪ್ರಸಾದ್‌ ಮನವಿ ಮಾಡಿದರು.

ಕನ್ನಡ ಗಟ್ಟಿಗೊಂಡಿದೆ: ‘ಜಿಲ್ಲೆಯಲ್ಲಿ ನಡೆಯುವ ಕನ್ನಡ ಕಾರ್ಯಕ್ರಮಗಳು ರಾಜ್ಯದ ಗಮನ ಸೆಳೆದಿವೆ. ಕನ್ನಡಕ್ಕಾಗಿ ದುಡಿದವರು ಅನೇಕ ಮಹನೀಯರು ಜಿಲ್ಲೆಯಲ್ಲಿ ಇದ್ದಾರೆ. ಅವರ ಸ್ಫೂರ್ತಿಯಿಂದಲೇ ಜಿಲ್ಲೆಯಲ್ಲಿ ಕನ್ನಡ ಭಾಷೆ ಗಟ್ಟಿಗೊಂಡಿದೆ’ ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಅಭಿಪ್ರಾಯಪಟ್ಟರು.

ವೈದ್ಯ ಡಾ.ಶಿವಣ್ಣ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಮಹೇಶ್, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾದ ಮಮತಾ, ಅಪ್ಪಿ ನಾರಾಯಣಸ್ವಾಮಿ, ಸಾ.ಮಾ.ಅನಿಲ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು