ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಸೈಟಿ ಆರ್ಥಿಕ ಶಕ್ತಿಯಾಗಿ ಬೆಳೆಯಲಿ

Last Updated 23 ಫೆಬ್ರುವರಿ 2021, 15:36 IST
ಅಕ್ಷರ ಗಾತ್ರ

ಕೋಲಾರ: ‘ಸೊಸೈಟಿಗಳು ಪಡಿತರ ವಿತರಣೆಗೆ ಸೀಮಿತವಾಗದೆ ಗ್ರಾಮೀಣ ಭಾಗದ ರೈತರು, ಬಡವರು, ಮಹಿಳೆಯರಿಗೆ ಸಾಲ ನೀಡುವ ಮೂಲಕ ಆರ್ಥಿಕ ಶಕ್ತಿಯಾಗಿ ಬೆಳೆಯಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಕಿವಿಮಾತು ಹೇಳಿದರು.

ತಾಲ್ಲೂಕಿನ ವಕ್ಕಲೇರಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಗೆ ಆಯ್ಕೆಯಾಗಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಮಂಗಳವಾರ ಅಭಿನಂದಿಸಿ ಮಾತನಾಡಿದರು.

‘ರೈತರು ಮತ್ತು ಮಹಿಳೆಯರ ಪರ ಕಾಳಜಿ, ಮನೆಬಾಗಿಲಿಗೆ ಸಾಲ ತಲುಪಿಸುವ ಬದ್ಧತೆಯಿಂದಾಗಿ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗುತ್ತಾ ಜನರ ನಂಬಿಕೆ ಉಳಿಸಿಕೊಂಡಿದೆ. ಜನರು ವಾಣಿಜ್ಯ ಬ್ಯಾಂಕ್‌ಗಳ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ಡಿಸಿಸಿ ಬ್ಯಾಂಕ್ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಮನೆ ಮಾತಾಗಿದೆ. ಬೆಳೆ ಸಾಲ, ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡಿಕೆ ಜತೆಗೆ ಜನರ ಮನೆ ಬಾಗಿಲಿಗೆ ಮೈಕ್ರೋ ಎಟಿಎಂ, ಸಂಚಾರ ಬ್ಯಾಂಕಿಂಗ್ ಸೇವೆ ಕಲ್ಪಿಸುತ್ತಿದೆ. ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್ ಸೇವೆ ಧ್ಯೇಯದಡಿ ಕೆಲಸ ಮಾಡುತ್ತಿದೆ. ಇದಕ್ಕೆ ಸೊಸೈಟಿಗಳು ಸಹಕಾರ ನೀಡಬೇಕು’ ಎಂದು ಕೋರಿದರು.

‘ಮೊಬೈಲ್ ಬ್ಯಾಂಕಿಂಗ್‌ ಸೇವೆ ವಾಹನಗಳು ಗ್ರಾಮಗಳಿಗೆ ಬರುತ್ತವೆ. ಜನ ಅಲ್ಲಿಯೇ ಹಣ ಡ್ರಾ ಮತ್ತು ಸಂದಾಯ ಮಾಡಬಹುದು. ರೈತರು ಸಹಕಾರಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಮಾಡಿಸಬೇಕು. ಸೊಸೈಟಿ ವ್ಯಾಪ್ತಿಗೆ ಬರುವ ಹಳ್ಳಿಗಳ ಹಾಲು ಸಹಕಾರ ಸಂಘಗಳ ವಹಿವಾಟು ಬ್ಯಾಂಕ್‌ನಲ್ಲಿ ನಡೆಸುವಂತಾಗಬೇಕು’ ಎಂದರು.

ಠೇವಣಿ ಸಂಗ್ರಹಿಸಿ: ‘ಕಿಸಾನ್ ಲಕ್ಷ್ಮೀ ಬಾಂಡ್ ಯೋಜನೆಯಡಿ ಮಹಿಳೆಯರಿಂದ ಠೇವಣಿ ಸಂಗ್ರಹಿಸಬೇಕು. ಮಾರ್ಚ್ ತಿಂಗಳ ಅಂತ್ಯದೊಳಗೆ ಠೇವಣಿ ಸಂಗ್ರಹ ಗುರಿ ಸಾಧನೆ ಆಗಬೇಕು. ಠೇವಣಿ ಸಂಗ್ರಹದಿಂದ ಸರ್ಕಾರದಿಂದ ಹೆಚ್ಚಿನ ಸೌಕರ್ಯ ಪಡೆದುಕೊಳ್ಳಲು ಸಹಾಯವಾಗುತ್ತದೆ’ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ, ವಕ್ಕಲೇರಿ ಸೊಸೈಟಿ ಅಧ್ಯಕ್ಷ ಪಾಲಾಕ್ಷಗೌಡ, ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕರಾದ ಎಂ.ಆನಂದ್‌ಕುಮಾರ್, ಚಂದ್ರೇಗೌಡ, ಚಿದಾನಂದಗೌಡ, ವೆಂಕಟಗಿರಿಯಪ್ಪ, ರಮೇಶ್, ಅಣ್ಣಿಹಳ್ಳಿ ಸೊಟೈಟಿ ಅಧ್ಯಕ್ಷ ನಾಗರಾಜ್, ಪ್ರಗತಿಪರ ರೈತ ಚಂದ್ರಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT