ಗುರುವಾರ , ಡಿಸೆಂಬರ್ 5, 2019
20 °C
ಅಂಗವೈಕಲ್ಯ ಶಾಪವಲ್ಲ: ಸಂಸದ ಮುನಿಸ್ವಾಮಿ ಹೇಳಿಕೆ

ಅಂಗವಿಕಲರು ಮುಖ್ಯವಾಹಿನಿಗೆ ಬರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಕೆಲಸ ಮಾಡಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಮಾತನಾಡಿದರು.

‘ಅಧಿಕಾರಿಗಳು ಅಂಗವಿಕಲರಿಗೆ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ಪ್ರತಿ ಇಲಾಖೆಯಲ್ಲಿ ಅಂಗವಿಕಲರಿಗೆ ಶೇ 5ರಷ್ಟು ಅನುದಾನ ಮೀಸಲಿದ್ದು, ಈ ಹಣ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಬೇಕು. ಜಿಲ್ಲೆಯಲ್ಲಿ ೮೭ ಸಾವಿರ ಅಂಗವಿಕಲರಿದ್ದು, ಅಪೌಷ್ಟಿಕತೆ ದೂರ ಮಾಡಲು ಕಾರ್ಯಕ್ರಮ ರೂಪಿಸಬೇಕು’ ಎಂದು ತಿಳಿಸಿದರು.

‘ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗವಿಕಲ ನೌಕರರಿಗೆ ಸಕಾಲಕ್ಕೆ ವೇತನ ನೀಡಬೇಕು. ಕೇಂದ್ರ ಸರ್ಕಾರದಿಂದ ಅಂಗವಿಕಲರ ವಿಶೇಷ ಯೋಜನೆಯಲ್ಲಿ ೧,೧೩೭ ಮಂದಿಗೆ ತ್ರಿಚಕ್ರವಾಹನ, ಧ್ವನಿ ಪೆಟ್ಟಿಗೆ ಸೇರಿದಂತೆ ಹಲವು ಸಲಕರಣೆ ವಿತರಿಸಲಾಗಿದೆ. ಅರ್ಹ ಫಲಾನುಭವಿಗಳು ಸರ್ಕಾರದ ಸವಲತ್ತುಗಳ ಸದುಪಯೋಗ ಪಡೆಯಬೇಕು’ ಎಂದು ಸಲಹೆ ನೀಡಿದರು.

‘ಅಂಗವೈಕಲ್ಯ ಶಾಪವಲ್ಲ. ಮಗು ಅಂಗವಿಕಲವಾಗಿ ಹುಟ್ಟುವುದರಲ್ಲಿ ಪೋಷಕರ ಪಾತ್ರ ಇರುವುದಿಲ್ಲ. ಕಾರಣಾಂತರದಿಂದ ಅಂಗವಿಕಲರಾಗಿ ಹುಟ್ಟುವವರಿಗೆ ಮೋಸ ಮಾಡಬಾರದು. ನಿವೇಶನರಹಿತ ಅಂಗವಿಕಲರು ಹಾಗೂ ವಸತಿರಹಿತರಿಗೆ ಮನೆ ಕಲ್ಪಿಸಲಾಗುವುದು. ಅಂಗವೈಕಲ್ಯ ತಡೆಗೆ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸಬೇಕು’ ಎಂದು ಮನವಿ ಮಾಡಿದರು.

ಸಮಸ್ಯೆ ಪರಿಹಾರ: ‘ಅಂಗವಿಕಲರ ಸಮಸ್ಯೆ ಪರಿಹಾರಕ್ಕೆ ಸಭೆ ನಡೆಸಿ ಅವರಿಗೆ ಸಿಗಬೇಕಾದ ನ್ಯಾಯಯುತ ಹಕ್ಕು ಮತ್ತು ಸೌಲಭ್ಯಗಳನ್ನು ಕಲ್ಪಿಸುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಭರವಸೆ ನೀಡಿದರು.

‘ಐದಾರು ತಿಂಗಳ ಹಿಂದೆ ಅಂಗವಿಕಲರ ಜತೆ ಸಭೆ ನಡೆಸಿ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದೆ. ಆದರೆ, ಕಾರಣಾಂತರದಿಂದ ಸಭೆ ನಡೆಸಲು ಸಾಧ್ಯವಾಗಿಲ್ಲ. ಜಿ.ಪಂ ಅಧ್ಯಕ್ಷನಾಗಿ ಉಳಿದಿರುವ ಅಧಿಕಾರಾವಧಿಯಲ್ಲಿ ಪ್ರತಿ ತಿಂಗಳು ಸಭೆ ನಡೆಸಿ ಸಮಸ್ಯೆ ಬಗ್ಗೆ ಚರ್ಚಿಸಿ ಯಾವುದೇ ಕೊರತೆ ಇಲ್ಲದಂತೆ ನೋಡಿಕೊಳ್ಳುತ್ತೇನೆ. ಸಮಸ್ಯೆಗಳಿದ್ದರೆ ನೇರವಾಗಿ ನನ್ನ ಗಮನಕ್ಕೆ ತನ್ನಿ’ ಎಂದು ಮನವಿ ಮಾಡಿದರು.

ಮೋಸ ಆಗುತ್ತಿದೆ: ‘ಅಂಗವಿಕಲರು ದೈಹಿಕ ನ್ಯೂನತೆ ಹೊಂದಿದ್ದರೆ ನಾವು ಮಾನಸಿಕ ಅಂಗವಿಕಲರು. ಅಂಗವಿಕಲರ ಸಮಸ್ಯೆ ನಿವಾರಣೆಯ ಜವಾಬ್ದಾರಿ ನಮ್ಮದು. ಗ್ರಾಮ ಪುನರ್ವಸತಿ ಕಾರ್ಯಕರ್ತರು (ವಿಆರ್‌ಡಬ್ಲ್ಯೂ) ಮತ್ತು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂಆರ್‌ಡಬ್ಲ್ಯೂ) ಅಂಗವಿಕಲರನ್ನು ಗುರುತಿಸಿ ಸೌಲಭ್ಯ ದೊರಕಿಸಿಕೊಡಬೇಕು. ಆದರೆ, ಅವರಿಂದಲೇ ಮೋಸ ಆಗುತ್ತಿದೆ. ಅಧಿಕಾರಿಗಳು ಈ ಅಕ್ರಮಕ್ಕೆ ಕಡಿವಾಣ ಹಾಕಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಸೂಚಿಸಿದರು.

ಅಂಗವಿಕಲರು ನಾಟಕ, ನೃತ್ಯ ಪ್ರದರ್ಶನ ನೀಡಿದರು. ಜಿ.ಪಂ ಉಪಾಧ್ಯಕ್ಷೆ ಯಶೋದಾ, ಸದಸ್ಯ ಅರವಿಂದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಎಂ.ವೆಂಕಟರಾಮಪ್ಪ, ಕೇಂದ್ರ ಸಲಹಾ ಸಮಿತಿ ಸದಸ್ಯ ಚಂದ್ರಪ್ಪ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)