ಮಂಗಳವಾರ, ನವೆಂಬರ್ 24, 2020
19 °C
ಶಾಸಕ ನಂಜೇಗೌಡರಿಗೆ ಸಂಸದ ಮುನಿಸ್ವಾಮಿ ಪ್ರತಿ ಸವಾಲು

ಆಮಿಷ: ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ:ನಂಜೇಗೌಡರಿಗೆ ಸಂಸದ ಮುನಿಸ್ವಾಮಿ ಪ್ರತಿ ಸವಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮಾಲೂರು ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಪಕ್ಷೇತರ ಸದಸ್ಯರಿಗೆ ಹಣದ ಆಮಿಷವೊಡ್ಡಿಲ್ಲ ಎಂದು ಹೇಳುತ್ತಿರುವ ಶಾಸಕ ನಂಜೇಗೌಡರು ಸತ್ಯವಂತರಾಗಿದ್ದರೆ ಧರ್ಮಸ್ಥಳಕ್ಕೆ ಬಂದು ಮಂಜುನಾಥಸ್ವಾಮಿ ಮೇಲೆ ಪ್ರಮಾಣ ಮಾಡಲಿ’ ಎಂದು ಸಂಸದ ಎಸ್‌.ಮುನಿಸ್ವಾಮಿ ಪ್ರತಿ ಸವಾಲು ಹಾಕಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಂಜೇಗೌಡರ ರಾಜೀನಾಮೆ ಸವಾಲು ಸ್ವೀಕರಿಸಿದ್ದೇನೆ. ಅವರ ವಿರುದ್ಧ ಮಾಡಿರುವ ಆಮಿಷದ ಆರೋಪಕ್ಕೆ ಬದ್ಧವಾಗಿದ್ದೇನೆ. ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಮಾತನಾಡಿರುವ ನಂಜೇಗೌಡರಿಗೆ ನೈತಿಕತೆಯಿದ್ದರೆ ಧರ್ಮಸ್ಥಳಕ್ಕೆ ಬಂದು ದೇವರ ಮೇಲೆ ಆಣೆ ಮಾಡಲಿ’ ಎಂದು ತಿರುಗೇಟು ನೀಡಿದರು.

ಅಧಿಕಾರಕ್ಕಾಗಿ ನಕಲಿ ಸಿ.ಡಿ ಸೃಷ್ಟಿಸುವ ಅಗತ್ಯ ಬಿಜೆಪಿಗಿಲ್ಲ. ನಂಜೇಗೌಡರು ಬಿಜೆಪಿ ಮತ್ತು ಪಕ್ಷೇತರ ಸದಸ್ಯರಿಗೆ ಕರೆ ಮಾಡಿ ಹಣದ ಆಮಿಷವೊಡ್ಡಿರುವುದಕ್ಕೆ ಸಂಬಂಧಪಟ್ಟ ಸಂಭಾಷಣೆಯನ್ನು ಧ್ವನಿ ಮುದ್ರಿಸಲಾಗಿದೆ. ದೂರಿನ ಜತೆಗೆ ಚುನಾವಣಾಧಿಕಾರಿಗೆ ಸಲ್ಲಿಸಿರುವ ಸಿ.ಡಿಯಲ್ಲಿ ಇರುವುದು ನಂಜೇಗೌಡರ ಧ್ವನಿ’ ಎಂದು ಸ್ಪಷ್ಟಪಡಿಸಿದರು.

‘ಪಕ್ಷೇತರರಾಗಿ ಗೆದ್ದಿರುವ ಸದಸ್ಯರು ಈ ಹಿಂದೆ ಬಿಜೆಪಿಯಲ್ಲಿದ್ದರು. ಅವರು ಚುನಾವಣೆ ವೇಳೆ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದಾರೆ. ಅವರ ಒಲವು ಬಿಜೆಪಿ ಪರವಾಗಿದೆ. ಆದರೆ, ನಂಜೇಗೌಡರು ಅವರನ್ನು ಖರೀದಿಸಿ ಕುದುರೆ ವ್ಯಾಪಾರ ಮಾಡುತ್ತಿದ್ದಾರೆ. ಅವರಿಗೆ ಸ್ವಪಕ್ಷೀಯ ಸದಸ್ಯರ ಮೇಲೆ ನಂಬಿಕೆ ಇಲ್ಲದೆ ರೆಸಾರ್ಟ್‌ಗೆ ಕರೆದುಕೊಂಡು ಹೋಗಿದ್ದಾರೆ’ ಎಂದು ಟೀಕಿಸಿದರು.

‘ಬಿಜೆಪಿಗೆ ಕಾಂಗ್ರೆಸ್‌ ಸದಸ್ಯರ ಬೆಂಬಲದಿಂದ ಪುರಸಭೆಯಲ್ಲಿ ಅಧಿಕಾರ ಹಿಡಿಯುವ ದುರ್ಗತಿ ಬಂದಿಲ್ಲ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಮಾಲೂರು ಪಟ್ಟಣದ ಅಭಿವೃದ್ಧಿಗೆ ನಂಜೇಗೌಡರು ನಯಾ ಪೈಸೆ ಅನುದಾನ ತಂದಿಲ್ಲ. ಶಾಸಕರಾಗಿ ಅವರ ಸಾಧನೆ ಶೂನ್ಯ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು ರೆಸಾರ್ಟ್‌ನಲ್ಲಿ ಮೋಜು ಮಸ್ತಿ ಮಾಡುತ್ತಿರುವ ನಂಜೇಗೌಡರಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ’ ಎಂದು ಕಿಡಿಕಾರಿದರು.

ಬೆದರಿಕೆಗೆ ಹೆದರಲ್ಲ: ‘ಪುರಸಭೆ ಚುನಾವಣೆ ಮುಂದೂಡಿಕೆಯಾದರೆ ಹೋರಾಟ ಮಾಡುವುದಾಗಿ ನಂಜೇಗೌಡರು ಬೆದರಿಕೆ ಹಾಕಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ನಷ್ಟೇ ಬಿಜೆಪಿ ಬಲಷ್ಠವಾಗಿದೆ. ನಾನು ಕೈಗೆ ಬಳೆ ತೊಟ್ಟಿಲ್ಲ. ನಾನು ಸಹ ಇದೇ ಜಿಲ್ಲೆಯ ಮಗ. ನಂಜೇಗೌಡರ ಬೆದರಿಕೆಗೆ ಹೆದರಲ್ಲ. ಸದಸ್ಯರ ಖರೀದಿಗೆ ಮತ್ತು ರೆಸಾರ್ಟ್‌ ವಾಸ್ತವ್ಯಕ್ಕೆ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತಿರುವವರು ಯಾರು ಮತ್ತು ಅದಕ್ಕೆ ಹಣ ಎಲ್ಲಿಂದ ಬಂತು ಎಂಬುದನ್ನು ಶಾಸಕರು ಜನರ ಮುಂದೆ ಹೇಳಲಿ’ ಎಂದು ಸವಾಲು ಹಾಕಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.